ಹಾವೇರಿ: ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯಡಿ ಮೂರು ತಿಂಗಳ ಕಂತು ಬಾಕಿ ಉಳಿದಿದ್ದು, ಕಂತು ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ನಡೆಗೆ ಯೋಜನೆಯ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ, ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳಿಗೆ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ, ಗೃಹಲಕ್ಷ್ಮಿ ಯೋಜನೆಯಡಿ ಮೂರು ತಿಂಗಳ ಕಂತು ಬಾಕಿ ಉಳಿದಿದೆ. ಈ ಕಂತುಗಳನ್ನು ಸರ್ಕಾರದ ಯಾವಾಗ ಪಾವತಿಸುತ್ತದೆ ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ₹ 2,000 ಜಮೆ ಮಾಡಲಾಗುತ್ತಿದೆ. ಜಿಲ್ಲೆಯ 3.80 ಲಕ್ಷ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿದ್ದು, ಗೃಹಲಕ್ಷ್ಮಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿರುವ ಬಹುತೇಕ ಮನೆಗಳ ಯಜಮಾನತಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕಾಲ ಕಾಲಕ್ಕೆ ಆಗುವ ನಿಯಮಗಳ ಅನ್ವಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಫಲಾನುಭವಿಗಳ ಪಟ್ಟಿಯನ್ನು ನವೀಕರಿಸುತ್ತಿದ್ದಾರೆ.
2023ರ ಆಗಸ್ಟ್‌ನಲ್ಲಿ 3.38 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು. 2024ರ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 3.80 ಲಕ್ಷಕ್ಕೆ ಹೆಚ್ಚಳವಾಗಿದೆ. ಆದರೆ, ಅಕ್ಟೋಬರ್ ನಂತರ ‘ಗೃಹಲಕ್ಷ್ಮಿ’ ಯೋಜನೆಯ ಕಂತು ಖಾತೆಗೆ ಬಾರದಿದ್ದರಿಂದ ಫಲಾನುಭವಿಗಳು ನಿರಾಸೆಗೊಂಡಿದ್ದಾರೆ.
ಗೃಹಲಕ್ಷ್ಮಿ ಕಂತಿನ ಹಣವನ್ನು ನಂಬಿಕೊಂಡು ಹಲವು ಮಹಿಳೆಯರು, ಜೀವನ ನಡೆಸುತ್ತಿದ್ದಾರೆ. ಅದೇ ಹಣದಿಂದ ತಮ್ಮ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಮೂರು ತಿಂಗಳಿನಿಂದ ಕಂತು ಬಾರದಿದ್ದರಿಂದ ಫಲಾನುಭವಿಗಳು ನಾನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂರು ತಿಂಗಳ ಕಂತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
‘ಮಗನನ್ನು ಶಾಲೆಗೆ ಸೇರಿಸಲು ಗ್ರಾಮದ ವ್ಯಕ್ತಿಯೊಬ್ಬರ ಬಳಿ ಸಾಲ ಪಡೆದುಕೊಂಡಿದ್ದೆ. ಗೃಹಲಕ್ಷ್ಮಿ ಕಂತು ಬರುತ್ತಿದ್ದಂತೆ, ಅದೇ ಹಣವನ್ನು ಸಾಲಕ್ಕೆ ನೀಡುತ್ತಿದ್ದೆ. ಮೂರು ತಿಂಗಳಿನಿಂದ ಕಂತು ಬಂದಿಲ್ಲ. ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ. ಇಂದು, ನಾಳೆ ಕಂತು ಬರುವುದಾಗಿ ಹೇಳುತ್ತ ದಿನ ದೂಡುತ್ತಿದ್ದೇನೆ’ ಎಂದು ಹಾನಗಲ್ ತಾಲ್ಲೂಕಿನ ಗ್ರಾಮವೊಂದರ ಮಹಿಳೆ ಗಿರಿಜವ್ವ ಅಳಲು ತೋಡಿಕೊಂಡರು.
ಸವಣೂರು ತಾಲ್ಲೂಕಿನ ಮಹಿಳೆಯೊಬ್ಬರು, ‘ಪತಿ, ಮದ್ಯವ್ಯಸನಿ. ದುಡಿದ ಹಣವನ್ನು ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದಾನೆ. ಗೃಹಲಕ್ಷ್ಮಿ ಹಣವನ್ನು ನಂಬಿಕೊಂಡು ಮನೆ ಸಾಗಿಸುತ್ತಿದ್ದೆ. ಆದರೆ, ಮೂರು ತಿಂಗಳಿನಿಂದ ಹಣ ಬಂದಿಲ್ಲ. ಸಂತೆ ಮಾಡಲು ಅವರಿವರ ಬಳಿ ಹಣ ಪಡೆದುಕೊಳ್ಳುತ್ತಿದ್ದೇನೆ’ ಎಂದರು.
ಕಂತು ಪಾವತಿ ಬಗ್ಗೆ ಮೊಬೈಲ್‌ಗೆ ಸಂದೇಶ ಬಾರದಿದ್ದರಿಂದ, ಖಾತೆ ಸಮಸ್ಯೆಯಾಗಿರಬಹುದೆಂದು ಮಹಿಳೆಯರು ತಿಳಿದುಕೊಳ್ಳುತ್ತಿದ್ದಾರೆ. ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಿಕರು, ಪರಿಚಯಸ್ಥರಿಗೆ ಕರೆ ಮಾಡಿ, ಕಂತು ಬಂದಿದೆಯಾ ? ಎಂದು ಪರಸ್ಪರ ವಿಚಾರಿಸುತ್ತಾರೆ.
ಮತದಾನಕ್ಕೂ ಮುನ್ನ ಜಮೆ: 2024ರ ನವೆಂಬರ್‌ನಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಗದಿಯಾಗಿತ್ತು. ನ. 13ರ ಮತದಾನದ ದಿನಕ್ಕೂ ಮುನ್ನ, ಜಿಲ್ಲೆಯ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಅಕ್ಟೋಬರ್ ತಿಂಗಳ ಕಂತು ಜಮೆ ಆಗಿತ್ತು. ಅದಾದ ನಂತರ, 2024ರ ನವೆಂಬರ್, ಡಿಸೆಂಬರ್ ಹಾಗೂ 2025ರ ಜನವರಿ ತಿಂಗಳ ಕಂತು ಜಮೆ ಆಗಿಲ್ಲ.
‘ಚುನಾವಣೆ ಮತದಾನದ ಸಂದರ್ಭದಲ್ಲಿ ತ್ವರಿತವಾಗಿ ಹಣ ಜಮೆ ಮಾಡಲಾಗಿತ್ತು. ಆದರೆ, ಮೂರು ತಿಂಗಳಿನಿಂದ ಏಕೆ ಹಣ ಜಮೆ ಮಾಡಿಲ್ಲ’ ಎಂದು ಪ್ರಶ್ನಿಸುತ್ತಿರುವ ಮಹಿಳೆಯರು, ‘ಮೂರು ತಿಂಗಳ ಕಂತನ್ನು ಕೂಡಲೇ ಪಾವತಿ ಮಾಡಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.
‘ಗೃಹಲಕ್ಷ್ಮಿ’ ಯೋಜನೆಯ ಮೂರು ತಿಂಗಳ ಕಂತು ಬಾಕಿ ಇರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಕಂತು ಸಂದಾಯವಾಗುವ ನಿರೀಕ್ಷೆಯಿದೆಶ್ರೀನಿವಾಸ ಆಲದರ್ತಿ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
‘ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಎದುರಾಗಿರುವ ಬಗ್ಗೆ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಗೃಹಲಕ್ಷ್ಮಿ ಕಂತು ಪಾವತಿಗೂ ಹಣದ ಕೊರತೆ ಉಂಟಾಗಿರಬಹುದು. ಅದಕ್ಕೆ ಕಂತು ಪಾವತಿ ಮಾಡಿಲ್ಲ’ ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ.
‘ಹಾವೇರಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮೂರು ತಿಂಗಳಿನಿಂದ ಹಣ ಪಾವತಿಯಾಗಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಇಲಾಖೆಯಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ಜಮೆ ಏಕೆ ಆಗಿಲ್ಲ ? ಎಂಬುದಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳೇ ಉತ್ತರಿಸಬೇಕು’ ಎಂದರು.
ತಾಲ್ಲೂಕು; ಫಲಾನುಭವಿಗಳ ಸಂಖ್ಯೆ
ಬ್ಯಾಡಗಿ; 34099
ಹಾನಗಲ್; 63315
ಹಾವೇರಿ; 66845
ಹಿರೇಕೆರೂರು; 29621
ರಟ್ಟೀಹಳ್ಳಿ; 27976
ರಾಣೆಬೆನ್ನೂರು; 75753
ಸವಣೂರು; 38939 ಶಿಗ್ಗಾವಿ; 44162
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.