ADVERTISEMENT

ಹಾವೇರಿ: 3,684 ಹಳ್ಳಿಗಳಲ್ಲಿ ‘ಹರ್‌ ಘರ್‌ ಜಲೋತ್ಸವ’

ಆಗಸ್ಟ್‌ 12ರವರೆಗೆ ವಿಶೇಷ ಅಭಿಯಾನ ಆಯೋಜಿಸಲು ಪಂಚಾಯತ್‌ ರಾಜ್‌ ಇಲಾಖೆ ಸೂಚನೆ

ಸಿದ್ದು ಆರ್.ಜಿ.ಹಳ್ಳಿ
Published 29 ಜುಲೈ 2022, 3:43 IST
Last Updated 29 ಜುಲೈ 2022, 3:43 IST
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ‘ಹರ್‌ ಘರ್‌ ಜಲೋತ್ಸವ’ ಆಚರಿಸಿದ ದೃಶ್ಯ 
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ‘ಹರ್‌ ಘರ್‌ ಜಲೋತ್ಸವ’ ಆಚರಿಸಿದ ದೃಶ್ಯ    

ಹಾವೇರಿ: ಜಲ ಜೀವನ್‌ ಮಿಷನ್‌ ಯೋಜನೆಯಡಿರಾಜ್ಯದ 3,684 ಗ್ರಾಮಗಳಿಗೆ ಶೇ 100ರಷ್ಟು ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿದ್ದು, ‘ಹರ್‌ ಘರ್‌ ಜಲ್‌’ ಗ್ರಾಮಗಳೆಂದು ಘೋಷಿಸುವಂತೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೂಚಿಸಿದೆ.

3,684 ಗ್ರಾಮಗಳ ಪೈಕಿ ಕೇವಲ 150 ಹಳ್ಳಿಗಳನ್ನು ಮಾತ್ರ ‘ಹರ್‌ ಘರ್‌ ಜಲ್‌’ ಎಂದು ಜುಲೈ 20ರವರೆಗೆ ದೃಢೀಕರಿಸಲಾಗಿದೆ. ಜುಲೈ 25ರಿಂದ ಆಗಸ್ಟ್‌ 12ರವರೆಗೆ ವಿಶೇಷವಾದ ‘ಹರ್‌ ಘರ್‌ ಜಲೋತ್ಸವ’ ಅಭಿಯಾನ ಆಯೋಜಿಸಲು ಇಲಾಖೆ ನಿರ್ದೇಶಿಸಿದೆ.

ಶೇ 100ರಷ್ಟು ನಳಸಂಪರ್ಕ ಕಲ್ಪಿಸಿರುವ ಗ್ರಾಮ ಎಂದು ದೃಢೀಕರಿಸುವ ಪ್ರಕ್ರಿಯೆಗಾಗಿ ಒಂದು ‘ವಿಶೇಷ ಗ್ರಾಮ ಸಭೆ’ ಆಯೋಜಿಸಬೇಕು. ಎಲ್ಲ ಮನೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದನ್ನು ಖಚಿತಪಡಿಸಬೇಕು ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ತಾಕೀತು ಮಾಡಿದೆ.

ADVERTISEMENT

ಗದಗ ಪ್ರಥಮ:ಗದಗ ಜಿಲ್ಲೆ ಶೇ 100ರಷ್ಟು ನಳ ಸಂಪರ್ಕ ಕಲ್ಪಿಸಿರುವ 285 ಗ್ರಾಮಗಳ ಪೈಕಿ 37 ಹಳ್ಳಿಗಳನ್ನು ‘ಹರ್‌ ಘರ್‌ ಜಲ್‌’ ಎಂದು ಘೋಷಣೆ ಮಾಡಿ, ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಧಾರವಾಡ (36), ಹಾವೇರಿ ಮತ್ತು ಬೆಳಗಾವಿ ತಲಾ (16) ಗ್ರಾಮಗಳನ್ನು ಘೋಷಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.

3 ತಿಂಗಳ ಗಡುವು:ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅಗತ್ಯ ದಾಖಲೆ ಮತ್ತು ಜಿಯೊ–ಟ್ಯಾಗ್‌ ಮಾಡಬೇಕು. ಛಾಯಾಚಿತ್ರ ಮತ್ತು ಉತ್ಸವದ ಆಚರಣೆಯ ವಿಡಿಯೊವನ್ನುಜೆಜೆಎಂ–ಐಎಂಐಎಸ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ‘ಹರ್‌ ಘರ್‌ ಜಲ್‌ ಘೋಷಣೆ ಪ್ರಮಾಣ ಪತ್ರಕ್ಕೆ ಆ ಗ್ರಾಮವು ಅರ್ಹವಲ್ಲ ಎಂದು ಕಂಡುಬಂದರೆ, ಈ ಉತ್ಸವ ಆಯೋಜಿಸಿದ 3 ತಿಂಗಳೊಳಗೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಇಲಾಖೆ ಸೂಚಿಸಿದೆ.

344 ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣ:‘ಹಾವೇರಿ ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಮೊದಲ ಹಂತದಲ್ಲಿ 344 ಹಳ್ಳಿಗಳಲ್ಲಿ ಶೇ 100ರಷ್ಟು ನಳಸಂಪರ್ಕ ಕಲ್ಪಿಸಲಾಗಿದೆ. ಇವುಗಳ ಪೈಕಿ ಈಗಾಗಲೇ 33 ಹಳ್ಳಿಗಳನ್ನು ‘ಹರ್‌ ಘರ್‌ ಜಲ್‌’ ಎಂದು ಘೋಷಿಸಲಾಗಿದೆ. ಬಾಕಿ ಗ್ರಾಮಗಳಲ್ಲಿ ಗ್ರಾಮಸಭೆ ಕರೆದು, ಗ್ರಾಮಸ್ಥರ ಅಭಿಪ್ರಾಯದ ಆಧಾರದ ಮೇಲೆ ‘ಹರ್‌ ಘರ್‌ ಜಲ್‌’ ಗ್ರಾಮ ಎಂದು ಘೋಷಿಸುತ್ತೇವೆ’ ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ತಿಳಿಸಿದರು.

‘ನಳ ಸಂಪರ್ಕ ಕಲ್ಪಿಸಿದ ಗ್ರಾಮಗಳಲ್ಲಿ ಕುಂದು ಕೊರತೆಗಳಿದ್ದರೆ ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ನಂತರ ‘ಹರ್‌ ಘರ್‌ ಜಲೋತ್ಸವ’ ಆಚರಿಸಿ, ನಳ ಸಂಪರ್ಕದ ನಿರ್ವಹಣೆಯ ಹೊಣೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸುತ್ತೇವೆ’ ಎಂದು ರೋಶನ್‌ ಮಾಹಿತಿ ನೀಡಿದರು.

***

ಜಲಜೀವನ ಮಿಷನ್‌ ಯೋಜನೆಯಡಿ ಆ.12ರೊಳಗೆ ಹಾವೇರಿ ಜಿಲ್ಲೆಯ 150 ಗ್ರಾಮಗಳಲ್ಲಿ ‘ಹರ್‌ ಘರ್‌ ಜಲೋತ್ಸವ’ ಆಚರಿಸುವ ಗುರಿ ಇದೆ.
– ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ

***

ಹರ್‌ ಘರ್‌ ಜಲ್‌’ ಘೋಷಣೆ: ಟಾಪ್‌ 10 ಜಿಲ್ಲೆಗಳ ವಿವರ

ಜಿಲ್ಲೆ;ಕಾಮಗಾರಿ ಪೂರ್ಣಗೊಂಡ ಹಳ್ಳಿಗಳು;ಘೋಷಣೆ

ಗದಗ;285;37

ಧಾರವಾಡ;274;36

ಹಾವೇರಿ;344;16

ಬೆಳಗಾವಿ;228;16

ಮೈಸೂರು;131;7

ಬೀದರ್‌;71;7

ಶಿವಮೊಗ್ಗ;292;6

ದಾವಣಗೆರೆ;204;5

ಬಾಗಲಕೋಟೆ;163;4

ಕಲಬುರ್ಗಿ;32;4

(ಮಾಹಿತಿ: ಜುಲೈ 20, 2022ರ ಐಎಂಐಎಸ್‌ ವರದಿಯ ಅಂಕಿಅಂಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.