
ಹಂಸಬಾವಿ (ಹಿರೇಕೆರೂರು): ಇಲ್ಲಿಯ ಮೃತ್ಯುಂಜಯ ವಿದ್ಯಾಪೀಠಕ್ಕೆ 416 ಎಕರೆ ಜಮೀನು ದಾನ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದವರು ರೇವಣಸಿದ್ದಪ್ಪ ಬುಳ್ಳಪ್ಪ (ಆರ್.ಬಿ) ಮಾಮಲೇ ದೇಸಾಯಿಯವರು. 2002ರ ಜನವರಿ 13ರಂದು ನಿಧನರಾಗಿರುವ ಅವರನ್ನು ವಿದ್ಯಾಪೀಠ ಇಂದಿಗೂ ನೆನಪು ಮಾಡಿಕೊಳ್ಳುತ್ತಿದೆ.
ಹಾವೇರಿ ತಾಲ್ಲೂಕಿನ ಹಂದಿಗನೂರಿನ ಬುಳ್ಳಪ್ಪ–ನಾಗೂಬಾಯಿ ದಂಪತಿಯ ಪುತ್ರರೇ ಈ ರೇವಣಸಿದ್ದಪ್ಪ. 1916ರ ಜೂನ್ 18ರಂದು ಜನಿಸಿದ್ದ ಅವರು, 1936ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದ್ದರು. ಕಾನೂನು ಪದವಿ ಪಡೆದು, ವಕೀಲ ವೃತ್ತಿ ಆರಂಭಿಸಿದ್ದರು. 1947ರಲ್ಲಿ ‘ವಿಶಾಲ ಕರ್ನಾಟಕ’ ಪತ್ರಿಕೆ ಆರಂಭಿಸಿದರು.
1953ರಿಂದ ಪೇಟೆಗಳ ಸಲಹಾ ಸಮಿತಿ ಅಧ್ಯಕ್ಷರಾಗಿ 23 ವರ್ಷ ಕೆಲಸ ಮಾಡಿದ್ದರು. ‘ಕೃಷಿ ಪೇಟೆ’ ಪತ್ರಿಕೆಯ ಸಂಪಾದಕರಾಗಿದ್ದರು. ಬೆಳಗಾವಿ ವಿಭಾಗದ ಎಪಿಎಂಸಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದರು. ಈಸ್ಟ್ ಇಂಡಿಯಾ ಕಾಟನ್ ಅಸೋಸಿಯೇಷನ್ ಪ್ರತಿನಿಧಿಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್, ಸಿನೆಟ್ ಸದಸ್ಯರಾಗಿದ್ದರು. ಹೊಸರಿತ್ತಿಯಲ್ಲಿರುವ ಗಾಂಧಿ ಗ್ರಾಮೀಣ ಗುರುಕುಲ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿದ್ದರು.
‘ಆರ್.ಬಿ. ಮಾಮಲೇ ದೇಸಾಯಿ ಅವರು ಅಧಿಕಾರಕ್ಕಿಂತ ಸೇವೆ ಮುಖ್ಯವೆಂದು ಇತರರಿಗೆ ಕಲಿಸಿದವರು. ಸಾಕಷ್ಟು ಸಂಸ್ಥೆಗಳಿಗೆ ಎಕರೆಗಟ್ಟಲೇ ಭೂಮಿ ದಾನ ಕೊಟ್ಟಿದ್ದು ಚಿರಸ್ಮರಣೀಯ’ ಎಂದು ವಿಶ್ರಾಂತ ಪ್ರಾಂಶುಪಾಲ ಧೀರೇಂದ್ರ ಏಕಬೋಟೆ ಹೇಳಿದರು.
ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ, ‘ಮಾಮಲೇ ದೇಸಾಯಿ ಅವರು ನಮ್ಮ ಸಂಸ್ಥೆಗೆ ಮಾತ್ರವಲ್ಲದೇ ಹಂದಿಗನೂರಿನ ಶಾಲೆಗೆ, ಆರೋಗ್ಯ ಕೇಂದ್ರಕ್ಕೆ ಭೂಮಿ ದಾನ ಕೊಟ್ಟಿದ್ದಾರೆ. ಶ್ರೀಮಂತಿಕೆ ಇದ್ದರೂ ಸಾಮಾನ್ಯ ರೋಗಿಗಳಂತೆ ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯಾಪೀಠಕ್ಕೆ ಹಂದಿಗನೂರಿನಲ್ಲಿ ಅವರು ದಾನ ಕೊಟ್ಟ ಜಮೀನಿನ ಆರ್ಥಿಕ ಬಲದಿಂದ ಸಂಸ್ಥೆ ಬೆಳೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.