
ಹಾವೇರಿ: ಜಿಎಸ್‌ಟಿ ಕಾರಣಕ್ಕೆ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಪತ್ರ ನೀಡಲು ₹ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ ₹ 5 ಸಾವಿರ ಲಂಚ ಪಡೆದ ಆರೋಪದಡಿ ವಾಣಿಜ್ಯ ತೆರಿಗೆ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ (ಡಿಇಒ) ಫಕ್ಕೀರಗೌಡ ಈರನಗೌಡ ತಿರಕನಗೌಡ್ರ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
‘ಹಾವೇರಿ ತಾಲ್ಲೂಕಿನ ಕುರುಬಗೊಂಡದ ಸೋಮಲಿಂಗಪ್ಪ ಉಳಿವೆಪ್ಪ ಅಂಗಡಿ ಅವರು ಲಂಚದ ಬಗ್ಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ₹ 5 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿಯೇ ಆರೋಪಿ ಫಕ್ಕೀರಗೌಡನನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ತಿಳಿಸಿದ್ದಾರೆ.
‘ಜಿಎಸ್‌ಟಿ ಸಂಖ್ಯೆ ಕಾರಣಕ್ಕೆ ಪಡಿತರ ಚೀಟಿ ರದ್ದಾಗಿತ್ತು. ಅದನ್ನು ಸರಿಪಡಿಸಿಕೊಳ್ಳಲು ವಾಣಿಜ್ಯ ತೆರಿಗೆ ಇಲಾಖೆಯ ಪತ್ರದ ಅವಶ್ಯಕತೆಯಿತ್ತು. ಅದೇ ಪತ್ರಕ್ಕಾಗಿ ಆರೋಪಿ ಫಕ್ಕೀರಗೌಡ, ₹ 20 ಸಾವಿರ ಲಂಚ ಕೇಳಿದ್ದ. ಅಷ್ಟು ನೀಡಲು ಸಾಧ್ಯವಿಲ್ಲವೆಂದು ದೂರುದಾರ ಹೇಳಿದ್ದರು. ಅಂತಿಮವಾಗಿ ₹ 15 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.