ADVERTISEMENT

ಮುಳುಗಿದ ಗ್ರಾಮಗಳು, ಪ್ರವಾಹದಲ್ಲಿ ತೇಲಿದ ಬದುಕು!

ಮುನಿಸು ಬಿಡದ ಮಳೆರಾಯ * ದೋಣಿಗಳ ಮೂಲಕ ಸಂತ್ರಸ್ತರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 6:37 IST
Last Updated 10 ಆಗಸ್ಟ್ 2019, 6:37 IST
ಕುಣಿಮೆಳ್ಳಿಹಳ್ಳಿ ಗ್ರಾಮ ಪೂರ್ತಿ ಮುಳುಗಿರುವುದು
ಕುಣಿಮೆಳ್ಳಿಹಳ್ಳಿ ಗ್ರಾಮ ಪೂರ್ತಿ ಮುಳುಗಿರುವುದು   

ಹಾವೇರಿ: ಮಳೆಯ ರೌದ್ರಾವತಾರಕ್ಕೆ ಜಿಲ್ಲೆಯ ನಾಲ್ಕು ಊರುಗಳು ಸಂಪೂರ್ಣ ಮುಳುಗಿದ್ದರೆ, ಏಳು ಗ್ರಾಮಗಳು ಜಲಾವೃತವಾಗಿವೆ. ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಸಮಾರೋಪಹಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ದೋಣಿಗಳ ಮೂಲಕ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ.‌

ಶುಕ್ರವಾರ ಮಳೆರಾಯ ಸ್ವಲ್ಪ ಶಾಂತ ಸ್ವರೂಪ ತಾಳಿದನಾದರೂ, ಅದರ ಹಿಂದಿನ ರಾತ್ರಿಯ ಅಬ್ಬರಕ್ಕೆ ಜನ ದಿಕ್ಕಾಪಾಲಾಗಿ ಹೋಗಿದ್ದಾರೆ. ವರದಾ, ತುಂಗಾಭದ್ರ, ಕುಮಧ್ವತಿ, ಧರ್ಮಾ ನದಿಗಳು ತುಂಬಿ ಗ್ರಾಮಗಳನ್ನೂ ತಮ್ಮ ಒಡಲಿಗೆ ಸೇರಿಸಿಕೊಂಡಿವೆ.ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 591 ಮಿ.ಮೀ ಮಳೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶನಿವಾರವೂ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸವಣೂರು ತಾಲ್ಲೂಕಿನ ಹಳೇ ಹಲಸೂರ, ಕುಣಿಮೆಳ್ಳಳ್ಳಿ, ಹಾವೇರಿ ತಾಲ್ಲೂಕಿನ ವರದಹಳ್ಳಿ ಹಾಗೂ ಹಾನಗಲ್‌ನ ಹರವಿ ಗ್ರಾಮಗಳು ಸಂಪೂರ್ಣ ಮುಳುಗಿವೆ. ಮನ್ನಾಂಗಿ, ಮೆಳ್ಳಾಗಟ್ಟಿ, ಕೂಡ್ಲ, ಅಲ್ಲಾಪುರ, ಹರಿನಗರ ಗ್ರಾಮಗಳೂ ಜಲಾವೃತವಾಗಿವೆ. ಇಲ್ಲಿನ ಕುಟುಂಬಗಳನ್ನು ದೋಣಿಗಳ ಮೂಲಕ ಎತ್ತರದ ಪ್ರದೇಶಗಳಿಗೆ ಹಾಗೂ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಗ್ರಾಮಗಳ ಬಹುತೇಕ ಮಂದಿ ಬುಧವಾರದಿಂದಲೇ ಮನೆಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ತೆರಳಿದ್ದರು.

ADVERTISEMENT

5,354 ಮಂದಿಗೆ ಆಶ್ರಯ: ‘ಜಿಲ್ಲೆಯಲ್ಲಿ 77 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 63 ಗ್ರಾಮಗಳ 5,354 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಸ್ಥಳೀಯ ಜನಪ್ರತಿನಿಧಿಗಳ ಜತೆ ಶುಕ್ರವಾರ ಜಿಲ್ಲಾ ಪ್ರವಾಸ ನಡೆಸಿದ ಶಾಸಕ ಜಗದೀಶ ಶೆಟ್ಟರ್, ಹಾನಿ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.‌

‘1961ರಲ್ಲಿ ಇದೇ ರೀತಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ, ಜನ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರ ರಕ್ಷಣೆಗೆ ದೋಣಿಗಳ ಸಂಖ್ಯೆ ಕಡಿಮೆ ಇದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡಗಳನ್ನು ಜಿಲ್ಲೆಗೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ನೇತೃತ್ವದಲ್ಲಿಡ್ರೋನ್ ಕ್ಯಾಮೆರಾ ಬಳಸಿ ಬೆಳೆ ಹಾನಿಯ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಬ್ಯಾಡಗಿಯಲ್ಲಿ 645 ಹೆಕ್ಟೇರ್, ಹಿರೇಕೆರೂರಿನಲ್ಲಿ 60 ಹೆಕ್ಟೇರ್, ಸವಣೂರಿನಲ್ಲಿ 4,267 ಹೆಕ್ಟೇರ್ ಬೆಳೆ ಹಾನಿ ಉಂಟಾಗಿದೆ. ವಾರದಲ್ಲಿ ಸುಮಾರು 1,600ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗುರುವಾರದ ಮಳೆಗೆ ಐದು ಕುರಿಗಳು ಹಾಗೂ ಒಂದು ಹಸು ಅಸುನೀಗಿವೆ.

ಹರವಿ ಗ್ರಾಮದ ನಡುಗಡ್ಡೆಯಲ್ಲಿದ್ದ ಸುಮಾರು 120 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ, ಇದ್ದ ಎರಡೇ ದೋಣಿಗಳಲ್ಲಿ ರಕ್ಷಣೆ ಮಾಡಿದ್ದಾರೆ. ವರದಹಳ್ಳಿಯಲ್ಲಿ 70 ಕುಟುಂಬಗಳನ್ನು ಸ್ಥಳಾಂತರಿಸಿ ಆಲದಮ್ಮ ಪ್ರೌಢಶಾಲೆಯಲ್ಲಿ ಪರಿಹಾರ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.ಗುತ್ತಲ ಹೋಬಳಿಯ ಗುಯಿಲಗುಂದಿ ಹಾಗೂ ಮಣ್ಣೂರ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ರಜೆ ಇಲ್ಲ

‘ತುರ್ತು ಪರಿಹಾರ ಕಾರ್ಯಗಳು ಆಗಬೇಕಿರುವ ಕಾರಣ ಎಲ್ಲ ಇಲಾಖೆಗಳ ಅಧಿಕಾರಿಗಳು ಶನಿವಾರ ಹಾಗೂ ಭಾನುವಾರವೂ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಆದೇಶಿಸಿದ್ದಾರೆ.

‘ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ 2–3 ದಿನಗಳವರೆಗೆ ಇದೇ ರೀತಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಜಿಲ್ಲೆಯ ಪರಿಸ್ಥಿತಿ, ಹಾನಿ ಹಾಗೂ ಪರಿಹಾರದ ವಿವರಗಳ ಕುರಿತು ಸರ್ಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಬೇಕಿದೆ. ಹೀಗಾಗಿ, ಯಾರೂ ರಜೆ ತೆಗೆದುಕೊಳ್ಳುವಂತಿಲ್ಲ’ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.