ADVERTISEMENT

ಗೌರಿ ಹುಣ್ಣಿಮೆ: ಮೈಲಾರಲಿಂಗೇಶ್ವರ ರಥೋತ್ಸವ

ಬಾಲಕಿಯರಿಗೆ ಸಕ್ಕರೆ ಗೊಂಬೆಗಳ ಆರತಿ ಮಾಡಿ ಸಂಪ್ರದಾಯದ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 2:49 IST
Last Updated 6 ನವೆಂಬರ್ 2025, 2:49 IST
ಹಾವೇರಿ ಮೈಲಾರಲಿಂಗೇಶ್ವರ ದೇವಸ್ಥಾನದ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು
ಹಾವೇರಿ ಮೈಲಾರಲಿಂಗೇಶ್ವರ ದೇವಸ್ಥಾನದ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು   

ಹಾವೇರಿ: ಜಿಲ್ಲೆಯಾದ್ಯಂತ ಗೌರಿ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬಾಲಕಿಯರಿಗೆ ಸಕ್ಕರೆ ಗೊಂಬೆಗಳ ಆರತಿ ಮಾಡಿ ಸಂಪ್ರದಾಯದ ಆಚರಣೆ ಮಾಡಲಾಯಿತು.
ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಹಬ್ಬದ ಆಚರಣೆಯ ಸಡಗರ ಮನೆ ಮಾಡಿತ್ತು.

ಬಾಲಕಿಯರಿಗೆ ಹೂವಿನ ದಂಡೆ ಮಾಡಿ ಸಕ್ಕರೆ ಗೊಂಬೆ ನೀಡಿ ಆರತಿ ಮಾಡುವ ಸಂಪ್ರದಾಯ ನೆರವೇರಿಸಲಾಯಿತು. ಮೊಮ್ಮಕ್ಕಳಿಗೆ, ಅಜ್ಜ–ಅಜ್ಜಿಯಂದಿರು ಸಕ್ಕರೆ ಗೊಂಬೆ ಹಾಗೂ ಕೋಲಾಟದ ಕೋಲುಗಳನ್ನು ನೀಡಿ ಖುಷಿ ಹಂಚಿಕೊಂಡರು. ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಯಿತು.

ಹುಣ್ಣಿಮೆ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಹಾವೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಕ್ತರು, ದೀವಟಿಗೆ ಹಿಡಿದು ದೀಪ ಬೆಳಗಿದರು.

ADVERTISEMENT

ದೇವಸ್ಥಾನದ ಆವರಣದಿಂದ ಸಂಜೆ ರಥೋತ್ಸವ ಆರಂಭವಾಯಿತು. ಪ್ರಮುಖ ರಸ್ತೆಯಲ್ಲಿ ಸಾಗಿದ ರಥೋತ್ಸವ, ಶಿಬಾರದವರೆಗೆ ಸಾಗಿತು. ನಂತರ, ವಾಪಸು ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.

ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ‘ಏಳು ಕೋಟಿ ಏಳು ಕೋಟಿ ಏಳು ಕೋಟಿಗೂ ಚಾಂಗಮಲೋ...’ ಎಂದು ಕೂಗುತ್ತ ಭಕ್ತರು ದೇವರ ಸ್ಮರಣೆ ಮಾಡಿದರು. ರಥದಲ್ಲಿರುವ ದೇವರಿಗೆ ನಮಸ್ಕರಿಸಿದ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.

ರಥೋತ್ಸವ: ಹಾವೇರಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಥೋತ್ಸವ ವಿಜೃಂಭಣೆ ಹಾಗೂ ಸಂಭ್ರಮದಿಂದ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.