ADVERTISEMENT

‘ಸಿದ್ದರಾಮಯ್ಯ ಪರ ಜನ ಜಾಗೃತಿ ಜಾಥಾ’

ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:47 IST
Last Updated 28 ಸೆಪ್ಟೆಂಬರ್ 2024, 15:47 IST

ಹಾವೇರಿ: ‘ಅಹಿಂದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕುತಂತ್ರ ನಡೆಸಲಾಗುತ್ತಿದೆ. ಇದನ್ನು ಖಂಡಿಸಿ ಹಾಗೂ ಸಿದ್ದರಾಮಯ್ಯ ಅವರ ಪರವಾಗಿ ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೆ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಟೋಬರ್ 3ರಂದು ಹುಬ್ಬಳ್ಳಿಯಿಂದ ಜಾಥಾ ಶುರುವಾಗಲಿದೆ. ಶಿಗ್ಗಾವಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಜಾಥಾ ಸಾಗಲಿದೆ’ ಎಂದರು.

‘ವಾಹನಗಳ ಮೂಲಕ ಜಾಥಾದಲ್ಲಿ ಜನರು ಸಾಗಲಿದ್ದಾರೆ. ನಗರಗಳ ವ್ಯಾಪ್ತಿಯಲ್ಲಿ ವಾಹನಗಳಿಂದ ಇಳಿದು, ಪಾದಯಾತ್ರೆ ಮಾಡಲಿದ್ದಾರೆ. ಮಾರ್ಗಮಧ್ಯೆ, ಶಿಗ್ಗಾವಿ ಹಾಗೂ ತುಮಕೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಬೆಂಗಳೂರಿನ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದಾರೆ. ಅಹಿಂದ ನಾಯಕ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂಬುದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ಖಂಡಿಸಿ, ಅಹಿಂದ ನಾಯಕನ ಉಳಿವಿಗಾಗಿ ಅಹಿಂದ ವರ್ಗಗಳ ಜನರ ಜಾಗೃತಿಗಾಗಿ ಈ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಒಕ್ಕೂಟದ ಸಲಹಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನ ಮನ್ನಣೆ ಗಳಿಸಿದೆ. ಇದನ್ನು ಸಹಿಸದ ಬಿಜೆಪಿ–ಜೆಡಿಎಸ್ ಮುಖಂಡರು, ಸಿದ್ದರಾಮಯ್ಯ ಅವರ ವಿರುದ್ಧ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

ಒಕ್ಕೂಟದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಗುರುನಗೌಡ ಪಾಟೀಲ, ಶ್ರೀಧರ ದೊಡ್ಡಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.