ADVERTISEMENT

ಹಾವೇರಿ | ಕೆರೆ ಜಾಗ ಒತ್ತುವರಿ: ಗಂಡಾಂತರಕ್ಕೆ ದಾರಿ

ಮಳೆಗಾಲ ಶುರುವಾಗುತ್ತಿದ್ದಂತೆ ಕೋಡಿ ಒಡೆಯುವ ಆತಂಕ * ಅಕ್ಕ– ಪಕ್ಕದವರಿಂದ ಅಕ್ರಮ ಸ್ವಾದೀನ * ಒತ್ತುವರಿ ತೆರವಿಗೆ ಜಿಲ್ಲಾಡಳಿತ ತಯಾರಿ

ಸಂತೋಷ ಜಿಗಳಿಕೊಪ್ಪ
Published 16 ಜೂನ್ 2025, 6:06 IST
Last Updated 16 ಜೂನ್ 2025, 6:06 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಲ್ಯಾಣ ಗ್ರಾಮದ ಬಳಿಯ ಕೆರೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಲ್ಯಾಣ ಗ್ರಾಮದ ಬಳಿಯ ಕೆರೆ   

ಹಾವೇರಿ: ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಪ್ರದೇಶ. ಹೂಳು ತುಂಬಿಕೊಂಡು ಹೆಚ್ಚುತ್ತಿರುವ ನೀರು. ಮಳೆ ಹೆಚ್ಚಾದರೆ ಕೋಡಿ ಒಡೆದು ಎಲ್ಲೆಂದರಲ್ಲಿ ನೀರು ನುಗ್ಗುವ ಭೀತಿ. ನುಂಗಣ್ಣರ ವಿರುದ್ಧ ಕ್ರಮ ಜರುಗಿಸದಿದ್ದರೆ, ಕೆರೆಗಳೇ ಮಾಯವಾಗುವ ಪರಿಸ್ಥಿತಿ.

ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳ ಸದ್ಯದ ವಾಸ್ತವ ಸ್ಥಿತಿಯಿದು. ಜನರು–ಜಾನುವಾರು–ಪ್ರಾಣಿ–ಪಕ್ಷಿಗಳ ಕುಡಿಯುವ ನೀರಿಗೆ ಕೆರೆಗಳೇ ಆಸರೆ. ಅಂತರ್ಜಲ ಮಟ್ಟ ಏರಿಕೆಯಲ್ಲೂ ಕೆರೆಗಳ ಪಾತ್ರ ಪ್ರಮುಖವಾಗಿದೆ. ಇಂಥ ಕೆರೆಗಳು ಇತ್ತೀಚಿನ ದಿನಗಳಲ್ಲಿ ಒತ್ತುವರಿಯಾಗಿ, ನುಂಗಣ್ಣರ ಪಾಲಾಗುತ್ತಿರುವುದು ದೊಡ್ಡ ಗಂಡಾಂತರಕ್ಕೆ ದಾರಿ ಮಾಡಿಕೊಡುತ್ತಿದೆ.

ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯಲ್ಲಿ ಬಹುತೇಕರು ರೈತರು. ಗ್ರಾಮ, ಜಮೀನು ಹಾಗೂ ಅರಣ್ಯ ಪ್ರದೇಶಗಳಲ್ಲಿ ಕೆರೆಗಳಿವೆ. ಜಮೀನು ಬಳಿಯ ಕೆರೆಗಳು, ಕೃಷಿಗೆ ಆಧಾರವಾಗಿವೆ. ಗ್ರಾಮಗಳ ಬಳಿಯ ಕೆರೆಗಳು, ಗ್ರಾಮಸ್ಥರ ಕುಡಿಯುವ ನೀರು ಹಾಗೂ ದಿನನಿತ್ಯದ ಕೆಲಸಕ್ಕೆ ಸಹಾಯಕವಾಗಿವೆ. ಅರಣ್ಯ ಪ್ರದೇಶದಲ್ಲಿರುವ ಕೆರೆಗಳು, ಪ್ರಾಣಿ–ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿವೆ.

ADVERTISEMENT

ಕೆರೆಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಕೆರೆ ನೀರು ನಂಬಿಯೇ ಹಲವು ರೈತರು, ಕೃಷಿ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆರೆಗಳು ಒತ್ತುವರಿಯಾಗುತ್ತಿರುವುದರಿಂದ, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2,058 ಕೆರೆಗಳಿವೆ. ಈ ಪೈಕಿ 225ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಆದರೆ, ಒತ್ತುವರಿ ತೆರವಿಗೆ ಯಾವುದೇ ಕಾರ್ಯಾಚರಣೆ ಆರಂಭವಾಗಿಲ್ಲ. ಹೆಚ್ಚಿನ ಕಡೆಗಳಲ್ಲಿ ಪ್ರಭಾವಿಗಳೇ ಕೆರೆ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾಗಿ ಜನರು ದೂರುತ್ತಿದ್ದಾರೆ.

ಒತ್ತುವರಿಯಾದ ಕೆರೆಗಳ ಪೈಕಿ 131 ಕೆರೆಗಳ ಒತ್ತುವರಿಯನ್ನು ತೆರವು ಮಾಡಿರುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಅದು ಸಹ ಪೂರ್ಣ ಪ್ರಮಾಣದಲ್ಲಿ ಆಗಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ.

‘ಜಿಲ್ಲೆಯ 2058 ಕೆರೆಗಳ ಸ್ಥಳಗಳಲ್ಲಿ ಭೂ ಮಾಪನಾ ಇಲಾಖೆಯ ಸಹಾಯದಿಂದ ಸರ್ವೇ ಮಾಡಿಸಲಾಗುತ್ತಿದೆ. ಸದ್ಯಕ್ಕೆ 250ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕೆರೆಗಳ ಒತ್ತುವರಿ ಪತ್ತೆಯಾಗಬಹುದು’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದಾಖಲೆಗಷ್ಟೇ ತೆರವು ಸೀಮಿತ: ‘ಕೆರೆಗಳ ಒತ್ತುವರಿ ತೆರವು ಮಾಡಿರುವುದಾಗಿ ಅಧಿಕಾರಿಗಳು ದಾಖಲೆಯಲ್ಲಿ ಮಾತ್ರ ಹೇಳುತ್ತಿದ್ದಾರೆ. ಕೆರೆ ಪ್ರದೇಶಕ್ಕೆ ಬಂದು ನೋಡಿದರೆ, ಒತ್ತುವರಿ ಯಥಾಸ್ಥಿತಿ ಮುಂದುವರಿದಿದೆ’ ಎಂದು ಹಾನಗಲ್ ತಾಲ್ಲೂಕಿನ ಬೆಳಗಾಲಪೇಟೆ ರೈತ ಚನ್ನಬಸಪ‍್ಪ ಹೇಳಿದರು.

‘ಬೆಳಗಾಲಪೇಟೆ, ನಿಸ್ಸೀಮ ಆಲದಕಟ್ಟಿ ಸೇರಿದಂತೆ ಹಲವು ಗ್ರಾಮಗಳ ಕೆರೆಗಳು ಒತ್ತುವರಿಯಾಗಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದೇವೆ. ಆದರೆ, ಯಾರೊಬ್ಬರೂ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ಇವರ ನಿರ್ಲಕ್ಷ್ಯದಿಂದ ಕೆರೆಗಳು ಅವಸಾನದತ್ತ ಸಾಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ನೀರು ಸಂಗ್ರಹವಾಗಲು ಜಾಗ ಇರುವುದಿಲ್ಲ. ಅಂತರ್ಜಲ ಮಟ್ಟವೂ ಕುಸಿಯಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಾವೇರಿಯ ಕಬ್ಬೂರು ರೈತ ಸೋಮಶೇಖರ, ‘ನಮ್ಮೂರಿನ ಸಮೀಪದಲ್ಲಿರುವ ಹೆಗ್ಗೇರಿ ಕೆರೆ, ರಾಜ್ಯದಲ್ಲಿಯೇ ದೊಡ್ಡ ಕೆರೆ. ಈ ಕೆರೆಯನ್ನೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಮಾಹಿತಿ ಜಿಲ್ಲಾಡಳಿತಕ್ಕೂ ಗೊತ್ತಿದೆ. ಆದರೆ, ತೆರವು ಮಾಡುತ್ತಿಲ್ಲ’ ಎಂದು ದೂರಿದರು.

ರಾಣೆಬೆನ್ನೂರು ತಾಲ್ಲೂಕಿನ ಯತ್ತೀನಹಳ್ಳಿ ನಿವಾಸಿ ಮೈಲಾರಪ್ಪ, ‘ನಮ್ಮೂರು ಬಳಿಯ ಕೆರೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕೆರೆಯ ಸರ್ವೇ ಮಾಡಿ, ಒತ್ತುವರಿ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.

ಹಾವೇರಿ ಬಳಿಯ ಹೆಗ್ಗೇರಿ ಕೆರೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ–ದೇವರಹೊಸಪೇಟೆ ರಸ್ತೆಯಲ್ಲಿರುವ ಕೆರೆ
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ  

ಸರ್ಕಾರದ ಜಾಗ ಕೆರೆಗಳ ಪ್ರದೇಶ ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಒತ್ತುವರಿ ತೆರವಿಗಾಗಿ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಾಗುವುದು

-ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಸಕಲ ಜೀವಿಗಳಿಗೆ ಜಲವೇ ಆಧಾರ. ಜಲ ಸಂಗ್ರಹವಾಗುವ ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ತ್ವರಿತವಾಗಿ ಕಾರ್ಯಾಚರಣೆ ಆರಂಭಿಸಬೇಕು

-ಶಂಕ್ರು ಹಿರೇಮನಿ ಹಿರೇಕೆರೂರು ರೈತ

ಜಮೀನುಗಳು ಜಲಾವೃತ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅದೇ ಸ್ಥಳವನ್ನು ಸಮತಟ್ಟು ಮಾಡಲಾಗಿದೆ. ಇದರಿಂದಾಗಿ ಕೆರೆಯ ಅಕ್ಕ– ಪಕ್ಕದಲ್ಲಿರುವ ಜಮೀನಿಗೆ ನೀರು ನುಗ್ಗಿ ಜಲಾವೃತವಾಗುತ್ತಿರುವ ಘಟನೆಗಳು ನಡೆಯುತ್ತಿದೆ. ಒತ್ತುವರಿಯಾದ ಕೆರೆಗಳ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಇಲಾಖೆಯವರು ಅವೈಜ್ಞಾನಿಕ ಕಾಮಗಾರಿಗಳನ್ನೂ ಕೈಗೊಳ್ಳುತ್ತಿದ್ದಾರೆ. ಇದರಿಂದಲೇ ಕೆರೆಯ ಸುತ್ತಮುತ್ತಲಿನ ರೈತರು ಹಾಗೂ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ‘ಕೆರೆಯ ಒತ್ತುವರಿ ಜಾಗವನ್ನು ತೆರವು ಮಾಡಿ ಅದೇ ಜಾಗವನ್ನು ಹೂಳು ತೆಗೆದು ನೀರು ಸಂಗ್ರಹವಾಗಲು ಅನುಕೂಲ ಮಾಡಬೇಕು. ಈ ಕೆಲಸವನ್ನು ತ್ವರಿತವಾಗಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತೆರವು ನಿಲ್ಲಿಸಲು ಅಧಿಕಾರಿಗಳ ಮೇಲೆ ಒತ್ತಡ’ ಕೆರೆಗಳ ಒತ್ತುವರಿ ಪಟ್ಟಿ ಸಿದ್ಧಪಡಿಸಿರುವ ಜಿಲ್ಲಾಡಳಿತದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಒತ್ತುವರಿ ಮಾಡಿಕೊಂಡಿರುವ ಕೆಲವರು ಜನಪ್ರತಿನಿಧಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವ ಆರೋಪಗಳೂ ವ್ಯಕ್ತವಾಗುತ್ತಿವೆ. ಕೆರೆ ಪ್ರದೇಶಕ್ಕೆ ಹೊಂದಿಕೊಂಡು ಜಮೀನು ಸಾಗುವಳಿ ಮಾಡುತ್ತಿರುವ ಜನರೇ ವರ್ಷದಿಂದ ವರ್ಷಕ್ಕೆ ಕ್ರಮೇಣ ಕೆರೆಯ ಜಾಗವನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೆ ಜೀವ ಬೆದರಿಕೆಯೊಡ್ಡುವ ಘಟನೆಗಳೂ ನಡೆಯುತ್ತಿವೆ. ‘ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ತೆರವು ಕಾರ್ಯಾಚರಣೆ ಆರಂಭಿಸಬೇಕು. ಕೆರೆಗಳನ್ನು ರಕ್ಷಿಸಿದರೆ ಮಾತ್ರ ಜನರನ್ನು ರಕ್ಷಿಸಿದಂತಾಗುತ್ತದೆ’ ಎಂದು ರೈತರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.