ADVERTISEMENT

ಹಾವೇರಿ ಜಿಲ್ಲಾಧಿಕಾರಿ ಕಚೇರಿಗೆ ಚತುಷ್ಪಥ ರಸ್ತೆ: ಸಿಎಂಗೆ ಶಾಸಕರ ಮನವಿ

ಮುಖ್ಯಮಂತ್ರಿ ಜೊತೆ ಹಾವೇರಿ ಶಾಸಕರ ಸಭೆ | ಕ್ಷೇತ್ರವಾರು ಬೇಡಿಕೆ ಸಲ್ಲಿಸಿದ ನಾಯಕರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 3:09 IST
Last Updated 1 ಆಗಸ್ಟ್ 2025, 3:09 IST
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಯ ಶಾಸಕರ ಜೊತೆ ಗುರುವಾರ ಸಭೆ ನಡೆಸಿದರು
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಯ ಶಾಸಕರ ಜೊತೆ ಗುರುವಾರ ಸಭೆ ನಡೆಸಿದರು   

ಹಾವೇರಿ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿಯಾದ ಶಾಸಕರು, ವಿಶೇಷ ಸಭೆ ನಡೆಸಿ ಕ್ಷೇತ್ರವಾರು ಬೇಡಿಕೆ ಸಲ್ಲಿಸಿದರು.

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಿದ ಜಿಲ್ಲೆಯ ಜನರಿಗೆ, ವಿಶೇಷ ಕೊಡುಗೆ ನೀಡಲು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಜೊತೆಗೆ, ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಗಮನಕ್ಕೆ ತರುವಂತೆ ಶಾಸಕರಿಗೆ ತಿಳಿಸಿದ್ದರು.

ಬೇಡಿಕೆಗಳ ಪಟ್ಟಿ ಸಮೇತ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ಶಾಸಕರು, ಕ್ಷೇತ್ರ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಕೋರಿದರು.

ADVERTISEMENT

ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ ₹ 50 ಕೋಟಿ ನೀಡುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಘೋಷಿಸಿದ್ದಾರೆ. ಇದರ ಜೊತೆಯಲ್ಲಿಯೇ ಅಭಿವೃದ್ಧಿ ಕೆಲಸಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆಯೂ ಶಾಸಕರು ಬೇಡಿಕೆ ಮುಂದಿಟ್ಟರು.

ಚತುಷ್ಪಥ ರಸ್ತೆಯ ಬೇಡಿಕೆ: ಹಾವೇರಿ ಜಿಲ್ಲಾ ಕೇಂದ್ರವಾದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದ ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ‘ಜಿಲ್ಲಾ ಕೇಂದ್ರವಾದ ಹಾವೇರಿಯಿಂದ 7.50 ಕಿ.ಮೀ. ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿಯಿದೆ. ಆದರೆ, ಅಲ್ಲಿಗೆ ಹೋಗಿಬರುವ ರಸ್ತೆ ಕಿರಿದಾಗಿದೆ. ಇದರಿಂದಾಗಿ ಜನರ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇಂಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು ಪ್ರತ್ಯೇಕ ಅನುದಾನ ನೀಡಬೇಕು’ ಎಂದು ಕೋರಿದರು.

‘ಜೆ.ಪಿ. ವೃತ್ತದಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಇಜಾರಿ ಲಕಮಾಪುರ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ದೇವಗಿರಿ ಯಲ್ಲಾಪುರ, ಜಿಲ್ಲಾಧಿಕಾರಿ ಕಚೇರಿಯವರೆಗೂ 7.50 ಕಿ.ಮೀ. ಚತುಷ್ಪಥ ರಸ್ತೆ ಆಗಬೇಕಿದೆ. ಇದಕ್ಕಾಗಿ ಸುಮಾರು ₹ 50 ಕೋಟಿ ಬೇಕಾಗಬಹುದು. ಇದೊಂದು ರಸ್ತೆಯಾದರೆ, ಜಿಲ್ಲಾಧಿಕಾರಿ ಕಚೇರಿಗೆ ಸಂಚರಿಸಲು ಸುಲಭವಾಗಲಿದೆ’ ಎಂದರು.

‘ಕ್ಷೇತ್ರದಲ್ಲಿರುವ ಲೋಕೋಪಯೋಗಿ ಇಲಾಖೆ ರಸ್ತೆಗಳು ಹದಗೆಟ್ಟಿದ್ದು, ಗುಂಡಿಗಳು ಬಿದ್ದು ಜನರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇಂಥ ರಸ್ತೆಗಳನ್ನು ಡಾಂಬರೀಕರಣ ಮಾಡಲು ₹ 50 ಕೋಟಿ ನೀಡಬೇಕು. ಶಿಕ್ಷಣದ ಅಭಿವೃದ್ಧಿ ಹಾಗೂ ಸಮುದಾಯಗಳ ಬೇಡಿಕೆಗಳ ಈಡೇರಿಸಲು ಅನುದಾನದ ಅಗತ್ಯವಿದೆ’ ಎಂದು ಲಮಾಣಿ ತಿಳಿಸಿದರು.

‘ಹಾವೇರಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಕಂಚಾರಗಟ್ಟಿ ಬಳಿ ಬಾಂದಾರ ನಿರ್ಮಾಣಕ್ಕೆ ಈಗಾಗಲೇ ₹ 50 ಕೋಟಿ ಮಂಜೂರಾಗಿದೆ. ಬಾಕಿ ₹ 100 ಕೋಟಿ ಬಿಡುಗಡೆ ಮಾಡಬೇಕು. ಆಗಸ್ಟ್ 4ರಂದು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.

₹ 100 ಕೋಟಿ ಕೇಳಿದ ಪಠಾಣ: ಸಭೆಯಲ್ಲಿ ಹಾಜರಿದ್ದ ಶಿಗ್ಗಾವಿ ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ, ‘ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಘೋಷಣೆ ಮಾಡಲಾಗಿದೆ. ಈ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಕೋರಿದರು.

‘ಬಂಕಾಪುರ, ಶಿಗ್ಗಾವಿ ಹಾಗೂ ಸವಣೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡಬೇಕು’ ಎಂದೂ ವಿನಂತಿಸಿದರು.

ಹಿರೇಕೆರೂರು ಶಾಸಕರು ಯು.ಬಿ. ಬಣಕಾರ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಸಹ ತಮ್ಮ ಕ್ಷೇತ್ರದ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಬಳಿ ಹೇಳಿಕೊಂಡರು.

ಎಲ್ಲರ ಬೇಡಿಕೆ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಬರುವ ದಿನಗಳಲ್ಲಿ ಒಂದೊಂದೇ ಬೇಡಿಕೆ ಇರಿಸಲು ಗಮನ ಹರಿಸುವುದಾಗಿ ಭರವಸೆ ನೀಡಿದರು.

Highlights - ಬೆಂಗಳೂರಿನಲ್ಲಿ ನಡೆದ ಸಭೆ ₹100 ಕೋಟಿ ಮಂಜೂರಿಗೆ ಪಠಾಣ ಬೇಡಿಕೆ

‘ರಾಣೆಬೆನ್ನೂರಿಗೆ ಹೊರವರ್ತುಲ ರಸ್ತೆ’

‘ಹಾವೇರಿ ಜಿಲ್ಲೆಯ ಪ್ರಮುಖ ನಗರವಾಗಿರುವ ರಾಣೆಬೆನ್ನೂರು ಏರುಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಇಂಥ ನಗರಕ್ಕೆ ಹೊರವರ್ತುಲ ರಸ್ತೆಯ ಅಗತ್ಯವಿದ್ದು ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು’ ಎಂದು ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಮುಖ್ಯಮಂತ್ರಿ ಎದುರು ಕೋರಿದರು.

ಸಭೆಯಲ್ಲಿ ಮಾತನಾಡಿದ ಅವರು ‘ರಾಣೆಬೆನ್ನೂರಿನ ಹಳೇ ಪ್ರದೇಶಗಳಿಗೆ ಮಾತ್ರ ನಿರಂತರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹೊಸ ಪ್ರದೇಶಗಳಿಗೂ ಯೋಜನೆ ವಿಸ್ತರಿಸಬೇಕು’ ಎಂದು ವಿನಂತಿಸಿದರು. ‘ಶಾಸಕರ ಅನುದಾನವನ್ನು ಖರ್ಚು ಮಾಡಲು ಅಧಿಕಾರಿಗಳು ಸಾಕಷ್ಟು ಷರತ್ತುಗಳನ್ನು ಹಾಕುತ್ತಿದ್ದಾರೆ. ಕ್ಷೇತ್ರದ ಶಿಕ್ಷಣದ ಅಭಿವೃದ್ಧಿಗಾಗಿ ನಾನು ಗಮನ ಹರಿಸಿದ್ದೇನೆ. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿಲ್ಲ. ಯಾವುದೇ ಷರತ್ತು ಇಲ್ಲದೇ ಶಾಸಕರ ಅನುದಾನವನ್ನು ಸ್ವವಿವೇಚನೆಯಿಂದ ಬಳಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

‘ಆಶ್ರಯ ಮನೆಗಳ ನಿರ್ಮಾಣಕ್ಕೆ ನೀಡುತ್ತಿರುವ ವೈಯಕ್ತಿಕ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಹಣ ಕಡಿಮೆ ಇರುವುದರಿಂದ ಮನೆ ಕಟ್ಟಿಸಿಕೊಳ್ಳಲು ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕ್ಷೇತ್ರಕ್ಕೆ 1000 ಮನೆಗಳನ್ನು ನೀಡುವ ಬದಲು 500 ಮನೆ ನೀಡಿ ಹೆಚ್ಚಿನ ಅನುದಾನ ಕೊಡಬೇಕು’ ಎಂದು ಮನವಿ ಮಾಡಿಕೊಂಡರು.

‌ಹಿಮ್ಸ್‌ನಲ್ಲಿ 300 ಬೆಡ್ ಆಸ್ಪತ್ರೆ

‘ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಹಿಮ್ಸ್) ಅತ್ಯುತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಪ್ರತ್ಯೇಕವಾಗಿ 300 ಬೆಡ್‌ಗಳ ಆಸ್ಪತ್ರೆಯ ಅಗತ್ಯವಿದ್ದು ಅದಕ್ಕೆ ಅನುದಾನ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿಯನ್ನು ಕೋರಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ‘ಜಿಲ್ಲೆಯಲ್ಲಿ ಕುಡಿಯುವ ನೀರು ಶಿಕ್ಷಣ ವೈದ್ಯಕೀಯ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಅಭಿವೃದ್ಧಿಯಾಗುತ್ತಿದೆ. ಮತ್ತಷ್ಟು ಅಭಿವೃದ್ಧಿ ಅಗತ್ಯವಿದ್ದು ಮಾದರಿ ಜಿಲ್ಲೆ ಮಾಡಲು ಸಹಕರಿಸಬೇಕು’ ಎಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.