ADVERTISEMENT

ಗುಡ್‌ ಫ್ರೈಡೆ: ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 4:49 IST
Last Updated 3 ಏಪ್ರಿಲ್ 2021, 4:49 IST
ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ವಾಸವಾಗಿರುವ ಕುಟುಂಬಗಳಿಗೆ ಸ್ನೇಹ ಸದನದ ಮುಖ್ಯಸ್ಥೆ ಆಗ್ನೇಸ್‌ ಕ್ಲೇರ್‌ ಆಹಾರದ ಕಿಟ್‌ ವಿತರಿಸಿದರು
ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ವಾಸವಾಗಿರುವ ಕುಟುಂಬಗಳಿಗೆ ಸ್ನೇಹ ಸದನದ ಮುಖ್ಯಸ್ಥೆ ಆಗ್ನೇಸ್‌ ಕ್ಲೇರ್‌ ಆಹಾರದ ಕಿಟ್‌ ವಿತರಿಸಿದರು   

ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರದ ವತಿಯಿಂದ ಯೇಸುಕ್ರಿಸ್ತನಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ‘ಶುಭ ಶುಕ್ರವಾರ‘ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಾನವ ಪ್ರೇಮಿ ಯೇಸುಕ್ರಿಸ್ತನು ಶಿಲುಬೆಗೇರಿದ ದಿನವಾಗಿದ್ದು ಶೋಕಾಚರಣೆಯ ಮೂಲಕ ನೆನೆಯಲಾಯಿತು. ಈ ವೇಳೆ ಸಿಸ್ಟರ್‌ ಅಗ್ನೇಸ್‌ ಕ್ಲೇರ್‌ ಮಾತನಾಡಿ, ಶತ್ರುಗಳನ್ನು ಪ್ರೀತಿಸು, ಕೆಡಕು ಮಾಡುವವರನ್ನು ಕ್ಷಮಿಸು, ಸೇವಕನಂತೆ ತಗ್ಗಿ ಬಗ್ಗಿ ನಡೆ, ಬೇರೆಯವರ ತಪ್ಪನ್ನು ಎತ್ತಿ ತೋರಿಸುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ ಎನ್ನುವ ಯೇಸುವಿನ ಸಂದೇಶಗಳನ್ನು ಹೇಳಿದರು.

ಬಳಿಕ ಚಿಕ್ಕಣಜಿ ಗ್ರಾಮದ ಬಳಿ ವಾಸವಿರುವ 32 ಕುಟುಂಬಗಳಿಗೆ 70 ದಿನಸಿ ಕಿಟ್‌ಗಳನ್ನು ವಿತರಿಸಿದರು. ಈ ವೇಳೆ ಐರಿಸ್‌ ಮತ್ತು ಗ್ಲೋರಿಯಾ ಉಪಸ್ಥಿತರಿದ್ದರು.

ADVERTISEMENT

ಶುಭ ಶುಕ್ರವಾರ: ಮೋಟೆಬೆನ್ನೂರ ಗ್ರಾಮದ ಶಾಂತಿ ಚರ್ಚ್‌ನಲ್ಲಿಯೂ ಶುಭ ಶುಕ್ರವಾರದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ರಾಣೆಬೆನ್ನೂರು ವರದಿ: ಇಲ್ಲಿನ ಚರ್ಚ್‌ ರಸ್ತೆಯ ಗುಡ್‌ ಶೆಫರ್ಡ್‌ ಚರ್ಚ್‌ನ್ಲಿ ಶುಕ್ರವಾರ ಗುಡ್‌ಫ್ರೈಡೆ ಆಚರಿಸಲಾಯಿತು.

ಶಿಲುಬೆ ಯಾತ್ರೆ ಹಾಗೂ ಯೇಸುವಿನ ಕೊನೆಯ ಕ್ಷಣಗಳ ಧ್ಯಾನ ಮಾಡಲಾಯಿತು. ಫಾದರ್‌ ಕ್ರಿಸ್ತಾನಂದ ಕೊಳಜಿ ಅವರು 7 ವಾಕ್ಯಗಳನ್ನು ವಾಚನ ಮಾಡಿದರು.

ಗುಡ್‌ಫ್ರೈಡೆ ದಿನ ತದೇಕಚಿತ್ತದಿಂದ ಧ್ಯಾನಿಸುತ್ತಾರೆ. ಜಪ ಓದುತ್ತಾರೆ. ತಮ್ಮ ಮನದ ದೌರ್ಬಲ್ಯಗಳಿಗಾಗಿ ವ್ಯಥೆ ಪಡುತ್ತಾರೆ. ಈ ದಿನ ಉಪವಾಸವಿದ್ದು ದೇವಾಲಯ, ಮನೆಯಲ್ಲಿ, ರಸ್ತೆ, ಗುಡ್ಡದಲ್ಲಿ ಯೇಸುಕ್ರಿಸ್ತನ ಶಿಲುಬೆಯಾತ್ರೆಯನ್ನು ಅನುಭವಿಸುತ್ತಾ ಕ್ರಿಸ್ತನ ನೋವು ಸಂಕಟದಲ್ಲಿ ಭಾಗಿಯಾಗುತ್ತಾರೆ. ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಎಂದು ಪ್ರಶಾಂತ ಕಬ್ಬಾರ ತಿಳಿಸಿದರು.

ಸಂಪತ್‌ ಕುಮಾರ, ರೋಜಲೀನ್‌ ಕ್ಷೀರಸಾಗರ, ಶಾಂತಪ್ಪ ಗುತ್ತಲ, ಪ್ರದೀಪ ಕಬ್ಬಾರ, ಸಂತೋಷ ಮಾಸಣಗಿ, ಎಲಿಜಬೆತ್‌ ಕೊಳಜಿ, ರಕ್ಷಣಾ ಏಣಿ, ಡಿ. ಜಯಮ್ಮ, ಪ್ರಶಾಂತ ಮಾಸಣಗಿ, ಚಂದ್ರು ಬಲ್ಲೂರ, ರೀನಾ ಕಬ್ಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.