ಹಾವೇರಿ: ಶಿಗ್ಗಾವಿ ಪುರಸಭೆ ವ್ಯಾಪ್ತಿಯ ಗಂಗೇನೂರಿನಲ್ಲಿ ಉಲ್ಭಣಿಸಿದ ಕುಡಿಯುವ ನೀರಿನ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ ಸಿಕ್ಕಿದೆ. ವಾರದಿಂದ ಬಂದ್ ಆಗಿದ್ದ ಟ್ಯಾಂಕ್‌ನಲ್ಲಿ ಸೋಮವಾರ ನೀರು ಬಂದಿದ್ದು, ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ ಗಂಗೇನೂರಿನಲ್ಲಿ ಒಂದು ವಾರದಿಂದ ನೀರಿನ ಸಮಸ್ಯೆ ಉಲ್ಭಣಿಸಿತು. ಜನರು ಜಮೀನಿಗೆ ಹೋಗಿ ನೀರು ತರುತ್ತಿದ್ದರು. ಜನರ ನೀರಿನ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಗಂಗೇನೂರಿನಲ್ಲಿ ಕುಡಿಯುವ ನೀರಿಗಾಗಿ ಪರದಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ವರದಿಯಿಂದ ಎಚ್ಚೆತ್ತ ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್, ಖುದ್ದಾಗಿ ಗಂಗೇನೂರಿಗೆ ಭೇಟಿ ನೀಡಿ ಒಂದೇ ದಿನದಲ್ಲಿ ಮೋಟರ್ ದುರಸ್ತಿ ಹಾಗೂ ಇತರೆ ಕೆಲಸಗಳನ್ನು ಮಾಡಿಸಿ ಜನರಿಗೆ ನೀರು ಸಿಗುವಂತೆ ಮಾಡಿದ್ದಾರೆ. ಟ್ಯಾಂಕ್‌ನಿಂದ ನೀರು ಬರುತ್ತಿದ್ದಂತೆ ಜನರು ಕೊಡಗಳನ್ನು ತಂದು ನೀರು ತುಂಬಿಕೊಂಡರು.
‘ವಾರದಿಂದ ನೀರಿನ ಸಮಸ್ಯೆಯಿತ್ತು. ನೀರಿಗಾಗಿ ದೂರದ ಜಮೀನುಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯ ಪ್ರತಿಯೊಬ್ಬರಿಗೂ ಕೊಡ ಹಿಡಿದು ಅಲೆದಾಡಿ ನೀರು ತರುವುದೇ ಕಾಯಕವಾಗಿತ್ತು. ಮುಖ್ಯಾಧಿಕಾರಿಗೆ ವಿಷಯ ತಿಳಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ಒಂದೇ ದಿನದಲ್ಲಿ ಪರಿಹಾರ ಸಿಕ್ಕಿದೆ. ಪತ್ರಿಕೆಗೆ ಧನ್ಯವಾದಗಳು’ ಎಂದು ಜನರು ಹರ್ಷ ವ್ಯಕ್ತಪಡಿಸಿದರು.
ಯೋಜನೆಯಿಂದ ಸಮಸ್ಯೆ: ‘ಗಂಗೇನೂರಿನಲ್ಲಿ ನಿರಂತರ ನೀರು ಯೋಜನೆಗಾಗಿ ನೆಲದಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಗಂಗೇನೂರಿನ ಕೊಳವೆಬಾವಿ ಪೈಪ್‌ಗಳಿಗೆ ಹಾನಿಯಾಗಿದೆ. ಇದರಿಂದಾಗಿ ಟ್ಯಾಂಕ್‌ನಲ್ಲಿ ನೀರು ಬರುತ್ತಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಪತ್ರಿಕೆಯಲ್ಲಿ ವರದಿ ಬರುತ್ತಿದ್ದಂತೆ, ಸ್ಥಳಕ್ಕೆ ಹೋಗಿ ನೆಲ ಅಗೆದು ಪೈಪ್‌ಗಳ ದುರಸ್ತಿ ಮಾಡಿಸಲಾಗಿದೆ. ಮೋಟರ್ ಸಹ ದುರಸ್ತಿ ಮಾಡಿ, ಟ್ಯಾಂಕ್ ಮೂಲಕ ನೀರು ಬರುವಂತೆ ಮಾಡಲಾಗಿದೆ. ಮೋಟರ್ ದುರಸ್ತಿಗೆ ₹ 500 ಕೇಳಿದ್ದಕ್ಕೆ ಬಗ್ಗೆ ಪುರಾವೆಗಳು ಸಿಕ್ಕಿಲ್ಲ’ ಎಂದು ತಿಳಿಸಿದರು.
ಮೋಟರ್ ವಸ್ತುಗಳು ಕಳ್ಳತನ: ‘ಗಂಗೇನೂರಿನ ಮೋಟರ್‌ಗೆ ಅಳವಡಿಸುವ ಕೆಲ ವಸ್ತುಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡುತ್ತಿದ್ದಾರೆ. ಇದರಿಂದಾಗಿ ಆಗಾಗ ಮೋಟರ್ ಸಮಸ್ಯೆ ಆಗುತ್ತಿದೆ. ಸಿಬ್ಬಂದಿ ದಿನದ 24 ಗಂಟೆಯೂ ಮೋಟರ್‌ಗೆ ಕಾವಲು ಕಾಯಲು ಆಗುವುದಿಲ್ಲ. ಕಳ್ಳತನವಾಗದಂತೆ ನಿಗಾ ವಹಿಸುವಂತೆ ಸ್ಥಳೀಯರಿಗೂ ಕೋರಲಾಗಿದೆ’ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.