ಸಾವು
(ಪ್ರಾತಿನಿಧಿಕ ಚಿತ್ರ)
ಹಾವೇರಿ: ‘ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾದ ಬಾಲಕಿ ವಂದನಾ ತುಪ್ಪದ ಸಾವಿನ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಭಾರತೀಯ ವೈದ್ಯಕೀಯ ಸಂಘದ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಬಾಲಕಿಯ ತಂದೆ ಶಿವಪ್ಪ ತುಪ್ಪದ, ‘ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ತನಿಖೆ ಕೈಗೊಂಡು ಬಾಲಕಿಯ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ಕೋರಿದ್ದಾರೆ.
‘ಮಗಳು ವಂದನಾ ಬಲಗೈ ಮೇಲೆ ಗುಳ್ಳೆಯಾಗಿತ್ತು. ಏಪ್ರಿಲ್ 29ರಂದು ಮಧು ಮಾಸಣಗಿ ಹಾಗೂ ಮಲ್ಲೇಶ ಮಾಸಣಗಿ ಅವರು ನಡೆಸುವ ಚಿರಾಯು ಆಸ್ಪತ್ರೆಗೆ ಕರೆದೊಯ್ದಿದ್ದೆ. ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದ ವೈದ್ಯರು, ಸಲಾಯಿನ್ ಹಚ್ಚಿದ್ದರು. ಅದರಲ್ಲಿ ಯಾವುದೋ ಇಂಜೆಕ್ಷನ್ ಮಾಡಿದ್ದರು. ಕೆಲ ಹೊತ್ತಿನಲ್ಲಿ ಮಗಳು ವಿಚಿತ್ರವಾಗಿ ವರ್ತಿಸಿ ಮಾತು ನಿಲ್ಲಿಸಿದ್ದಳು. ಆಕೆಯನ್ನು ಬೇರೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ್ದ ಅಲ್ಲಿಯ ವೈದ್ಯರು, ಮಗಳು ಮೃತಪಟ್ಟಿದ್ದಾಗಿ ಹೇಳಿದರು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಚಿರಾಯು ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣವೆಂದು ಹಾವೇರಿ ಶಹರ ಠಾಣೆಗೆ ದೂರು ನೀಡಲಾಗಿದೆ. ವೈದ್ಯಕೀಯ ಪ್ರಕರಣವೆಂದು ಹೇಳಿದ್ದ ಪೊಲೀಸರು, ಎಫ್‌ಐಆರ್ ದಾಖಲಿಸಿಲ್ಲ. ಯುಡಿಆರ್ (ಅಸಹಜ ಸಾವು) ಮಾತ್ರ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಮಗಳ ಮರಣೋತ್ತರ ಪರೀಕ್ಷೆ ನಡೆಸಿದ್ದ ಸರ್ಕಾರಿ ವೈದ್ಯ ಡಾ. ಗುರುರಾಜ ಬಿರಾದಾರ, ಪರೀಕ್ಷೆ ವರದಿ ತಿರುಚುವುದಾಗಿ ಹೇಳಿ ಆರೋಪಿತ ವೈದ್ಯರ ಬಳಿ ₹ 5 ಲಕ್ಷ ಲಂಚ ಕೇಳಿದ್ದಕ್ಕಾಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮರಣೋತ್ತರ ಪರೀಕ್ಷೆ ಸಹ ಸರಿಯಾಗಿ ನಡೆದಿಲ್ಲವೆಂಬ ಅನುಮಾನವಿದೆ. ಎಫ್‌ಎಸ್‌ಎಲ್ ವರದಿ ಸಹ ಬಂದಿದ್ದು, ಅದರಲ್ಲೂ ವೈದ್ಯರನ್ನು ರಕ್ಷಿಸುವ ಅಂಶಗಳಿರುವ ಸಂಶಯವಿದೆ. ಎಲ್ಲ ಬೆಳವಣಿಗೆ ಗಮನಿಸಿದರೆ, ಪ್ರಕರಣವನ್ನು ಮುಚ್ಚಿಹಾಕಿ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಹೇಳಿದ್ದಾರೆ.
‘ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ಖೊಟ್ಟಿ ದಾಖಲೆ ಇಟ್ಟುಕೊಂಡು ಆಸ್ಪತ್ರೆ ನಡೆಸುತ್ತಿದ್ದ ಮಾಹಿತಿಯಿದೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಮಗಳು ಮೃತಪಟ್ಟಿದ್ದಾಳೆ. ಹಣದಾಸೆಗಾಗಿ ಸರ್ಕಾರಿ ವೈದ್ಯ ಸಹ ಆಸ್ಪತ್ರೆಯವರ ಮುಂದೆ ಲಂಚಕ್ಕಾಗಿ ಕೈಯೊಡ್ಡಿದ್ದಾರೆ. ಇದೆಲ್ಲ ಘಟನೆಗಳು ಅನುಮಾನಕ್ಕೆ ಕಾರಣವಾಗಿದೆ. ಸೂಕ್ತ ತನಿಖೆ ನಡೆಸಿ, ಮಗಳ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.