ರಾಣೆಬೆನ್ನೂರು: ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೂ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ’ ಎಂದು ಬ್ಯಾಡಗಿ ಮತಕ್ಷೇತ್ರದ ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ತಾಲ್ಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲಾದ ಆಂಜನೇಯ ಸಮುದಾಯ ಭವನದ ಉದ್ಘಾಟನೆ ಮತ್ತು ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಗಟಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿರುವುದು ಸರಿಯಲ್ಲ. ಈ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ₹1.48 ಕೋಟಿ ವೆಚ್ಚದಲ್ಲಿಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಶೀಘ್ರವೇ ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳ ಕುರಿತು ಸಭೆ ಹಮ್ಮಿಕೊಳ್ಳಲಾಗುವುದು. ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಯುವನಿಧಿ ಹಾವೇರಿ ಜಿಲ್ಲೆಯಲ್ಲಿ 6,700 ಪದವೀಧರರು ನೋಂದಣೆ ಮಾಡಿಕೊಂಡಿದ್ದಾರೆ. ತರಬೇತಿ ಮತ್ತಿತರ ಕಾರ್ಯಕ್ರಮ, ಸಭೆಗಳಿಗೆ ಅವರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವೀರನಗೌಡ ಪೊಲೀಸಗೌಡ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಗೋಣಿಮಠ, ಉಪಾಧ್ಯಕ್ಷ ಭರಮಗೌಡ ಕುಡುಪಲಿ, ರವಿ ಉಕ್ಕುಂದ, ರಾಮನಗೌಡ ಪಾಟೀಲ, ಶೇಖರಪ್ಪ ಎಮ್ಮೇರ, ನಿಂಗರಾಜ ಕುಮ್ಮೂರ, ಮಂಜಣ್ಣ ಆನ್ವೇರಿ, ಪಿಡಿಒ ನಾಗರಾಜ ಉಕ್ಕಡಗಾತ್ರಿ, ನಿರ್ಮಿತಿ ಕೇಂದ್ರದ ಯೋಜನಾ ಎಂಜಿನಿಯರ್ ಎಚ್.ಡಿ. ಶಾಂತಕುಮಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.