ಹಾನಗಲ್: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ನಡೆಯುವ ರಾಜ್ಯದ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಸಮಾರಂಭಕ್ಕೆ ಹಾನಗಲ್ ತಾಲ್ಲೂಕಿನಿಂದ ತೆರಳುವ ಫಲಾನುಭವಿಗಳಿಗೆ 40 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ರೇಣುಕಾ.ಎಸ್ ಹೇಳಿದರು.
ಹಾನಗಲ್ ತಾಲ್ಲೂಕಿನ ಕಂದಾಯಗ್ರಾಮ ಹಕ್ಕುಪತ್ರ ಮತ್ತು ಪೋಡಿಮುಕ್ತ ಅಭಿಯಾನದ 2 ಸಾವಿರ ಫಲಾನುಭವಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಾಲ್ಲೂಕಿನ ಕೆಲವು ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ, ಕಂದಾಯ ಉಪಗ್ರಾಮ ಹಕ್ಕುಪತ್ರ ಲಭ್ಯವಾಗಲಿದೆ. ದಾಖಲೆ ಇಲ್ಲದ ಸ್ಥಳದಲ್ಲಿ ಮನೆ ಕಟ್ಟಿಕೊಂಡ 990 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಉಪನೊಂದಣಾಧಿಕಾರಿಯಲ್ಲಿ ನೋಂದಣಿಯಾದ ಖರೀದಿಪತ್ರ, ಇ-ಸ್ವತ್ತು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಹಳ್ಳಿಬೈಲ್, ಲಕ್ಷ್ಮೀಪೂರ, ಹುಲಗಿನಹಳ್ಳಿ, ಹರಳಕೊಪ್ಪ, ಉಪ್ಪಣಶಿ, ಕೊಂಡೋಜಿ, ತಿಳವಳ್ಳಿ, ಕಲಕೇರಿ, ಕೆಲವರಕೊಪ್ಪ, ಬಿಂಗಾಪೂರ, ಆಲದಕಟ್ಟಿ, ಅಕ್ಕಿವಳ್ಳಿ ಗ್ರಾಮಗಳ ಫಲಾನುಭವಿಗಳು ಹಕ್ಕುಪತ್ರ ಪಡೆಯಲಿದ್ದಾರೆ ಎಂದರು.
ಇಂತಹ ಇನ್ನೂ 7 ರಿಂದ 8 ಸಾವಿರ ಪ್ರಕರಣಗಳು ತಾಲ್ಲೂಕಿನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಪೋಡಿಮುಕ್ತ ಅಭಿಯಾನದ 2300 ಫಲಾನುಭವಿಗಳ ಪೈಕಿ ಹೊಸಪೇಟೆ ಕಾರ್ಯಕ್ರಮಕ್ಕೆ 1 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರೇಣುಕಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.