
ಎಫ್‌ಐಆರ್
ಹಾವೇರಿ: ‘ಪರವಾನಗಿ ಪಡೆಯದೇ ರೈತರಿಂದ ಅಕ್ರಮವಾಗಿ ಹಾಗೂ ತೂಕದಲ್ಲಿ ಮೋಸ ಮಾಡಿ ಮೆಕ್ಕೆಜೋಳ ಖರೀದಿಸುತ್ತಿದ್ದ ಆರೋಪ’ದಡಿ ವ್ಯಾಪಾರಿ ಗಣೇಶ ಪ್ರಕಾಶ ಚನ್ನಗೌಡ್ರ ಎಂಬುವವರ ವಿರುದ್ಧ ಹಲಗೇರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ರಾಣೆಬೆನ್ನೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಸಹಾಯಕ ಕಾರ್ಯದರ್ಶಿ ಪರಮೇಶ್ವರಪ್ಪ ಉಮಲೇಪ್ಪ ನಾಯಕ ಅವರು, ತೂಕದಲ್ಲಿ ಮೋಸ ಹಾಗೂ ಇತರೆ ಆರೋಪದಡಿ ದೂರು ನೀಡಿದ್ದಾರೆ. ಅದರನ್ವಯ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಗಣೇಶ ಪ್ರಕಾಶ ಚನ್ನಗೌಡ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹಲಗೇರಿ ಪೊಲೀಸರು ಹೇಳಿದರು.
‘ಆರೋಪಿ ಗಣೇಶ ಅವರು ಡಿ. 24ರಂದು ಕುಪ್ಪೇಲೂರು ಗ್ರಾಮದ ರೈತ ಅಶೋಕಪ್ಪ ದಾಸಪ್ಪ ಮಣಕೂರು ಮನೆ ಬಳಿ ಹೋಗಿದ್ದರು. ‘ನೀವು ಬೆಳೆದಿರುವ ಮೆಕ್ಕೆಜೋಳವನ್ನು ಇಲ್ಲಿಯೇ ಮಾರಾಟ ಮಾಡಿದರೆ, ಹಮಾಲಿ ಹಾಗೂ ದಲ್ಲಾಳಿ ಖರ್ಚಿನ ಹಣ ಉಳಿತಾಯವಾಗುತ್ತದೆ’ ಎಂದಿದ್ದರು. ನಂತರ, ಅನಧಿಕೃತವಾಗಿ ರೈತರಿಂದ ಮೆಕ್ಕೆಜೋಳವನ್ನು ಮಾರಾಟಕ್ಕಾಗಿ ಖರೀದಿಸಿದ್ದರು’ ಎಂದು ತಿಳಿಸಿದರು.
‘ಹಮಾಲರ ಮೂಲಕ ಮೆಕ್ಕಜೋಳವನ್ನು ಚೀಲದಲ್ಲಿ ತುಂಬಿಸಿದ್ದರು. ತೂಕ ಮಾಡುವ ಸಂದರ್ಭದಲ್ಲಿ ರೈತರ ಕಣ್ತಪ್ಪಿಸಿ, ವ್ಯತ್ಯಾಸ ಮಾಡಿ ಮೋಸ ಮಾಡಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ಪುರಾವೆ ಸಂಗ್ರಹಿಸಬೇಕಿದೆ’ ಎಂದು ಹೇಳಿದರು.
32 ರೈತರಿಗೆ ಮೋಸ: ‘ಕುಪ್ಪೇಲೂರು ಗ್ರಾಮದ ಅಶೋಕಪ್ಪ ಮಾತ್ರವಲ್ಲದೇ ತಾಲ್ಲೂಕಿನ 31 ರೈತರಿಗೆ ಆರೋಪಿ ಗಣೇಶ ಮೋಸ ಮಾಡಿರುವ ಮಾಹಿತಿಯಿದೆ. ಎಪಿಎಂಸಿ ಸಹಾಯಕ ಕಾರ್ಯದರ್ಶಿಯವರು 32 ರೈತರ ಪಟ್ಟಿ ಸಮೇತ ದೂರು ನೀಡಿದ್ದಾರೆ. ಎಲ್ಲ ರೈತರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲಿದ್ದೇವೆ’ ಎಂದರು.
ರೈತ ಸಂಘದವರಿಂದ ದೂರು: ‘ಆರೋಪಿ ಗಣೇಶ ಅವರು 10 ವರ್ಷಗಳಿಂದ ರೈತರಿಂದ ಅನಧಿಕೃತವಾಗಿ ಮೆಕ್ಕೆಜೋಳ ಖರೀದಿಸುತ್ತಿದ್ದರು. ಜೊತೆಗೆ, ತೂಕದಲ್ಲೂ ಮೋಸ ಮಾಡುತ್ತಿ್ದ್ದರೆಂಬ ಆರೋಪವಿದೆ. ಇತ್ತೀಚೆಗೆ ರೈತ ಸಂಘದವರೇ ಆರೋಪಿಯ ಕೃತ್ಯವನ್ನು ಪತ್ತೆ ಮಾಡಿ, ಎಪಿಎಂಸಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದೇ ದೂರು ಆಧರಿಸಿ ಸಹಾಯಕ ಕಾರ್ಯದರ್ಶಿಯವರು ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಆರೋಪಿ ಕೃತ್ಯವನ್ನು ಪತ್ತೆ ಮಾಡಿದ್ದ ರೈತರು, ವಾಹನವನ್ನು ಜಪ್ತಿ ಮಾಡಿಟ್ಟುಕೊಂಡಿದ್ದರು. ಇತ್ತೀಚೆಗೆ ಸಂಧಾನದ ಮೂಲಕ ವಾಹನವನ್ನು ಕೆಲವರು ಬಿಟ್ಟು ಕಳುಹಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.