ADVERTISEMENT

514 ಹೆಕ್ಟೇರ್‌ನಲ್ಲಿ ಹೆಸರು: ಖರೀದಿಗೆ ಕೇಂದ್ರ

ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ | ಸವಣೂರು, ಹಾನಗಲ್‌ನಲ್ಲಿ ಕೇಂದ್ರ ತೆರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:50 IST
Last Updated 30 ಸೆಪ್ಟೆಂಬರ್ 2025, 6:50 IST
ವಿಜಯ ಮಹಾಂತೇಶ ದಾನಮ್ಮನವರ  
ವಿಜಯ ಮಹಾಂತೇಶ ದಾನಮ್ಮನವರ     

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 514 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದ್ದು, ಈಗ ಎಲ್ಲ ಕಡೆಯೂ ಹೆಸರು ಕಾಳಿನ ಕಟಾವು ಶುರುವಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಮಾಡಲು ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲೆಯ ಎರಡು ಕಡೆಗಳಲ್ಲಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯಾದ್ಯಂತ ರೈತರು ಬೆಳೆದಿರುವ ಹೆಸರು ಕಾಳು ಏಕಾಏಕಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ‍ಪೂರೈಕೆ ಹೆಚ್ಚಾಗಿರುವ ಕಾರಣದಿಂದ ಬೇಡಿಕೆಯಲ್ಲಿ ವ್ಯತ್ಯಾಸವಾಗಿ ಬೆಲೆ ಇಳಿಕೆಯಾಗಲಿದೆ. ಈ ಕಾರಣದಿಂದ ಬೆಲೆ ಕುಸಿತ ಕಂಡುಬರುವ ವಾತಾವರಣ ನಿರ್ಮಾಣವಾಗಿದೆ. ರೈತರಿಗೆ ಆರ್ಥಿಕ ನಷ್ಟವಾಗಬಾರದೆಂದು ಸರ್ಕಾರವೇ, ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಗೆ ಮುಂದಾಗಿದೆ.

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ, ಹೆಸರು ಖರೀದಿ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಹೆಸರು ಕಾಳು ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೇಡಿಕೆಗೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರಥಮ ಹಂತದಲ್ಲಿ ಹಾವೇರಿ ಹಾಗೂ ಸವಣೂರು ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲು ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹8,768ರಂತೆ ಖರೀದಿಸಲು ಅವಕಾಶವಿದೆ. ಸರ್ಕಾರದ ಆದೇಶದ ದಿನದಿಂದ 80 ದಿನಗಳವರೆಗೆ ಹೆಸರು ಖರೀದಿಸಲು ವ್ಯವಸ್ಥೆಯಿದೆ. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಸಂಸ್ಥೆಯ ಮೂಲಕ ಹೆಸರು ಖರೀದಿಸಲು ಸರ್ಕಾರ ಆದೇಶಿಸಿದೆ’ ಎಂದರು.

‘ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿರುವ ಕುರಿತು ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಉತ್ಪನ್ನವನ್ನು ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು’ ಎಂದು ಸೂಚಿಸಿದರು.

ಎಫ್‌.ಎ.ಕ್ಯೂ ಗುಣಮಟ್ಟ: ‘ಹೆಸರು ಕಾಳಿನ ಎಫ್.ಎ.ಕ್ಯೂ ಗುಣಮಟ್ಟ ಗುರುತಿಸಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳನ್ನು ಖರೀದಿ ಕೇಂದ್ರದಲ್ಲಿ ನಿಯೋಜಿಸಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್ ಹೆಸರುಕಾಳು ಖರೀದಿಸಲು ಅವಕಾಶವಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 514 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆಯಾಗಿದೆ. ಸವಣೂರ ತಾಲ್ಲೂಕಿನಲ್ಲಿ 302 ಹೆಕ್ಟೇರ್ ಹಾಗೂ ಹಾವೇರಿ ತಾಲ್ಲೂಕಿನಲ್ಲಿ 120 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬೆಳೆಯಿದೆ’ ಎಂದರು.

ಕೃಷಿ ಇಲಾಖೆ, ಆಹಾರ ಇಲಾಖೆ , ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಉಪನಿಬಂಧಕರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಎಪಿಎಂಸಿ ಅಧಿಕಾರಿಗಳು ಸಭೆಯಲ್ಲಿದ್ದರು.

ರೈತರ ಖಾತೆಗೆ ಹಣ ಜಮೆ’

‘ಹೆಸರು ಕಾಳು ಖರೀದಿಯ ನಂತರ ಅದರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚಿಸಿದರು. ‘ಖರೀದಿ ಕೇಂದ್ರದಲ್ಲಿ ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಹೆಸರು ಕಾಳು ಮೊತ್ತವನ್ನು ಅವರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ಜಮೆ ಮಾಡಬೇಕು. ಏನಾದರೂ ಲೋಪವಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.