ADVERTISEMENT

ಹಾವೇರಿ: ಕುರಿಗಾಹಿಗಳಿಗೆ ಸಿಗದ ₹9.08ಕೋಟಿ ‘ಅನುಗ್ರಹ’; ಮನವಿಗೆ ಸ್ಪಂದಿಸದ ಸರ್ಕಾರ

ಮೂರು ವರ್ಷಗಳಿಂದ ಪಾವತಿಯಾಗದ ಪರಿಹಾರ: ಕುರಿಗಾರರ ಆಕ್ರೊಶ

ಸಂತೋಷ ಜಿಗಳಿಕೊಪ್ಪ
Published 19 ಆಗಸ್ಟ್ 2024, 4:38 IST
Last Updated 19 ಆಗಸ್ಟ್ 2024, 4:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಜಿಲ್ಲೆಯ ಕುರಿಗಾಹಿಗಳಿಗೆ ಸಿಗಬೇಕಾದ ₹9.08 ಕೋಟಿ ಹಣ ಮೂರು ವರ್ಷಗಳಿಂದ ಬಾಕಿ ಉಳಿದಿದ್ದು, ಕುರಿಗಾಹಿಗಳು ಹಾಗೂ ಅವರ ಸಂಬಂಧಿಕರು ಕಚೇರಿಯಿಂದ ಕಚೇರಿಗೆ ಅಲೆದು ಹೈರಾಣಾಗುತ್ತಿದ್ದಾರೆ.

ಕುರಿಗಾಹಿಗಳು ಸಾಕುವ ಕುರಿಗಳು, ಮೇಕೆಗಳು ಮೃತಪಟ್ಟ ಸಂದರ್ಭದಲ್ಲಿ ಪರಿಹಾರ ನೀಡಲು, ರಾಜ್ಯ ಸರ್ಕಾರದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ‘ಅನುಗ್ರಹ’ ಯೋಜನೆ ರೂಪಿಸಲಾಗಿದೆ. 2021ರ ಡಿಸೆಂಬರ್‌ನಿಂದ 2023ರ ಮಾರ್ಚ್‌ ವರೆಗೂ ಜಿಲ್ಲೆಯಲ್ಲಿ 16,805 ಅರ್ಹ ಕುರಿಗಾಹಿಗಳನ್ನು ಗುರುತಿಸಲಾಗಿದೆ.

ಅರ್ಹ ಕುರಿಗಾರರಿಗೆ ಮೂರು ವರ್ಷಗಳಿಂದ ಯಾವುದೇ ಪರಿಹಾರ ಸಂದಾಯವಾಗಿಲ್ಲ. ಕುರಿಗಾಹಿಗಳ ಪರವಿರುವ ಸಂಘಟನೆಗಳು, ಜಿಲ್ಲಾಧಿಕಾರಿ ಮೂಲಕ ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ನಿಗಮದಿಂದ ಮಾತ್ರ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ADVERTISEMENT

‘ಜಿಲ್ಲೆಯಲ್ಲಿ ಕುರಿಗಾಹಿಗಳ ಸಂಖ್ಯೆ ಹೆಚ್ಚಿದೆ. ಕಾಡು, ಗುಡ್ಡ, ಜಮೀನು... ಹೀಗೆ ಕುರಿಗಾಹಿಗಳು ಅಲೆಮಾರಿಗಳಾಗಿ ಸುತ್ತಾಡುತ್ತಿದ್ದಾರೆ. ಮಳೆಗಾಲದಲ್ಲಿ ಸಿಡಿಲು ಬಡಿದು ಹಾಗೂ ಇತರೆ ಕಾಯಿಲೆಗಳಿಂದ ಕುರಿ–ಮೇಕೆಗಳು ಮೃತಪಡುತ್ತಿವೆ. ಕುರಿ–ಮೇಕೆ ಕಳೆದುಕೊಂಡಿರುವ ಕುರಿಗಾಹಿಗಳಿಗೆ ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಡಿ ಪರಿಹಾರ ಒದಗಿಸುತ್ತಿರುವುದು ಒಳ್ಳೆಯ ನಡೆ’ ಎಂದು ಭೂಮಿ ಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಎಸ್‌. ಗಾಜಿಗೌಡ್ರ ತಿಳಿಸಿದರು.

‘ಮೃತಪಡುವ ಕುರಿ ಹಾಗೂ ಮೇಕೆಗಳನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡುತ್ತಿದ್ದಾರೆ. ಇದೇ ವರದಿ ಆಧರಿಸಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಹ ಕುರಿಗಾಹಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಪರಿಹಾರ ಸಂದಾಯವಾಗಿಲ್ಲ. ನಿಗಮವು ₹9.08 ಕೋಟಿ ಬಾಕಿ ಉಳಿಸಿಕೊಂಡಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 17,823 ದೊಡ್ಡ ಕುರಿಗಳು– ದೊಡ್ಡ ಮೇಕೆಗಳು (ಆಡುಗಳು) ಮೃತಪಟ್ಟಿವೆ. 536 ಮರಿ ಕುರಿಗಳು–ಮರಿ ಮೇಕೆಗಳು ಸತ್ತಿವೆ. ಇವುಗಳ ಮಾಲೀಕರಾದ 16,805 ಅರ್ಹ ಕುರಿಗಾಹಿಗಳನ್ನು ಪರಿಹಾರಕ್ಕೆ ಆಯ್ಕೆ ಮಾಡಲಾಗಿದೆ. ಇವರಿಗೆ ಸಿಗಬೇಕಾದ ₹9.08 ಕೋಟಿ ಹಣ ಪಾವತಿ ಬಾಕಿ ಇದೆ’ ಎಂದರು.

‘ಮೂರು ವರ್ಷಗಳಿಂದ ಬಾಕಿ ಇರುವ ಪರಿಹಾರದ ಹಣವನ್ನು ಅರ್ಹರಿಗೆ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಹಣ ಪಾವತಿಗೆ ಗಡುವು ಸಹ ನೀಡಲಾಗಿದೆ’ ಎಂದರು.

ಪರಿಹಾರ ಬಾಕಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಲಭ್ಯರಾಗಲಿಲ್ಲ.

ನಿಗಮದ ಅಧಿಕಾರಿಗಳು ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ. ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು
ಫಕ್ಕೀರಗೌಡ ಎಸ್‌. ಗಾಜಿಗೌಡ್ರ ಭೂಮಿ ಪುತ್ರ ರೈತ ಸಂಘದ ಅಧ್ಯಕ್ಷ

'ದೊಡ್ಡ ಕುರಿ–ಮೇಕೆಗೆ ₹5 ಸಾವಿರ’

ನೈಸರ್ಗಿಕ ವಿಪತ್ತು ಅಪಘಾತ ಮತ್ತು ವಿವಿಧ ಕಾಯಿಲೆಗಳಿಂದ ಮೃತಪಟ್ಟ ದೊಡ್ಡ ಕುರಿ–ಮೇಕೆಗಳಿಗೆ ತಲಾ ₹5 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಕುರಿ ಮರಿ ಹಾಗೂ ಮರಿ ಮೇಕೆಗಳಿಗೆ ₹3 ಸಾವಿರ ಪರಿಹಾರವಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅರ್ಹ ಕುರಿಗಾಹಿಗಳಿಗೆ ಪರಿಹಾರ ಪಾವತಿಸುವ ವ್ಯವಸ್ಥೆ ‘ಅನುಗ್ರಹ’ ಯೋಜನೆಯಲ್ಲಿದೆ. ‘ಗ್ರಾಮೀಣ ಪ್ರದೇಶದ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಕುರಿ ಹಾಗೂ ಮೇಕೆಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದಲೂ ಕುರಿ–ಮೇಕೆಗಳು ಸಾಯುತ್ತಿವೆ. ಕುರಿಗಾಹಿಗಳಿಗೆ ಸಿಗಬೇಕಾದ ಟೆಂಟ್‌ ಸೌರದೀಪ ಔಷಧ ಹಾಗೂ ಇತರೆ ಸೌಲಭ್ಯಗಳೂ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಸದ್ಯ ಬಾಕಿ ಇರುವ ₹ 9.08 ಕೋಟಿ ಪರಿಹಾರ ಹಣವನ್ನಾದರೂ ಪಾವತಿ ಮಾಡಬೇಕು’ ಎಂದು ಕುರಿಗಾಹಿಯೊಬ್ಬರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.