ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಹಾರಾಜಪೇಟೆ ಬಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಗುರುವಾರ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮಸ್ಯೆ ಆಲಿಸಿ ಪರಿಶೀಲನೆ ನಡೆಸಿದರು.
ವಿದ್ಯಾಲಯದ ಅಡುಗೆ ಮನೆ ಪರಿಶೀಲಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳ ಜೊತೆಗೆ ಊಟ ಮಾಡಿ ಸಮಸ್ಯೆ ಕೇಳಿದರು. ನಂತರ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾಲಯದ ಆಡಳಿತ ಸಮಿತಿ ಸಭೆ ಹಾಗೂ ಪ್ರವೇಶ ಪರೀಕ್ಷೆ ಪೂರ್ವಭಾವಿ ಸಭೆ ಜರುಗಿತು.
‘ಶಾಲೆಯಲ್ಲಿರುವ 11 ಹಾಗೂ 12ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು ಭೋಧನಾ ಕೊಠಡಿಗಳ ಕೊರತೆಯಿದೆ. ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಬೀದಿದೀಪಗಳು ಸರಿಯಾಗಿಲ್ಲ’ ಎಂದು ಶಿಕ್ಷಕರು ಸಮಸ್ಯೆ ಹೇಳಿಕೊಂಡರು.
‘ವಿದ್ಯಾಲಯದ ಪ್ರಾರ್ಥನಾ ಸಭಾಂಗಣದಲ್ಲಿ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ವಿದ್ಯಾರ್ಥಿಗಳು ನಿಂತುಕೊಳ್ಳಲು ತೊಂದರೆಯಾಗಿದೆ. ಚಾವಣಿ ಹಾಕಿಸಬೆಕು. ವಿದ್ಯಾಲಯಕ್ಕೆ ಎನ್‌ಸಿಸಿ ಕೆಡೆಟ್ ಘಟಕ ಸ್ಥಾಪಿಸಬೇಕು. ಗ್ರಂಥಾಲಯಕ್ಕೆ ಕೊಠಡಿ ಕಟ್ಟಿಸಿಕೊಡಬೇಕು. ಮಕ್ಕಳ ಆರೋಗ್ಯ ತಪಾಸಣೆಗೆ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರ ಮಾಡಿಸಬೇಕು. ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಮಕ್ಕಳು ಓದಲು ತೊಂದರೆಯಾಗುತ್ತಿದೆ’ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಬೋಧನಾ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ತಯಾರಿ ಕಳುಹಿಸಿದರೆ, ಕ್ರಮ ಜರುಗಿಸಲಾಗುವುದು. ಸೋಲಾರ್ ವಿದ್ಯುತ್ ಬೀದಿದೀಪ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಹುಬ್ಬಳ್ಳಿ–ಹಾನಗಲ್ ನಡುವಿನ ಎಕ್ಸ್‌ಪ್ರೆಸ್ ಬಸ್‌ಗಳನ್ನು ವಿದ್ಯಾಲಯ ಬಳಿ ನಿಲುಗಡೆ ಮಾಡುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು’ ಎಂದು ಹೇಳಿದರು.
ಪೂರ್ವಭಾವಿ ಪರೀಕ್ಷೆಗೆ ಸಿದ್ಧರಾಗಿ: ‘ವಿದ್ಯಾಲಯದ ಪ್ರವೇಶಾತಿ ಪರೀಕ್ಷೆಯನ್ನು ಯಾವುದೇ ಅಡೆತಡೆ ಇಲ್ಲದೇ ನಡೆಯಬೇಕು. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.