ಹಾವೇರಿ: ಇಲ್ಲಿಯ ಹಾವೇರಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಹಿಮ್ಸ್) ಹಾಗೂ ಜಿಲ್ಲಾಸ್ಪತ್ರೆ ಸೇವೆಯಿಂದ ಸ್ವಯಂ ಬಿಡುಗಡೆಗೊಂಡು ರಾಜ್ಯ ಆಯುಕ್ತಾಲಯಕ್ಕೆ ಹೋಗಿದ್ದ 13 ವೈದ್ಯರನ್ನು, ಪುನಃ ಜಿಲ್ಲೆಯ ಸೇವೆಗೆ ವಾಪಸು ಕಳುಹಿಸಲಾಗಿದೆ. ಇಂಥ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸೋಮವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ, ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಜಿಲ್ಲಾಸ್ಪತ್ರೆಯ ನಿರ್ವಹಣೆ ಜವಾಬ್ದಾರಿಯನ್ನು ಹಿಮ್ಸ್‌ಗೆ ವಹಿಸಲಾಗಿದೆ. ಹಿಮ್ಸ್‌ನಲ್ಲಿ ಪ್ರಾಧ್ಯಾಪಕರಾಗಿರುವವರು, ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ಹಾಗೂ ಅದಕ್ಕಿಂತ ಹೆಚ್ಚು ವರ್ಷ ಒಂದೇ ಸ್ಥಳದಲ್ಲಿದ್ದ ಕಾರಣಕ್ಕೆ 13 ವೈದ್ಯರನ್ನು ಸ್ವಯಂ ಬಿಡುಗಡೆ ಮಾಡಿ, ರಾಜ್ಯ ಆಯುಕ್ತಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶಿಸಿತ್ತು.
ವೈದ್ಯರು ನಿಗದಿತ ದಿನದಂದು ಕರ್ತವ್ಯದಿಂದ ಬಿಡುಗಡೆಯಾಗಿ ಆಯುಕ್ತಾಲಯಕ್ಕೆ ವರದಿ ಮಾಡಿಕೊಂಡಿದ್ದರು. ಇದರಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಉಂಟಾಗಿತ್ತು. ರೋಗಿಗಳ ತಪಾಸಣೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕೆಲಸಕ್ಕೆ ಅಡ್ಡಿಯಾಗಿತ್ತು. ಕೆಲ ವಿಭಾಗದಲ್ಲಿ ಶಸ್ತ್ರಚಿಕಿತ್ಸೆಯನ್ನೇ ಬಂದ್ ಮಾಡಲಾಗಿತ್ತು. ಆಸ್ಪತ್ರೆಗೆ ಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಪ್ರಸಂಗಗಳೂ ನಡೆದವು.
ವೈದ್ಯರ ಕೊರತೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಸಮಸ್ಯೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರು. ಹೀಗಾಗಿ, ಎಲ್ಲ 13 ವೈದ್ಯರನ್ನು ಆಯುಕ್ತಾಲಯದಿಂದ ಬಿಡುಗಡೆಗೊಳಿಸಿ ಹಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯ ಸೇವೆಗೆ ಕಳುಹಿಸಿದ್ದಾರೆ. ಎಲ್ಲ ವೈದ್ಯರು ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
‘ಶನಿವಾರ ಹಾಗೂ ಭಾನುವಾರ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಸೋಮವಾರ ಎಲ್ಲ ವೈದ್ಯರು ಲಭ್ಯವಾಗುತ್ತಾರೆ’ ಎಂದು ತಿಳಿದಿದ್ದ ಜನರು, ಸೋಮವಾರ ನಸುಕಿನಲ್ಲಿಯೇ ಆಸ್ಪತ್ರೆಗೆ ಬಂದಿದ್ದರು. ಚೀಟಿ ಮಾಡಿಸುವ ಸ್ಥಳದಲ್ಲಿ ಸರದಿಯಲ್ಲಿ ನಿಂತು, ಚೀಟಿ ಪಡೆದುಕೊಂಡರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಚೀಟಿ ಪಡೆಯಲು ವ್ಯವಸ್ಥೆ ಮಾಡಿಸಲಾಗಿದ್ದು, ಅಲ್ಲೆಲ್ಲ ಸೋಮವಾರ ಜನಸಂದಣಿ ಕಂಡುಬಂತು. ಜನರು ಕಿಕ್ಕಿರಿದು ಸೇರಿ, ಸರದಿ ಪ್ರಕಾರ ಸಾಗಿ ಚೀಟಿ ಮಾಡಿಸಿದರು. ತಪಾಸಣೆ ನಂತರ, ವಿವಿಧ ಪರೀಕ್ಷೆಗಳಿಗಾಗಿಯೇ ಸರದಿಯಲ್ಲಿ ನಿಂತು ಹಣ ತುಂಬಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಜನರು ಕಿಕ್ಕಿರಿದು ತುಂಬಿದ್ದರು. ಆಸ್ಪತ್ರೆ ಕಟ್ಟಡದ ಪ್ರವೇಶ ದ್ವಾರದ ಒಳಗೆ ಚೀಟಿ ಮಾಡಿರುವ ಕೌಂಟರ್ ಇದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ, ಕಟ್ಟಡದ ಹೊರಗೆಯೂ ಸರದಿ ಇತ್ತು. ಗರ್ಭಿಣಿಯರು, ಮಕ್ಕಳನ್ನು ಎತ್ತಿಕೊಂಡ ತಾಯಂದಿರು, ಅವರ ಸಂಬಂಧಿಕರು ಸರದಿಯಲ್ಲಿ ನಿಂತುಕೊಂಡಿದ್ದ ದೃಶ್ಯಗಳು ಕಂಡುಬಂದವು.
‘ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಬಂದಿದ್ದೆ. ವೈದ್ಯರು ಇಲ್ಲವೆಂದು ಹೇಳಿ ವಾಪಸು ಕಳುಹಿಸಿದ್ದರು. ಸೋಮವಾರ ವೈದ್ಯರು ಬರುವ ಮಾಹಿತಿ ಸಿಕ್ಕಿತು. ಹೀಗಾಗಿ, ಆಸ್ಪತ್ರೆಗೆ ಬಂದು ಸರದಿಯಲ್ಲಿ ನಿಂತುಕೊಂಡು ಚೀಟಿ ಮಾಡಿಸುತ್ತಿದ್ದೇನೆ’ ಎಂದು ಹಾವೇರಿ ತಾಲ್ಲೂಕಿನ ಆಲದಕಟ್ಟಿಯ ವೃದ್ಧೆ ಶಂಕ್ರಮ್ಮ ಹೇಳಿದರು.
ಬ್ಯಾಡಗಿಯ ಮಹಿಳೆ ರತ್ನಾ, ‘ನನ್ನ ಸಹೋದರಿ ಗರ್ಭಿಣಿ. ಆಕೆಯ ಆರೋಗ್ಯ ತಪಾಸಣೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಮಾಡಿಸುತ್ತಿದ್ದೇವೆ. ಕಳೆದ ವಾರ ವೈದ್ಯರು ಇರಿದಿದ್ದರಿಂದ, ಆಸ್ಪತ್ರೆಗೆ ಬಂದು ವಾಪಸು ಹೋಗಿದ್ದೆವು. ವೈದ್ಯರು ಇರುವುದು ಗೊತ್ತಾಗಿ, ಸೋಮವಾರ ಮತ್ತೆ ಬಂದಿದ್ದೇವೆ. ಆದರೆ, ಇಲ್ಲಿ ಸರದಿ ಸಾಲು ದೊಡ್ಡದಿದೆ’ ಎಂದರು.
ಕೆಲ ವಿಭಾಗದ ಶಸ್ತ್ರಚಿಕಿತ್ಸೆ ಬಂದ್ ತೊಂದರೆ ಅನುಭವಿಸಿದ ಗರ್ಭಿಣಿಯರು, ಚಿಕ್ಕಮಕ್ಕಳ ತಾಯಂದಿರರು ವಿವಿಧ ತಪಾಸಣಾ ಕೇಂದ್ರಗಳಲ್ಲೂ ಸರದಿಸಾಲು
ವೈದ್ಯರ ಪಟ್ಟಿ ಸ್ವಯಂ ಬಿಡುಗಡೆಗೊಂಡು ನಂತರ ಹಾವೇರಿಗೆ ವಾಪಸು ಬಂದ ವೈದ್ಯರು: ಡಾ. ದೇವೇಂದ್ರ ಎಚ್. ಡಾ. ಮಲ್ಲಪ್ಪ ಡಾ. ಮಹದೇವ ಬಣಕಾರ ಡಾ. ಪುಟ್ಟಯ್ಯ ಡಾ. ಸಂದೀಪ್ ಎಂ.ಬಿ. ಡಾ. ಮಹಮ್ಮದ್ ಸಾದಿಕ್ ಬನ್ನಿಮಟ್ಟಿ ಡಾ. ಸಂತೋಷ ಶಂಕರ ಮೂಲಿಮನಿ ಡಾ. ಪ್ರದೀಪ್ ಕುಮಾರ ಡಾ. ಚಾವಡಿ ವಿವೇಕ ಮನೋಹರ ಡಾ. ಅಶೋಕ ಎಂ.ಜಿ. ಡಾ. ನಾಗಭೂಷಣ ಡಾ. ನವೀನ ಸಂಗೂರಮಠ ಡಾ. ಮಂಜುನಾಥ ಮರಿಗೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.