ADVERTISEMENT

‘ಶೇ 22.6ರಷ್ಟು ಪದವೀಧರರಿಗೆ ಮಾತ್ರ ಉದ್ಯೋಗ’

ಯುವನಿಧಿ ಅಭ್ಯರ್ಥಿಗಳಿಗೆ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:00 IST
Last Updated 19 ಆಗಸ್ಟ್ 2025, 3:00 IST
ಹಾವೇರಿಯ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಆಯೋಜಿಸಿದ್ದ ‘ಅರಿವು’ ಕಾರ್ಯಾಗಾರವನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು
ಹಾವೇರಿಯ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಆಯೋಜಿಸಿದ್ದ ‘ಅರಿವು’ ಕಾರ್ಯಾಗಾರವನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು   

ಹಾವೇರಿ: ‘ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಕಾಲೇಜುಗಳಿದ್ದು, ಪ್ರತಿ ವರ್ಷ ಕೋಟಿಗೂ ಅಧಿಕ ಪದವೀಧರರು ವ್ಯಾಸಂಗ ಮುಗಿಸಿ ಹೊರಬರುತ್ತಿದ್ದಾರೆ. ಅದರಲ್ಲಿ ಶೇ 22.6ರಷ್ಟು ಪದವೀಧರರಿಗೆ ಮಾತ್ರ ಉದ್ಯೋಗ ನೀಡಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕುಶಲ ಅಭಿವೃಧ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಯುವನಿಧಿ ಅಭ್ಯರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ‘ಅರಿವು’ ಉದ್ಯೋಗಾವಕಾಶಗಳ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಎಲ್ಲರೂ ಉದ್ಯೋಗವೇ ಬೇಕೆಂದು ಕುಳಿತರೆ ಕಷ್ಟ. ಯುವಜನತೆ, ಜ್ಞಾನದ ಜೊತೆಗೆ ಕುಶಲಗಳನ್ನು ರೂಢಿಸಿಕೊಳ್ಳಬೇಕು. ಕೈಗಾರಿಕೆಗಳಿಗೆ ಬೇಕಾದ ಕುಶಲಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು. ಸಮಯಕ್ಕೆ ಬಹಳ ಮಹತ್ವವಿದೆ. ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆ. ದುಡಿಯುವ ಮನಸ್ಸು ಹಾಗೂ ಸಾಧಿಸುವ ಛಲವಿದ್ದರೆ ಧೈರ್ಯದಿಂದ ಮುನ್ನುಗ್ಗಬೇಕು. ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಕೃಷಿ, ತೋಟಗಾರಿಕೆ, ಹಣ್ಣು, ತರಕಾರಿ, ಹಾಲು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸಂಸ್ಕರಣೆಗೆ ಹೆಚ್ಚಿನ ಆದ್ಯತೆಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಉದ್ಯಮ ಆರಂಭಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ‘ಶಾಲಾ ಹಂತದಿಂದಲೇ ಮಕ್ಕಳಿಗೆ ಕುಶಲಗಳನ್ನು ಕಲಿಸಲು ಪೋಷಕರು ಒತ್ತು ನೀಡಬೇಕು. ಯುವಜನತೆ ಸಹ ಆಧುನಿಕತೆಗೆ ತಕ್ಕ ಕುಶಲಗಳನ್ನು ಕಲಿತು ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು’ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಅವರು ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಕುಶಲ ಅಭಿವೃದ್ಧಿ ಇಲಾಖೆ ಅಧಿಕಾರಿ ಸೋನಾಲಿ ಕ್ಷೀರಸಾಗರ, ಎಂ.ಎಂ. ಮೈದೂರ, ಶಂಭನಗೌಡ ಪಾಟೀಲ, ಸುಭಾಸ ಮಜ್ಜಗಿ, ಚೇತನಕುಮಾರ ಮೊಹತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.