ADVERTISEMENT

ಹಾವೇರಿ: DJ ಬೇಡ ಎಂದು ಡಿ.ಜೆಗೆ ಮೀಸಲಿಟ್ಟಿದ್ದ ಹಣದಲ್ಲಿ ಹೋಳಿಗೆ ಊಟ ಹಾಕಿಸಿದರು!

ನಾಗೇಂದ್ರನಮಟ್ಟಿ ಯುವಕರ ಮಾದರಿ ನಡೆ | ಸವಣೂರಿನಲ್ಲಿ 14 ಮೂರ್ತಿ ವಿಸರ್ಜನೆ ಬಾಕಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:42 IST
Last Updated 9 ಸೆಪ್ಟೆಂಬರ್ 2025, 2:42 IST
ಹಾವೇರಿ ನಾಗೇಂದ್ರನಮಟ್ಟಿಯ 7ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಸೋಮವಾರ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು
ಹಾವೇರಿ ನಾಗೇಂದ್ರನಮಟ್ಟಿಯ 7ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಸೋಮವಾರ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು   

ಹಾವೇರಿ: ‘ಡಿ.ಜೆ.ಗೆ (ಡಿಸ್ಕ್ ಜಾಕಿ) ಅನುಮತಿ ನೀಡಿಲ್ಲ’ ಎಂಬ ಕಾರಣಕ್ಕೆ ಜಿಲ್ಲೆಯ ಹಲವು ಮಂಡಳಿ ಪದಾಧಿಕಾರಿಗಳು, ಗಣಪತಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೇ ನಾಗೇಂದ್ರನಮಟ್ಟಿಯ ಯುವಕರು, ಡಿ.ಜೆ. ಹಣದಲ್ಲಿ ಜನರಿಗೆ ಹೋಳಿಗೆ ಊಟ ಹಾಕಿಸಿ ಜಾನಪದ ಕಲಾತಂಡಗಳ ಮೂಲಕ ಮೂರ್ತಿ ವಿಸರ್ಜನೆ ಮಾಡಿ ಮಾದರಿಯಾಗಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಡಿ.ಜೆ. ಬಳಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದರು. ಇದರ ಜಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಪೊಲೀಸರು, ‘ಕಡಿಮೆ ಡಿಸೆಬಲ್ ಇರುವ ಎರಡು ಸೌಂಡ್ ಬಾಕ್ಸ್‌ಗಳನ್ನು ಮಾತ್ರ ಬಳಸಬೇಕು. ಡಿ.ಜೆ. ಬಳಸುವಂತಿಲ್ಲ’ ಎಂದು ಖಡಕ್ ಸೂಚನೆ ನೀಡಿದ್ದರು.

ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಸವಣೂರು ಪಟ್ಟಣ ಹಾಗೂ ತಾಲ್ಲೂಕಿನ 25 ಮಂಡಳಿಗಳು, ಡಿ.ಜೆ. ಅನುಮತಿ ಸಿಕ್ಕರಷ್ಟೇ ಗಣಪತಿ ವಿಸರ್ಜನೆ ಮಾಡುವುದಾಗಿ ಪಟ್ಟು ಹಿಡಿದಿದ್ದರು. ಐದನೇ ದಿನಕ್ಕೆ ವಿಸರ್ಜನೆ ಮಾಡಬೇಕಿದ್ದ ಮೂರ್ತಿಗಳನ್ನು, ಪೆಂಡಾಲ್‌ನಲ್ಲಿಯೇ ಉಳಿಸಿಕೊಂಡಿದ್ದರು.

ADVERTISEMENT

ಮಂಡಳಿ ಜೊತೆ ಸಂಧಾನ ನಡೆಸಿದ್ದ ಪೊಲೀಸರು, 25 ಮೂರ್ತಿಗಳ ಪೈಕಿ 11 ಮೂರ್ತಿಗಳ ವಿಸರ್ಜನೆಯನ್ನು ಮಾಡಿಸಿದ್ದಾರೆ. ಉಳಿದ 14 ಮೂರ್ತಿಗಳ ವಿಸರ್ಜನೆಗೂ ಪ್ರಯತ್ನ ಆರಂಭಿಸಿದ್ದಾರೆ. ಆದರೆ, ಮಂಡಳಿಯವರು ಮಾತ್ರ ಪಟ್ಟು ಸಡಿಲಿಸುತ್ತಿಲ್ಲ.

ಡಿ.ಜೆ.ಗೆ ಲಕ್ಷ ಖರ್ಚು: ನಾಗೇಂದ್ರನಮಟ್ಟಿಯ 7ನೇ ಕ್ರಾಸ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳೀಯ ಯುವಕರು, ಮಾದರಿ ನಡೆಗಳ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

ಡಿ.ಜೆ.ಗೆ ಅನುಮತಿ ಇಲ್ಲವೆಂದು ಪೊಲೀಸರ ಹೇಳಿದ್ದನ್ನು ಸ್ವಾಗತಿಸಿದ್ದ ಯುವಕರು, ನಿಯಮಗಳನ್ನು ಪಾಲಿಸಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಿದ್ದಾರೆ. ಭಾನುವಾರ (ಸೆ.7) ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಸಂದರ್ಭದಲ್ಲಿ ಹೋಳಿಗೆ ಊಟ ಹಾಕಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಹುತೇಕ ಕಡೆಗಳಲ್ಲಿ ಆರ್ಥಿಕ ಪರಿಸ್ಥಿತಿ ಹಾಗೂ ದಾನಿಗಳ ನೆರವಿನಿಂದ ಅನ್ನಸಂತರ್ಪಣೆ ಮಾಡಿಸಲಾಗುತ್ತದೆ. ನಾಗೇಂದ್ರನಮಟ್ಟಿಯ 7ನೇ ಕ್ರಾಸ್‌ ಯುವಕರು, ಡಿ.ಜೆ.ಗೆ ಕೊಡಬೇಕಿದ್ದ ಹಣವನ್ನೇ ಬಳಸಿಕೊಂಡು ಹೋಳಿಗೆ ಊಟ ಮಾಡಿಸಿ ಜನರಿಗೆ ಬಡಿಸಿದ್ದಾರೆ.

ಗಜಾನನ ಮಿತ್ರ ಮಂಡಳಿಯಲ್ಲಿ ಚಿಕ್ಕಪ್ಪ ದೊಡ್ಡ ತಳವಾರ, ಅನಿಲ ಮುದ್ದಿ, ವೀರೇಶ ಹ್ಯಾಡ್ಲ, ಮಾರುತಿ ಕೋಂಡೆಮ್ಮನವರ್, ಬಸಂತ ಪೂಜಾರ, ಕುಮಾರ ಪೂಜಾರ, ಗುಡ್ಡಪ್ಪ ಡಿಳಪ್ಪನವರು, ಹರೀಶ ಜಹಗೀರದಾರ್, ಜಗದೀಶ ಸಾಲಿಮಠ, ಜಗದೀಶ ಕೋಂಡೆಮ್ಮನವರ್, ಸಾಧಿಕ ಅಗಡಿ, ತಿರಕಪ್ಪ ಕರ್ಜಗಿ, ಪ್ರವೀಣ ದೊಡ್ಡತಳವಾರ, ನಾಗರಾಜ್ ಡಿಳ್ಳೆಪ್ಪನವರ್, ಮಾರುತಿ ಚಿಗಟೇರಿ, ಸುನಿಲ ತೆರೆದಹಳ್ಳಿ, ದೇವು ಹುಬ್ಬಳ್ಳಿ, ಸೋಮು ಅಂಗೂರ, ಅಭಿಷೇಕ ಬ್ಯಾಡಗಿ, ಮಾಲತೇಶ ದೊಡ್ಡ ತಳವಾರ, ಪ್ರದೀಪ್ ಚಲವಾದಿ, ಮಂಜುನಾಥ್, ಬಸವರಾಜ ಬಜ್ಜಿನಾಯಕ ಕೆಲಸ ಮಾಡಿದ್ದಾರೆ.

3000ರಿಂದ 4000 ಹೋಳಿಗೆ

3 ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ವರ್ಷ ಡಿ.ಜೆ.ಗೆ ಅನುಮತಿ ಸಿಗದಿದ್ದರಿಂದ ಅದು ಬೇಡವೆಂದು ತೀರ್ಮಾನಿಸಿದೆವು. ಡಿ.ಜೆ.ಗೆ ಸುಮಾರು ₹ 1 ಲಕ್ಷ ಬೇಕಿತ್ತು. ಹೀಗಾಗಿ ಅದೇ ಹಣದಲ್ಲಿ ಹೋಳಿಗೆ ಊಟ ಮಾಡಿಸಲಾಗಿದೆ ಎಂದು ಗಜಾನನ ಮಿತ್ರ ಮಂಡಳಿ ಪದಾಧಿಕಾರಿಗಳು ಹೇಳಿದರು. ‘3000ರಿಂದ 4000 ಹೋಳಿಗೆ ಸಿದ್ಧಪಡಿಸಲಾಗಿತ್ತು. ಸ್ಥಳೀಯರು ಹಾಗೂ ಅಕ್ಕ–ಪಕ್ಕದ ನಿವಾಸಿಗಳು ಸಹ ಗಣೇಶ ಮೂರ್ತಿ ದರುಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಸೋಮವಾರವೇ ಮೂರ್ತಿ ವಿಸರ್ಜನೆ ಮಾಡಿಮುಗಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.