ADVERTISEMENT

ಮನೆ ಬಾಗಿಲಲ್ಲೇ ತರಕಾರಿ ಖರೀದಿ ಆರಂಭ

ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ವ್ಯಾಪಾರಿಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 15:07 IST
Last Updated 28 ಮಾರ್ಚ್ 2020, 15:07 IST
ಹಾವೇರಿಯ ಎಂ.ಜಿ.ರಸ್ತೆಯಲ್ಲಿ  ಬೈಕ್‌ ಮೇಲೆ ಓಡಾಡುತ್ತಿರುವ ಸವಾರರಿಗೆ ಪೊಲೀಸರು ತಾಕಿತು ಮಾಡಿದರು
ಹಾವೇರಿಯ ಎಂ.ಜಿ.ರಸ್ತೆಯಲ್ಲಿ  ಬೈಕ್‌ ಮೇಲೆ ಓಡಾಡುತ್ತಿರುವ ಸವಾರರಿಗೆ ಪೊಲೀಸರು ತಾಕಿತು ಮಾಡಿದರು   

ಹಾವೇರಿ: ಕೊರೊನಾ ವೈರಸ್‌ ಸೋಂಕು ತಡೆಯಲು ಜಿಲ್ಲೆಯಲ್ಲಿ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, ಜಿಲ್ಲಾಡಳಿತ ಹಾಗೂ ನಗರಸಭೆಯು ಸಾರ್ವಜನಿಕರ ಮನೆ ಬಾಗಿಲಿಗೆ ತರಕಾರಿ ಖರೀದಿಸುವ ವ್ಯವಸ್ಥೆಯನ್ನು ಶನಿವಾರದಿಂದಲೇ ಆರಂಭಿಸಿದೆ.

ಈ ನಿಟ್ಟಿನಲ್ಲಿ ಹಾವೇರಿ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ತರಕಾರಿ ಮಾರಾಟ ಆರಂಭವಾಗಿದ್ದು, ಬಡಾವಣೆ ನಿವಾಸಿಗಳು ಖರೀದಿಸುತ್ತಿದ್ದಾರೆ.

ಗುರುವಾರ ಲಾಲ್‌ಬಹದ್ಧೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ಹೆಚ್ಚು ಜನರು ಗುಂಪುಗೂಡುತ್ತಿದ್ದರು. ಅದಕ್ಕಾಗಿ ಮಾರುಕಟ್ಟೆ ದಿನಪೊಲೀಸರು ಅಂಗಡಿಗಳನ್ನು ತೆರವುಗೊಳಿಸಿದ್ದರು. ಸಾಮಾಜಿಕ ಅಂತರ ಕಾಪಾಡದೇ ಜನರು ಗುಂಪುಗೂಡುತ್ತಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಹೀಗಾಗಿ ವಾರ್ಡ್‌ವಾರು ತಳ್ಳುಗಾಡಿ ಹಾಗೂ ಟಂಟಂಗಳಲ್ಲಿ ತರಕಾರಿ ಮಾರಲು ಅನುವು ಮಾಡಿಕೊಡಲಾಗಿದೆ.

ADVERTISEMENT

ಬಡಾವಣೆಗಳಲ್ಲೂ ದಿಗ್ಬಂಧನ!:

ಅನಗತ್ಯವಾಗಿ ರಸ್ತೆಯ ಮೇಲೆ ಬೈಕ್‌ ಸವಾರ ಓಡಾಟವನ್ನು ನಿಲ್ಲಿಸುವುದಕ್ಕಾಗಿ ಪೊಲೀಸ್ ಇಲಾಖೆ ಬಡಾವಣೆಗಳ ರಸ್ತೆಗಳಲ್ಲೂ ಬ್ಯಾರಿಕೇಡ್‌ ಅಳವಡಿಸಿದೆ. ಇದರಿಂದ ಕೆಲವು ಬಡಾವಣೆಯ ಸಾರ್ವಜನಿಕರು ಹಾಲು, ದಿನಸಿ ಖರೀದಿಸಬೇಕೆಂದರೆ ಮುಖ್ಯ ರಸ್ತೆಗೆ ಬರಲು ದೂರದಿಂದ ಸಾಗಬೇಕಾದ ಅನಿವಾರ್ಯತೆ ಇದೆ. ಎಲ್ಲ ಅಡ್ಡ ರಸ್ತೆಗಳಲ್ಲಿ ಬ್ಯಾರಿಗೇಡ್‌ ಹಾಗೂ ಗೇಟ್‌ಗಳನ್ನು ಅಳವಡಿಸಿರುವುದರಿಂದ ಹೇಗೆ ಓಡಾಡಿದರೂ ಪೊಲೀಸರ ಕೈಗೆ ಸಿಗುವಂತೆ ದಿಗ್ಬಂಧನವನ್ನು ನಗರದಲ್ಲಿ ಅನುಷ್ಠಾನಗೊಂಡಿದೆ.

ಕಾರು ಹಾಗೂ ಬೈಕ್‌ಗಳಲ್ಲಿ ಅನಗತ್ಯ ಓಡಾಡುವುದನ್ನು ನಿಲ್ಲಿಸುವುದಕ್ಕಾಗಿ ಜಿಲ್ಲಾಡಳಿತವು ಸಾಮಾನ್ಯರಿಗೆ ಪೆಟ್ರೋಲ್‌ ಮತ್ತು ಡಿಸೇಲ್‌ ಹಾಕುವುದನ್ನು ನಿರ್ಬಂಧಿಸಿದೆ. ತುರ್ತು ಕೆಲಸ ಮಾಡುವ ವೈದ್ಯರು, ಬ್ಯಾಂಕ್‌ ಸಿಬ್ಬಂದಿ, ಪೊಲೀಸರು, ಖಜಾನೆ ಇಲಾಖೆ, ಪತ್ರಕರ್ತರಿಗೆ ಮಾತ್ರ ಅವಕಾಶವನ್ನು ಕಲ್ಪಿಸಿದೆ.

ಸವಾರರಿಗೆ ಲಾಠಿ ಏಟು

ನಗರದ ಜೆ.ಎಚ್‌.ಪಟೇಲ್‌ ವೃತ್ತ, ರೈಲು ನಿಲ್ದಾಣ ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರ ಮೇಲೆ ಶನಿವಾರವೂ ಪೊಲೀಸ್‌ ಸಿಬ್ಬಂದಿ ಲಾಠಿ ಏಟು ನೀಡುತ್ತಿದ್ದರು.

ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

ಬ್ಯಾಡಗಿ ತಾಲ್ಲೂಕಿನಲ್ಲಿ 2 ಟನ್‌ ರೇಷ್ಮೆ ಗೂಡು ಮಾರಾಟಕ್ಕೆ ಸಿದ್ಧವಿದೆ. ಮೂರು ದಿನದೊಳಗೆ ಮಾರುಕಟ್ಟೆಗೆ ಹೋಗಬೇಕು. ಇಲ್ಲದಿದ್ದರೆ ಗೂಡುಗಳು ಹಾಳಾಗುತ್ತವೆ. ಈಗ ಕರ್ಫ್ಯೂ ಇರುವುದರಿಂದ ಸಾಗಣೆಗೆ ಅಡ್ಡಿಯಾಗಿದೆ. ಕೊರೊನಾ ಬರುವುದಕ್ಕೆ ಮುಂಚೆ ಕೆ.ಜಿ.ಗೆ ₹600 ದರವಿತ್ತು. ಈಗ ₹150ಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಬೆಂಗಳೂರು, ರಾಮನಗರ, ಕೊಳ್ಳೇಗಾಲಕ್ಕೆ ರೇಷ್ಮೆ ಗೂಡು ಸಾಗಣೆ ಮಾಡಬೇಕು. ಆದರೆ ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಅನುಮತಿ ಸಿಗುತ್ತಿಲ್ಲ. ಹೀಗಾಗಿ ಹಾವೇರಿ, ಚಳಗೇರಿಯಲ್ಲಿರುವ ರೇಷ್ಮೆ ಮಿಲ್‌ಗಳಿಗೇ ಗೂಡುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲಿ ಉತ್ತಮ ದರ ಸಿಗುತ್ತಿಲ್ಲ. ಕಾರಣ ಮಿಲ್‌ನವರು ಕಾರ್ಮಿಕರ ಕೊರತೆಯಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಲಾಕ್‌ಡೌನ್‌ನಿಂದ ರೈತರ ಸಂಕಷ್ಟ ಹೇಳತೀರದಾಗಿದೆ ಎಂದು ಮಲ್ಲಿಕಾರ್ಜುನ ಹೇಳಿದರು.

ತರಕಾರಿ ಖರೀದಿಗಾಗಿ ದೂರವಾಣಿ ಸಂಖ್ಯೆ

ದಾನೇಶ್ವರಿ ನಗರ ಮೊ:9880271832, 9986100199, ನಾಗೇಂದ್ರನಮಟ್ಟಿ ಮೊ:7760579047, 7338493633 ಶಿವಲಿಂಗನಗರ ಮೊ:8050797144, ಯಾಲಕ್ಕಿ ಓಣಿ ಮೊ:9986346719, 9900368411, ಬಸವೇಶ್ವರನಗರ ಮೊ:8197556173, 9632272432, ಮಕಾನಗಲ್ಲಿ ಮೊ:6362952481, ಹುಮನಾಬಾದಗಲ್ಲಿ ಮೊ:9894166486, ಶಿವಾಜಿನಗರ ಮೊ:7760810256, ವಿನಾಯಕನಗರ ಮೊ:6362612086, ಪುರದ ಓಣಿ ಮೊ:7066130885, ಸುಭಾಷ ವೃತ್ತ ಮೊ:9740705807, 6363676795, ವೈಭವಲಕ್ಷ್ಮಿ ಪಾರ್ಕ್‌ ಮೊ:9019243911, ಶಿವಬಸವನಗರ ಮೊ:9611084811, ಶಾಂತಿನಗರ ಮೊ:9916245897, ಅಶ್ವಿನಿನಗರ ಮೊ:9986111403, ವಿಶ್ವತೀರ್ಥನಗರ ಮೊ:8050034213, ಹೊಸನಗರ ಮೊ:9606887504 ತರಕಾರಿಗಾಗಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.