ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗೊಂದಿ ಕ್ರಾಸ್ ಬಳಿಯ ಹಿರೇಕಾಂಶಿ ರಸ್ತೆಯಲ್ಲಿರುವ ಬಸವೇಶ್ವರ ಜನರಲ್ ಸ್ಟೋರ್ಸ್ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 13 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಅಕ್ರಮ ಪಡಿತರ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಸ್ಟೋರ್ಸ್ ಮಾಲೀಕ ಮಲ್ಲನಗೌಡ ಮರಿಗೌಡ ಓದೇಗೌಡ್ರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಹಾನಗಲ್ ತಹಶೀಲ್ದಾರ್ ಕಚೇರಿಯ ಅಧಿಕಾರಿ ಹನುಮಂತಪ್ಪ ಮಾಳಾಪುರ ಅವರು ದೂರು ನೀಡಿದ್ದಾರೆ. ಮಲ್ಲನಗೌಡ ಓದೇಗೌಡ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಆಡೂರು ಪೊಲೀಸರು ತಿಳಿಸಿದರು.
‘ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪಡಿತರ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದೇ ಅಕ್ಕಿಯನ್ನು ಸ್ಟೋರ್ಸ್‌ನಲ್ಲಿದ್ದ 29 ಬಿಳಿ ಬಣ್ಣದ ಚೀಲದಲ್ಲಿ ತುಂಬಿಡಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ₹29,362 ಮೌಲ್ಯದ ಅಕ್ಕಿ ಜಪ್ತಿ ಮಾಡಿರುವುದಾಗಿ ದೂರುದಾರರು ತಿಳಿಸಿದ್ದಾರೆ’ ಎಂದು ವಿವರಿಸಿದರು.
‘ದಾಳಿ ಸಂದರ್ಭದಲ್ಲಿ ಆರೋಪಿ ಸ್ಥಳದಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ಜನರಿಂದ ಅಕ್ರಮವಾಗಿ ಅಕ್ಕಿ ಖರೀದಿಸಿ, ಅಂಗಡಿಯಲ್ಲಿ ಇರಿಸಿಕೊಂಡು ಮಾರುತ್ತಿದ್ದರೆಂಬುದು ಗೊತ್ತಾಗಿದೆ. ಆರೋಪಿಯ ಕೃತ್ಯದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.