
ಹಾವೇರಿ: ದೀಪಾವಳಿ ಹಬ್ಬದ ಕೊನೆಯ ಸಂಪ್ರದಾಯವಾದ ಬಲಿಪಾಡ್ಯಮಿಯನ್ನು ಜಿಲ್ಲೆಯಾದ್ಯಂತ ಜನರು ಬುಧವಾರ ಆಚರಿಸಿದರು. ಬಹುತೇಕ ಮನೆಗಳಲ್ಲಿ ಹಟ್ಟಿ ಲಕ್ಕವ್ವ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಯುವ ಸಮೂಹ, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಬ್ಬ ಆಚರಿಸಿತು.
ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಮೂರು ದಿನವೂ ಜನರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು. ಮೊದಲ ದಿನ ನೀರು ತುಂಬವ ಹಬ್ಬ ಹಾಗೂ ಮರುದಿನ ಅಮವಾಸ್ಯೆ ಆಚರಣೆಯಿತ್ತು. ಬುಧವಾರ ಬಲಿಪಾಡ್ಯಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದೀಪಾವಳಿಯನ್ನು ಹಟ್ಟಿ ಹಬ್ಬವೆಂದು ಆಚರಿಸುವ ಸಂಪ್ರದಾಯ ಹಾವೇರಿ ಜಿಲ್ಲೆಯಲ್ಲಿದೆ. ಹೀಗಾಗಿ, ಗೋವುಗಳ ಸಗಣಿಯಿಂದ ಮಾಡಿದ ಹಟ್ಟಿ ಲಕ್ಕವ್ವ ದೇವರಿಗೆ ಜನರು ಪೂಜೆ ಸಲ್ಲಿಸುತ್ತಾರೆ. ನಗರ ಹಾಗೂ ಗ್ರಾಮೀಣ ಭಾಗದ ಮನೆಗಳ ಒಳಗೆ, ಮನೆ ಅಂಗಳದಲ್ಲಿ ಬುಧವಾರ ಹಟ್ಟಿ ಲಕ್ಕವ್ವ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು.
ಸಗಣಿ ಉಂಡಿಗಳಿಂದ ಪಾಂಡವರು, ಲಕ್ಷ್ಮಿ ಸೇರಿದಂತೆ ಹಲವು ದೇವರ ಆಕೃತಿಗಳನ್ನು ಮಾಡಿ ಪ್ರತಿಷ್ಠಾಪನೆ ಮಾಡಿದ್ದರು. ಅದೇ ಸ್ಥಳವನ್ನು ಕಬ್ಬು, ಬಾಳೆ ಗಿಡ, ಜೋಳದ ಗಿಡ, ಧಾನ್ಯಗಳ ತೆನೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಅಲಂಕರಿಸಿದ್ದರು. ಪದ್ಧತಿಯಂತೆ ದೇವರಿಗೆ ಪೂಜೆ ಮಾಡಿ, ನೈವೇದ್ಯ ಹಿಡಿದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಡಗರ ಹೆಚ್ಚಿತ್ತು. ಗ್ರಾಮದ ಜನರು ನಸುಕಿನಿಂದ ಹಟ್ಟಿ ಲಕ್ಕಮ್ಮ ಪೂಜೆ ತಯಾರಿ ಮಾಡಿದರು. ಮನೆಯೊಳಗೆ ಹಾಗೂ ಜಾನುವಾರು ಕೊಟ್ಟಿಗೆಗಳಲ್ಲಿ ಸಗಣಿಯಿಂದ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿದ್ದರು. ಮಕ್ಕಳು, ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಮೆರಗು ಹೆಚ್ಚಿಸಿದರು.
ಸಿಹಿ ತಿನಿಸು, ಕೋಡಬೇಳೆ, ಚಕ್ಕುಲಿ ಸೇರಿದಂತೆ ವಿವಿಧ ತಿನಿಸುಗಳನ್ನು ಹಬ್ಬಕ್ಕಾಗಿ ಸಿದ್ಧಪಡಿಸಲಾಗಿತ್ತು. ಕುಟುಂಬಸ್ಥರು ಹಾಗೂ ಸಂಬಂಧಿಕರು, ನೈವೇದ್ಯ ನಂತರ ಸಹಭೋಜನ ಸವಿದರು. ಹಲವು ಅಂಗಡಿಗಳಲ್ಲಿಯೂ ಬುಧವಾರ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ರೈತರು ಜಮೀನುಗಳಿಗೆ ತೆರಳಿ ಚರಕ ಚೆಲ್ಲಿ ಭೂ ತಾಯಿಗೂ ಪೂಜೆ ಮಾಡಿದರು.
ರಾತ್ರಿ ದೀಪ, ಪಟಾಕಿ: ಬುಧವಾರ ಸಂಜೆ ಮನೆ, ಅಂಗಡಿಗಳ ಎದುರು ದೀಪಗಳನ್ನು ಹಚ್ಚಿ ಹಬ್ಬ ಆಚರಿಸಲಾಯಿತು. ನಂತರ, ಪಟಾಕಿಗಳ ಸದ್ದು ಜೋರಾಗಿತ್ತು.
ಮಹಿಳೆಯರು, ದೀಪಗಳನ್ನು ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಕ್ಕಳು, ದೀಪಗಳ ಜೊತೆಯಲ್ಲಿ ಪಟಾಕಿಗಳನ್ನು ಹಚ್ಚಿದರು.
ರೋಮಾಂಚನಕಾರಿ ಹೋರಿ ಹಬ್ಬ : ಜಿಲ್ಲೆಯ ಬಹುತೇಕ ಗ್ರಾಮ ಹಾಗೂ ನಗರಗಳಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ತರಹೇವಾರಿ ಹೆಸರಿನ ಹೋರಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು.
ಹೋರಿಗಳು ರಾಜ ಗಾಂಭಿರ್ಯತೆಯಿಂದ ಹೆಜ್ಜೆ ಹಾಕುತ್ತ ಓಡಿದವು. ಯುವಕರು ಹೋರಿಯನ್ನು ಹಿಡಿಯಲು ಪ್ರಯತ್ನಿಸಿದ್ದರು. ಜನರ ಮಧ್ಯೆದಲ್ಲಿ ಎಲ್ಲರನ್ನೂ ಹೆದರಿಸುತ್ತಿದ್ದ ಹೋರಿಗಳು ಓಡಿದ ದೃಶ್ಯಗಳು ರೋಮಾಂಚನಕಾರಿಯಾಗಿದ್ದವು.
ಕುರಿಗಾರರಿಂದ ವಿಶೇಷ ಪೂಜೆ: ಸಂಚಾರಿ ಕುರಿಗಾರರು ತಮ್ಮ ಕುರಿಗಳ ಸಮೇತ ಯಾವ ದಿಕ್ಕಿಗೆ ಹೋಗಬೇಕೆಂಬುದನ್ನು ನಿರ್ಧರಿಸಲು ದೀಪಾವಳಿಯಂದು ವಿಶೇಷ ಪೂಜೆ ಸಲ್ಲಿಸಿದರು. ಕುರಿಗಳ ಹಿಂಡಿನ ಜೊತೆಯಲ್ಲಿ ಮಂಟಪ ನಿರ್ಮಿಸಿ ಹಾಲು ಉಕ್ಕಿಸಿ ದಿಕ್ಕು ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.