ಸಾವು (ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದು ತೀವ್ರ ಅಸ್ವಸ್ಥಗೊಂಡು ಮಂಜಪ್ಪ ಕರಬಸಪ್ಪ ಬೆಳ್ಳೊಡಿ (17) ಎಂಬಾತ ಮೃತಪಟ್ಟಿದ್ದಾನೆ.
‘ಗುಂಡಗಟ್ಟಿ ನಿವಾಸಿ ಮಂಜಪ್ಪ, ಹಿರೇಕೆರೂರಿನ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ಘಟನೆಯಲ್ಲಿ ಆತನ ತಂದೆ ಕರಬಸಪ್ಪ ಹಾಗೂ ತಾಯಿ ಶಾಂತಮ್ಮ ಸಹ ತೀವ್ರ ಅಸ್ವಸ್ಥಗೊಂಡಿದ್ದಾರೆ. ಅವರಿಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹಿರೇಕೆರೂರು ಠಾಣೆ ಪೊಲೀಸರು ಹೇಳಿದರು.
‘ಕರಬಸಪ್ಪ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಾಗಿ ಎದ್ದು ಓಡಾಡುವುದಿಲ್ಲ. ಅವರ ಹಳೇ ಮನೆ ಹಲವು ವರ್ಷಗಳ ಹಿಂದೆ ಕುಸಿದು ಬಿದ್ದಿತ್ತು. ನೆರೆ ಸಂತ್ರಸ್ತರ ಪರಿಹಾರ ಯೋಜನೆಯಡಿ ₹ 5 ಲಕ್ಷ ಅನುದಾನದಲ್ಲಿ ಹೊಸ ಮನೆ ನಿರ್ಮಿಸಿಕೊಂಡಿದ್ದರು. ಪತ್ನಿ ಹಾಗೂ ಮಗನ ಜೊತೆ ಅದೇ ಮನೆಯಲ್ಲಿ ವಾಸವಿದ್ದರು’ ಎಂದು ತಿಳಿಸಿದರು.
‘ಆ. 28ರಂದು ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಮರುದಿನ 9 ಗಂಟೆಯಾದರೂ ಮನೆಯ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು, ಮನೆಯ ಒಲೆಯ ಹೊಗೆ ಬರುವ ಜಾಗದಲ್ಲಿದ್ದ ಹಂಚು ತೆಗೆದು ನೋಡಿದ್ದರು. ಅವಾಗಲೇ ಅಡುಗೆ ಅನಿಲ ಸೋರಿಕೆ ವಾಸನೆ ಬಂದಿತ್ತು. ಬಳಿಕ, ಬಾಗಿಲು ಮೀಟಿ ಒಳ ಹೋಗಿದ್ದರು.’
‘ಅಡುಗೆ ಮನೆ ಬಳಿ ಮಂಜಪ್ಪ ಹಾಗೂ ಶಾಂತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೊಠಡಿಯಲ್ಲಿದ್ದ ಕರಬಸಪ್ಪ ಸಹ ಪ್ರಜ್ಞೆ ಕಳೆದುಕೊಂಡಿದ್ದರು. ಸ್ಥಳೀಯರೇ ಮೂವರನ್ನು ಮಾಸೂರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಜಪ್ಪ ಅವರನ್ನು ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದರು ತಿಳಿಸಿದರು.
‘ತೀವ್ರ ಅಸ್ವಸ್ಥಗೊಂಡಿದ್ದ ಬಾಲಕ ಮಂಜಪ್ಪ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ. ಕರಬಸಪ್ಪ ಹಾಗೂ ಶಾಂತಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯು ಚಿಂತಾಜನಕವಾಗಿದೆ’ ಎಂದರು.
‘ಮೂವರು ಮಲಗುವ ಸಂದರ್ಭದಲ್ಲಿ, ಮನೆಯಲ್ಲಿದ್ದ ಅಡುಗೆ ಅನಿಲದ ಒಲೆಯನ್ನು ಶೇ 100ರಷ್ಟು ಆಫ್ ಮಾಡಿರಲಿಲ್ಲ. ಇದರಿಂದಾಗಿ ಅಡುಗೆ ಅನಿಲ ನಿಧಾನವಾಗಿ ಮನೆಯಲ್ಲಿ ಆವರಿಸಿಕೊಳ್ಳುತ್ತಿತ್ತು. ಇದೇ ಸಂದರ್ಭದಲ್ಲಿಯೇ ಮೂವರು ನಿದ್ದೆಗೆ ಜಾರಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆಲ ಗಂಟೆಗಳ ಬಳಿಕ ಇಡೀ ಅಡುಗೆ ಮನೆಯಲ್ಲಿ ಅನಿಲ ಆವರಿಸಿಕೊಂಡಿದೆ. ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಾಗಿದೆ. ಬೆಳಿಗ್ಗೆ ಎಚ್ಚರಗೊಂಡಿದ್ದ ಮಂಜಪ್ಪ ಹಾಗೂ ಶಾಂತಮ್ಮ, ಅಡುಗೆ ಮನೆ ಬಳಿ ಹೋಗಿದ್ದರು. ಅಲ್ಲಿ ಅವರಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಕುಸಿದು ಬಿದ್ದಿದ್ದರು’ ಎಂದು ತಿಳಿಸಿದರು.
‘ಅಡುಗೆ ಅನಿಲ ಸೋರಿಕೆಯಿಂದ, ಮನೆಯೊಳಗೆ ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಮೂವರು ಪ್ರಜ್ಞೆ ತಪ್ಪಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮಂಜಪ್ಪನ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಿಸಬೇಕಿದೆ. ಪರೀಕ್ಷೆ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿಯಲಿದೆ’ ಎಂದು ಹೇಳಿದರು.
‘ಮನೆಯ ಮುಂಭಾಗದಲ್ಲಿ ಒಂದೇ ಕಿಟಕಿಯಿದೆ. ಮಳೆ ಗಾಳಿ ಹಿನ್ನೆಲೆಯಲ್ಲಿ ಆ ಕಿಟಕಿಯನ್ನೂ ಬಂದ್ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ ಸೋರಿಕೆಯಾದ ಅನಿಲ, ಹೊರಗಡೆ ಹೋಗಲು ಆಗಿಲ್ಲ. ಮನೆಯಲ್ಲಿಯೇ ಆವರಿಸಿತ್ತು. ಇದು ಸಹ ಅವಘಡಕ್ಕೆ ಕಾರಣವಿರಬಹುದು’ ಎಂದು ತಿಳಿಸಿದರು.
‘ಅವಘಡ ಕುರಿತು ದೂರು ನೀಡಿರುವ ಸಂಬಂಧಿ ಹನುಮಂತಪ್ಪ, ‘ಮಂಜಪ್ಪ ಸಾವು ಹಾಗೂ ಇಬ್ಬರ ಅಸ್ವಸ್ಥಗೊಂಡಿರುವುದರ ಹಿಂದೆ ಸಂಶಯವಿದೆ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಮ್ಲಜನಕದ ಕೊರತೆಯಾಗಿ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದು, ಅಸ್ವಸ್ಥಗೊಂಡು ಮಂಜಪ್ಪ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.