ADVERTISEMENT

ಸಾಮರಸ್ಯವೇ ಹಾವೇರಿಯ ನೆಲೆಗಟ್ಟು

ಡಿ.ಜೆ. ಬೇಡ ಎಂದ ವರ್ಗವೇ ದೊಡ್ಡದು, ಆದರೆ, ಅಬ್ಬರದ ಮುಂದೆ ಅವರ ದನಿ ಕೇಳಿರಲಿಲ್ಲ: ಕುಲಕರ್ಣಿ

ಹರ್ಷವರ್ಧನ ಪಿ.ಆರ್.
Published 23 ಸೆಪ್ಟೆಂಬರ್ 2018, 10:22 IST
Last Updated 23 ಸೆಪ್ಟೆಂಬರ್ 2018, 10:22 IST
ಸತೀಶ ಕುಲಕರ್ಣಿ
ಸತೀಶ ಕುಲಕರ್ಣಿ   

1992ರಲ್ಲಿ ಕೋಮುಗಲಭೆಯಿಂದ ದೇಶವೇ ಹೊತ್ತಿ ಉರಿಯುತ್ತಿದ್ದಾಗ, ‘ಕಟ್ಟುತ್ತೇವಾ ನಾವು ಕಟ್ಟುತ್ತೇವಾ...’ ಎಂದು ಕವನ ಬರೆದು, ತಂಡ ದೊಂದಿಗೆ ಹಾಡಿಕೊಂಡು ತಿರುಗಾಡಿ ದವರು ಹಿರಿಯ ಸಾಹಿತಿ ಸತೀಶ ಕುಲಕರ್ಣಿ. ಅವರು,ಜಿಲ್ಲೆಯ ಸಾಮರಸ್ಯದ ನೆಲೆಗಟ್ಟಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

* ಜಿಲ್ಲೆ ಸಾಮರಸ್ಯದ ನೆಲೆಯ ಬಗ್ಗೆ?

ಇಲ್ಲಿ ಸಾಮರಸ್ಯದ ಭದ್ರ ಬುನಾದಿ ಇದೆ. ಸಂತ ಶಿಶುವಿನಹಾಳ ಶರೀಫರು ಮತ್ತು ಗುರು ಗೋವಿಂದ ಭಟ್ಟರು, ಸರ್ವಜ್ಞರು, ಕನಕರು, ಅಂಬಿಗರ ಚೌಡಯ್ಯನವರು, ಪುಟ್ಟರಾಜ ಗವಾಯಿಗಳು, ಹಾನಗಲ್‌ ಶಿವಕುಮಾರ ಶಿವಯೋಗಿಗಳು, ವಾಗೀಶ ಪಂಡಿತರು ಸೇರಿದಂತೆ ಇಲ್ಲಿನ ಎಲ್ಲ ದಾರ್ಶನಿಕರು ಸಾಮರಸ್ಯದ ಸಂದೇಶ ನೀಡಿದ್ದಾರೆ. ಹೀಗಾಗಿ, ಸಾಮರಸ್ಯದ ಜ್ಞಾನ ಇದೆ.

ADVERTISEMENT

* ಸಾಮರಸ್ಯಕ್ಕೆ ಕೊಡುಗೆಗಳ ಕುರಿತು?

ಹುಕ್ಕೇರಿ, ಹೊಸಮಠ, ಸಿಂಧಗಿ, ರೇಣುಕ ಮಂದಿರ, ಗೌರಿಮಠ, ಕನಕಗುರುಪೀಠ, ಚೌಡಯ್ಯದಾನಪುರ, ಆನಂದವನ, ಪ್ರಭುಸ್ವಾಮಿ, ನೆಗಳೂರು, ಸವಣೂರು ಕಲ್ಮಠ, ಹತ್ತಿಮತ್ತೂರ ವಿರಕ್ತಮಠ, ಕುಮಾರಸ್ವಾಮಿಗಳ ಮಠ, ಬ್ಯಾಡಗಿ ಮುಪ್ಪಿನಸ್ವಾಮಿ ಮಠ, ಜುಮ್ಮಾ ಮಸೀದಿ, ಗಡಿ ಮಸೀದಿ, ಆಸಾರ್‌ ದರ್ಗಾ... ಹೀಗೆ ಮಠ–ಮಂದಿರಗಳು, ಸೂಫಿ–ಸಂತರ ಪರಂಪರೆಯೇ ಇಲ್ಲಿ ಗಟ್ಟಿಯಾಗಿವೆ. ಇವುಗಳು ಜನರ ಬೌದ್ಧಿಕ ಸ್ಥಿತಿ ಕಾಯ್ದುಕೊಂಡು ಬಂದಿವೆ. ಹೀಗಾಗಿ ಇಲ್ಲಿ ‘ಕದಡುವವರಿಗಿಂತ’ ‘ಕಟ್ಟುವವರೇ’ ಹೆಚ್ಚು.

* ಈಗ ಇದು ಹೇಗೆ ಸಾಧ್ಯ?

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಕೂಡಿಬಾಳುವ ಸಂಸ್ಕೃತಿ ಇಲ್ಲಿದೆ. ಆದರೆ, ಅತಿಯಾದ ಸಿದ್ಧಾಂತ ಬದ್ಧತೆ ಹಾಗೂ ಅಪನಂಬಿಕೆಯೂ ಕೆಣಕಲು ಕಾರಣವಾ ಗುತ್ತದೆ. ಅದನ್ನು ಬಿಟ್ಟು ಮಾನವೀಯತೆ ಮೆರೆಯಬೇಕು. ಅಂದರೆ, ನಮ್ಮತನ ಹಾಗೂ ನಂಬಿಕೆ ಬಿಟ್ಟುಕೊಡುವುದಲ್ಲ. ಅಂತಹ ಪರಿವರ್ತನೆಯು ಸಾಂಸ್ಕೃತಿಕ ಆಂದೋಲನದ ಮೂಲಕ ಸಾಧ್ಯ.

ಮುಸ್ಲಿಮರ ಗಣೇಶ, ಹಿಂದೂಗಳ ಮೊಹರಂ!

ಜಿಲ್ಲೆಯಚಿಕ್ಕಲಿಂಗದಳ್ಳಿಯಲ್ಲಿ ಪಿಂಜಾರರು (ನದಾಫ್) ಗಣೇಶೋತ್ಸವ ನಡೆಸಿದರೆ, ಕುರುಬರು ಕಡಿಮೆ ಇರುವ ಕಾಗಿನೆಲೆಯಲ್ಲಿ ಜನ ಕನಕನಿಗೆ ನಡೆದುಕೊಳ್ಳುತ್ತಾರೆ. ಮುಸ್ಲಿಮರಿಲ್ಲದ ಆರೀಕಟ್ಟಿಯಲ್ಲಿ ‘ಮೊಹರಂ’ ಆಚರಿಸುತ್ತಾರೆ. ಹಾವೇರಿ ಸಿಂಧಗಿ ಮಠದಲ್ಲಿ ಜಾತಿ–ಧರ್ಮ ಭೇದ ಮರೆತು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸಮಠದಲ್ಲಿ ಸಣ್ಣ ಸಣ್ಣ ಸಮುದಾಯಕ್ಕೂ ವೇದಿಕೆ ಕಲ್ಪಿಸುತ್ತಾರೆ, ಹುಕ್ಕೇರಿಮಠದಲ್ಲಿ ಎಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಜಿಲ್ಲಾಸ್ಪತ್ರೆ ಮುಂಭಾಗದ ದರ್ಗಾದಲ್ಲಿ ಹಿಂದೂಗಳನ್ನು ಕರೆದು ಗೌರವಿಸುತ್ತಿದ್ದಾರೆ. ಹಾವೇರಿಯೇ ಸಾಮರಸ್ಯದ ನೆಲೆವೀಡಾಗಿದೆ ಎಂದು ಕುಲಕರ್ಣಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.