ಮಾರುತಿ ಬಣಕಾರ
ಹಾವೇರಿ: ‘ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಅವರು ನನ್ನ ಬಗ್ಗೆ ಮಾಡಿರುವ ಆರೋಪ ಸುಳ್ಳು. ನನ್ನ ತೇಜೋವಧೆ ಮಾಡುವ ಉದ್ಧೇಶದಿಂದ ದಾಖಲೆ ಇಲ್ಲದೇ ಮಾನಹಾನಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ರಾಮಪ್ಪ ಬಣಕಾರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಜಿಲ್ಲಾ ಗುರುಭವನದಲ್ಲಿ ಸೆ.5ರಂದು ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಗಾಜೀಗೌಡ್ರ ಅವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ.
‘ಜಿಲ್ಲೆಯ ಅನುದಾನಿತ ಶಾಲೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ಬಂದಿತ್ತು. ಮಕ್ಕಳ ಹಿತದೃಷ್ಟಿಯಿಂದ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೆ. ಖುದ್ದು ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಗಾಜೀಗೌಡ್ರ ನನ್ನ ಮೇಲೆ ಸುಖಾಸುಮ್ಮನೇ ಆರೋಪ ಮಾಡಿ ಮಾತನಾಡಿದ್ದಾರೆ. ನಾನು ಯಾರ ಬಳಿಯೂ ಹಣ ಕೇಳಿಲ್ಲ. ಕೇಳಿದ್ದರೆ ಪುರಾವೆ ನೀಡಲಿ. ಆರೋಪ ಮಾಡುವುದನ್ನು ಬಿಟ್ಟು ಗಾಜೀಗೌಡ್ರ ಅವರು ತಮ್ಮ ಶಾಲೆಯ ಮಾಹಿತಿ ಕೊಡಬೇಕು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.