
ಹಾವೇರಿ: ‘ಪ್ರೇಮ ಮದುವೆಯಾಗಲಿ ಅಥವಾ ಹಿರಿಯರು ನಿಶ್ಚಯಿಸಿದ ಮದುವೆಯಾಗಲಿ, ಎರಡೂ ದಾಂಪತ್ಯದಲ್ಲಿ ಗಂಡ–ಹೆಂಡತಿ ಪರಸ್ಪರ ಅಹಂ ಬಿಟ್ಟು ಬದುಕು ಕಟ್ಟಿಕೊಳ್ಳಬೇಕು. ಅವಾಗಲೇ ಅದೊಂದು ಸುಖ ಸಂಸಾರವಾಗುತ್ತದೆ’ ಎಂದು ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಹೇಳಿದರು.
ಇಲ್ಲಿಯ ವಿನಾಯಕ ನಗರದಲ್ಲಿ ನಾಗರಿಕ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ನಿಶ್ಚಯಿಸಿದ ವಿವಾಹ ಹಾಗೂ ಪ್ರೇಮ ವಿವಾಹ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯ ಸಂಸಾರಿಕ ವ್ಯವಸ್ಥೆಗೆ ನಾಂದಿಯೇ ವಿವಾಹ. ಎರಡು ಜೀವಗಳನ್ನು ಒಂದುಗೂಡಿಸುವ ಪವಿತ್ರ ಕಾರ್ಯ ಇದಾಗಿದೆ. ಗಂಡ–ಹೆಂಡತಿ ಇಬ್ಬರೂ ತಮ್ಮಲ್ಲಿಯೇ ತಾವು ಸೋಲಲು ಸಿದ್ಧರಾದರೆ, ಪ್ರೇಮವಾಗಲಿ ನಿಶ್ಚಿತವಾಗಲಿ ಎರಡೂ ಮದುವೆಗಳು ಪರಿಪೂರ್ಣತೆ ಸಾಧಿಸಿ ಜೀವನ ಸುಖಮಯವಾಗುತ್ತದೆ’ ಎಂದರು.
‘ಹಿರಿಯರು ನಿಶ್ಚಯಿಸಿದ ಮದುವೆ’ ಕುರಿತು ವಿಷಯ ಪ್ರಸ್ತಾಪಿಸಿದ ಬಿ.ಆರ್ ನದಾಫ್, ಸುಮಂಗಲ ಕಾರಗಿ, ಅನಿತಾ ಹಿಂಚಿಗೇರಿ ಅವರು, ‘ಇಂಥ ಮದುವೆಗೆ ತಂದೆ–ತಾಯಿ, ಬಂಧು ಬಳಗದವರ ಸಹಕಾರವಿರುತ್ತದೆ. ಸಂಸಾರದಲ್ಲಿ ಗಂಡ–ಹೆಂಡತಿ ನಡುವೆ ಯಾವುದೇ ಬಿರುಕು ಬಂದರೂ ಹಿರಿಯರು ಸರಿಪಡಿಸುತ್ತಾರೆ. ಆದರೆ, ಪ್ರೇಮ ವಿವಾಹಗಳು ಗಂಡ–ಹೆಂಡತಿಯರ ಪರಸ್ಪರ ವಾದ–ವಿವಾದಗಳಿಂದಾಗಿ ವಿಚ್ಛೇದನ ಹಂತಕ್ಕೆ ತಲುಪುತ್ತವೆ. ಕುಟುಂಬದವರನ್ನು ದೂರ ಮಾಡಿ ಪ್ರೇಮ ಮದುವೆಯಾದರೆ, ಅಂಥವರಿಗೆ ಕುಟುಂಬದ ರಕ್ಷಣೆಯೂ ಇರುವುದಿಲ್ಲ’ ಎಂದರು.
‘ಪ್ರೇಮ ಮದುವೆ’ ಬಗ್ಗೆ ವಿಷಯ ಪ್ರಸ್ತಾಪಿಸಿದ ಆಂಜನೇಯ ಹುಲ್ಯಾಳ, ಎಸ್.ಎ. ಸಾಣಿ, ಎಸ್.ಎಲ್. ಕಾಡದೇವರಮಠ ಅವರು, ‘ಬಾಳಸಂಗಾತಿ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಪರಸ್ಪರ ಭೇಟಿಯಾಗಿ ಆಸೆ, ಆಕಾಂಕ್ಷೆ, ಅಭಿರುಚಿಗಳ ಪರಸ್ಪರ ಚರ್ಚೆಯಾಗಬೇಕು. ಈ ಅವಕಾಶಗಳು ಪ್ರೇಮ ವಿವಾಹದಲ್ಲಿರುತ್ತವೆ. ಪರಸ್ಪರ ಪ್ರೀತಿಸಿ ಮದುವೆಯಾದರೆ, ಹೊಂದಾಣಿಕೆಯಿಂದ ಮುಂದಿನ ಅವರ ಬಾಳು ಸುಂದರವಾಗಿರುತ್ತದೆ. ವರದಕ್ಷಿಣೆ ಮಾತೇ ಇರುವುದಿಲ್ಲ’ ಎಂದರು.
ಸ್ಥಳೀಯ ನಿವಾಸಿಗಳಾದ ಎನ್.ಬಿ. ಕಾಳೆ, ಶಂಕರ ಸುತಾರ, ಆಶಾ ತಿಮ್ಮಾಪೂರ, ರಂಜಿತ್ ಕೊಪರ್ಡೆ, ಜಯಶ್ರೀ ದೊಡ್ಡಮನಿ, ಮೇಘನಾ ಕಾರಗಿ, ಶಶಿಧರ್ ಕಾರಗಿ, ಮಲ್ಲಿಕಾರ್ಜುನ ಹಿಂಚಿಗೇರಿ, ಮಲ್ಲಿಕಾರ್ಜುನ ಅಗಡಿ, ಸಿದ್ದಣ್ಣ ಎಲಿಗಾರ, ಕೊಟ್ರೇಶ್ ನಡುವಿನಮಠ, ರಮೇಶ್ ದೊಡ್ಡಮನಿ, ಟಿ.ಜಿ. ಚನ್ನವೀರಪ್ಪ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.