ADVERTISEMENT

₹300 ಕೋಟಿ ಅನುದಾನ: ಬಾಕಿ ಹಣ ಬಿಡುಗಡೆಗೊಳಿಸಿ- ಸಿಎಂಗೆ ಬೊಮ್ಮಾಯಿ ಪತ್ರ

ಸಿ.ಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ: ಕಾಂಗ್ರೆಸ್ ಗೆದ್ದಿದ್ದಕ್ಕೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 15:40 IST
Last Updated 1 ಡಿಸೆಂಬರ್ 2024, 15:40 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹಾವೇರಿ: ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ₹ 300 ಕೋಟಿ ಅನುದಾನದಲ್ಲಿ ಬಾಕಿ ಉಳಿದಿರುವ ಹಣವನ್ನು ಬಿಡುಗಡೆಗೊಳಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘ಬಾಕಿ ಹಣವನ್ನು ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಜಯಶಾಲಿಯಾಗಿದ್ದು, ತಮಗೂ ಹಾಗೂ ತಮ್ಮ ಪಕ್ಷಕ್ಕೆ ಅಭಿನಂದನೆಗಳು’ ಎಂದು ಬರೆದಿರುವ ಬೊಮ್ಮಾಯಿ, ‘ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಮುಜರಾಯಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮತ್ತು ನಿಗಮಗಳಿಂದ ಹಲವು ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ದೂರಿದ್ದಾರೆ.

ADVERTISEMENT

‘ಶಿಗ್ಗಾವಿಯ 250 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ₹ 96.50 ಕೋಟಿ ಮಂಜೂರಾಗಿದ್ದು, ಈ ಪೈಕಿ ₹ 27.34 ಕೋಟಿ ಬಾಕಿ ಉಳಿದಿದೆ. ಶಿಗ್ಗಾವಿಯ ಅತಿಥಿ ಗೃಹ ನಿರ್ಮಾಣಕ್ಕೆ ₹ 5.30 ಕೋಟಿ ಮಂಜೂರಾಗಿದ್ದು, ₹ 78 ಲಕ್ಷ ಬಾಕಿ ಉಳಿದಿದೆ. ಸರ್ಕಾರಿ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣದಲ್ಲಿ ₹ 50 ಕೋಟಿ, ಶೀತಲ ಗೃಹ ನಿರ್ಮಾಣದಲ್ಲಿ ₹ 6 ಕೋಟಿ, ಟೆಕ್ಸಟೈಲ್ ಪಾರ್ಕ್‌ ನಿರ್ಮಾಣದಲ್ಲಿ ₹ 5.50 ಕೋಟಿ, ಸವಣೂರು ಆಯುರ್ವೇದಿಕ ಆಸ್ಪತ್ರೆ ಕಟ್ಟಡ ನಿರ್ಮಾಣದಲ್ಲಿ ₹ 18.59 ಕೋಟಿ ಬಾಕಿ ಉಳಿದಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

‘ಉಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಕ್ಷೇತ್ರದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.