ADVERTISEMENT

ಹಾವೇರಿ: ಅನುಮತಿ ಇಲ್ಲದೇ ಬ್ಯಾನರ್ ಕಟ್ಟಿದರೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 2:54 IST
Last Updated 12 ಆಗಸ್ಟ್ 2025, 2:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಾವೇರಿ: ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ಮಾರಾಮಾರಿ ನಡೆದು ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ನಗರಸಭೆ ಹಾಗೂ ಪೊಲೀಸರು, ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳಗಳು–ಮೈದಾನಗಳ (ಸಂರಕ್ಷಣೆ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದಾರೆ.

ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್, ಪ್ಲೆಕ್ಸ್, ಭಿತ್ತಿಪತ್ರ ಹಾಗೂ ಇತರೆ ಫಲಕಗಳನ್ನು ಕಟ್ಟಲಾಗುತ್ತಿದೆ. ಹೋರಾಟಗಾರ ಹೊಸಮನಿ ಸಿದ್ಧಪ್ಪ ಸೇರಿದಂತೆ ಹಲವು ಮಹಾತ್ಮರ ಪ್ರತಿಮೆ ಬಳಿಯೂ ಕೆಲವರು ಅಕ್ರಮವಾಗಿ ಬ್ಯಾನರ್‌ ಕಟ್ಟುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ.

ADVERTISEMENT

ಕೊರವರ ಓಣಿಯಲ್ಲಿ ಹಾಕಿದ್ದ ಜನ್ಮದಿನದ ಶುಭಾಶಯ ಕೋರುವ ಬ್ಯಾನರ್‌ ವಿಚಾರವಾಗಿ ನಗರಸಭೆ ಆವರಣದಲ್ಲಿ ಮಾರಾಮಾರಿ ನಡೆದಿತ್ತು. ಪೌರ ಕಾರ್ಮಿಕರ ಮೇಲೆಯೇ ಹಲ್ಲೆಯಾಗಿತ್ತು. ಈ ಪ್ರಕರಣದಲ್ಲಿ ಹಲವರು ಜೈಲುಪಾಲಾಗಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮುದ್ರಣಕಾರರ ಸಭೆ: ಹಾವೇರಿ ಶಹರ ಠಾಣೆಯಲ್ಲಿ ‘ಹಾವೇರಿ ಮುದ್ರಣಕಾರರ ಸಂಘ’ದ ಸದಸ್ಯರ ಸಭೆಯನ್ನು ಸೋಮವಾರ ನಡೆಸಿದ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು, ಬ್ಯಾನರ್ ನಿಯಮ ಪಾಲಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.

‘ನಗರದ ಸೌಂದರ್ಯ ಕಾಪಾಡಲು ಹಾಗೂ ಸಾರ್ವಜನಿಕರ ಆಸ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಬ್ಯಾನರ್, ಪ್ಲೆಕ್ಸ್‌, ಭಿತ್ತಿಪತ್ರ ಪ್ರದರ್ಶಿಸಬೇಕಾದರೆ ನಗರಸಭೆಯ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ತಿಳಿಸಿದರು.

‘ಅನುಮತಿ ಪಡೆಯದೇ ಅಕ್ರಮವಾಗಿ ಹಾಕುವ ಬ್ಯಾನರ್‌ಗಳ ಬಗ್ಗೆ ನಗರಸಭೆ ಅಧಿಕಾರಿಗಳು ದೂರು ನೀಡಬಹುದಾಗಿದೆ. ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶವಿದೆ. ಇಂಥ ದೂರು ಆಧರಿಸಿ ಬ್ಯಾನರ್‌ ಹಾಕಿಸಿದ, ಮುದ್ರಿಸಿದ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಹೇಳಿದರು.

‘ಯಾವುದೇ ವ್ಯಕ್ತಿ ಬ್ಯಾನರ್‌, ಭಿತ್ತಿಪತ್ರ ಹಾಗೂ ಇತರೆ ಯಾವುದೇ ರೀತಿಯ ಮುದ್ರಣಕ್ಕಾಗಿ ಬಂದರೆ, ಅವರ ಬಳಿ ನಗರಸಭೆಯ ಅನುಮತಿ ಪತ್ರ ಕೇಳಬೇಕು. ಅದಾದ ನಂತರವೇ ಮುದ್ರಣ ಮಾಡಿಕೊಡಬೇಕು. ಬೇಕಾಬಿಟ್ಟಿಯಾಗಿ ಮುದ್ರಣ ಮಾಡಿಕೊಟ್ಟು ನಗರದ ಸೌಂದರ್ಯಕ್ಕೆ ಧಕ್ಕೆ ತರಬಾರದು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.