ADVERTISEMENT

ಹಾವೇರಿ | ಮಾತು ತಪ್ಪಿದ ಸರ್ಕಾರ: ನೆರೆ ಸಂತ್ರಸ್ತರ ಕಣ್ಣೀರು

ನೆರೆಯಿಂದ ಶಿಥಿಲಗೊಂಡಿದ್ದ ಮನೆ: ಮೊದಲ ಬಿಲ್ ನೀಡಿ ಸುಮ್ಮನಾದ ಸರ್ಕಾರ: ನನಸಾಗದ ಸೂರಿನ ಕನಸು

ಸಂತೋಷ ಜಿಗಳಿಕೊಪ್ಪ
Published 21 ಜುಲೈ 2025, 3:58 IST
Last Updated 21 ಜುಲೈ 2025, 3:58 IST
ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತ ಮನೆ ನಿರ್ಮಾಣ ಕೆಲಸ 
ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತ ಮನೆ ನಿರ್ಮಾಣ ಕೆಲಸ    

ಹಾವೇರಿ: ಖುಲ್ಲಾ ಜಾಗದಲ್ಲಿ ಅಳಿದುಳಿದ ಪಾಯ. ಕಿತ್ತು ಹೋಗುತ್ತಿರುವ ಕಲ್ಲುಗಳು. ನಿಧಾನವಾಗಿ ಒಡೆದು ಹಾಳಾಗುತ್ತಿರುವ ಇಟ್ಟಿಗೆಗಳು. ಶಾಶ್ವತ ಸೂರಿನಲ್ಲದೇ ತಾತ್ಕಾಲಿಕ ಶೆಡ್‌ನಲ್ಲಿ ದಿನದೂಡುತ್ತಿರುವ ಸಂತ್ರಸ್ತರು. ಮಳೆ ಬಂದರೆ ಬೆಚ್ಚಿಬೀಳುವ ಮಕ್ಕಳು. ಸ್ವಂತ ಮನೆ ಇಲ್ಲದಿದ್ದರಿಂದ ವಯಸ್ಸಾದರೂ ಮದುವೆಯಾಗದೇ ಉಳಿದ ವಧು–ವರರು.

ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲಿರುವ ಹಂದಿಗನೂರು ಹಾಗೂ ಮೇಲ್ಮುರಿ ಗ್ರಾಮದಲ್ಲಿರುವ ನೆರೆ ಸಂತ್ರಸ್ತರ ಕಣ್ಣೀರಿನ ನೈಜತೆಯಿದು. 2019ರಿಂದ 2021ರವರೆಗಿನ ಅವಧಿಯಲ್ಲಿ ಉಂಟಾಗಿದ್ದ ನೆರೆಯಿಂದಾಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಇದುವರೆಗೂ ಶಾಶ್ವತ ನೆಲೆ ಸಿಕ್ಕಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ (ಎನ್‌ಡಿಆರ್‌ಎಫ್‌) ತುರ್ತು ಪರಿಹಾರವಾಗಿ ಮನೆ ನಿರ್ಮಾಣಕ್ಕೆ ₹ 1.20 ಲಕ್ಷ ನೀಡಿದ್ದ ಸರ್ಕಾರ, ನಂತರ ಹಣ ನೀಡದೇ ಕೈ ಕೊಟ್ಟಿದೆ.

ಹಾವೇರಿ ಜಿಲ್ಲೆಯಲ್ಲಿ ವರದಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಮಳೆಯಾದರೆ, ನದಿಗಳಲ್ಲಿ ನೀರು ತುಂಬಿ ನೆರೆ ಸ್ಥಿತಿ ಸೃಷ್ಟಿಯಾಗುತ್ತದೆ. 2019 ಹಾಗೂ 2021ರಲ್ಲಂತೂ ವರದಾ ನದಿಯ ದಡದಲ್ಲಿರುವ ಹಂದಿಗನೂರು, ಮೇಲ್ಮುರಿ ಗ್ರಾಮಗಳು ತತ್ತರಿಸಿ ಹೋದವು. ನೆರೆ ಹಾವಳಿಯಿಂದಾಗಿ ಜನರು ಮನೆಗಳನ್ನು ತೊರೆಯಬೇಕಾಯಿತು. ನೀರು ಕಡಿಮೆಯಾದ ನಂತರ ಮನೆಗಳು, ಶಿಥಿಲಾವಸ್ಥೆಗೆ ತಲುಪಿದ್ದವು.

ADVERTISEMENT

ಇದೇ ಸಂದರ್ಭದಲ್ಲಿ ₹ 5 ಲಕ್ಷ ಮೊತ್ತದಲ್ಲಿ ಹೊಸ ಮನೆ ನಿರ್ಮಾಣದ ಆಸೆ ತೋರಿಸಿದ್ದ ಸರ್ಕಾರ, ಮೊದಲ ಬಿಲ್ ಮಾತ್ರ ನೀಡಿ ಕೈ ತೊಳೆದುಕೊಂಡಿದೆ. ಉಳಿದ ಬಿಲ್‌ಗಳ ಮಂಜೂರಾತಿಗೆ ಆಸಕ್ತಿ ತೋರಿಸದೇ, ನೆರೆ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ವಿಳಂಬ ಧೋರಣೆ ಹಾಗೂ ನಿರ್ಲಕ್ಷ್ಯದಿಂದಾಗಿ ನೆರೆ ಸಂತ್ರಸ್ತರು ಇಂದಿಗೂ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಕೊಟ್ಟ ಮಾತು ತಪ್ಪಿದ ಸರ್ಕಾರದಿಂದಾಗಿ ಸಂತ್ರಸ್ತರು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ.

‘ಇಂದು ಅಥವಾ ನಾಳೆ ಬಿಲ್ ಮಂಜೂರಾಗಬಹುದು’ ಎಂಬ ಭರವಸೆಯಲ್ಲಿಯೇ ಕಾಲ ಕಳೆಯುತ್ತಿರುವ ಸಂತ್ರಸ್ತರು, ಬಾಕಿ ಬಿಲ್ ಪಾವತಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ನಿರಂತರವಾಗಿ ಅಲೆದಾಡುತ್ತಿದ್ದಾರೆ.

‘₹ 5 ಲಕ್ಷ ಮೊತ್ತದ ಮನೆಗಳು ಬ್ಲಾಕ್ ಆಗಿವೆ’ ಎಂಬ ಉತ್ತರ ನೀಡುತ್ತಿರುವ ಅಧಿಕಾರಿಗಳು, ಬಿಲ್ ಮಂಜೂರು ಕಷ್ಟವೆಂದು ಹೇಳಿ ಸುಮ್ಮನಾಗುತ್ತಿದ್ದಾರೆ. ‘ಮನೆಗಳು ಬ್ಲಾಕ್ ಆಗಿವೆ ಎಂದಾದರೆ, ಮನೆ ನಿರ್ಮಾಣಕ್ಕೆ ಮೊದಲ ಬಿಲ್ ಕೊಟ್ಟಿದ್ದು ಏಕೆ’ ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲದಂತಾಗಿದೆ.

‘ಹಂದಿಗನೂರು ಹಾಗೂ ಮೇಲ್ಮುರಿ ಗ್ರಾಮದ ಸುಮಾರು 90 ಮನೆಗಳು ಶಿಥಿಲಗೊಂಡಿದ್ದವು. ಕೆಲ ಮನೆಗಳು ಕುಸಿದು ಬಿದ್ದಿದ್ದವು. ₹ 5 ಲಕ್ಷ ಮೊತ್ತದಲ್ಲಿ ಎಲ್ಲ ಮನೆಗಳ ನಿರ್ಮಾಣಕ್ಕೆ ಸರ್ಕಾರ ಭರವಸೆ ನೀಡಿತ್ತು. ಜಿಪಿಎಸ್‌ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮೊದಲ ಬಿಲ್‌ ರೂಪದಲ್ಲಿ ₹ 1.20 ಲಕ್ಷ ನೀಡಿತ್ತು’ ಎಂದು ಸಂತ್ರಸ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಬಿಲ್ ಬಂದ ಸಂಭ್ರಮದಲ್ಲಿ, ಶಿಥಿಲಾವಸ್ಥೆಯಲ್ಲಿದ್ದ ಮನೆಯ ಅಳಿದುಳಿದ ಅವಶೇಷಗಳನ್ನು ತೆರವು ಮಾಡಿದೆವು. ಜಾಗವನ್ನು ಸಮತಟ್ಟು ಮಾಡಿ ಪಾಯ ಹಾಕಿಸಿದೆವು. ಎರಡನೇ ಬಿಲ್ ಬಂದ ಕೂಡಲೇ, ಗೋಡೆ ಕಟ್ಟಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಸರ್ಕಾರ ಎರಡನೇ ಬಿಲ್ ನೀಡಲಿಲ್ಲ. 2021ರಿಂದಲೂ ಎರಡನೇ ಬಿಲ್‌ಗಾಗಿ ಕಾಯುತ್ತಿದ್ದೇವೆ. ಆದರೆ, ಸರ್ಕಾರ ನಮತ್ತ ನೋಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಇಟ್ಟಿಗೆ ಜೋಡಿಸಿ ಶೆಡ್‌: 2021ರಲ್ಲಿ ಮನೆ ನಿರ್ಮಾಣಕ್ಕೆ ಸಂತ್ರಸ್ತರು ತರಿಸಿದ್ದ ಇಟ್ಟಿಗೆ, ಕಲ್ಲು ಸೇರಿದಂತೆ ಇತರೆ ಕಚ್ಚಾ ಸಾಮಗ್ರಿಗಳು ಇಂದಿಗೂ ರಸ್ತೆಯಲ್ಲಿವೆ. ಖುಲ್ಲಾ ಜಾಗದಲ್ಲಿದ್ದ ಪಾಯವೂ ನಿಧಾನವಾಗಿ ಹಾಳಾಗುತ್ತಿದೆ. ಶಾಶ್ವತ ಮನೆಯ ನಿರೀಕ್ಷೆಯಲ್ಲಿದ್ದ ಸಂತ್ರಸ್ತರು, ಇಟ್ಟಿಗೆಯನ್ನೇ ಜೋಡಿಸಿಕೊಂಡು ಶೆಡ್‌ ನಿರ್ಮಿಸಿ ಅದರಲ್ಲೇ ವಾಸಿಸುತ್ತಿದ್ದಾರೆ. ಇದರಲ್ಲಿ ಹಲವರು ಪರಿಶಿಷ್ಟ ಸಮುದಾಯದವರಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯವೂ ಸಿಗುತ್ತಿಲ್ಲವೆಂಬ ಆರೋಪವಿದೆ.

ತೆಂಗಿನ ಮರದ ಗರಿಗಳೇ ಶೆಡ್‌ಗೆ ಹಂಚುಗಳಾಗಿವೆ. ತಾಡಪತ್ರಿಯೇ ಗೋಡೆಯಾಗಿದೆ. ಹೆಚ್ಚು ಮಳೆ ಬಂದರೆ, ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿ ಶೆಡ್‌ಗಳಿವೆ. ಜೊತೆಗೆ, ಹಾವು–ಚೇಳುಗಳು ಭಯವೂ ಕಾಡುತ್ತಿದೆ.

‘₹ 5 ಲಕ್ಷ ಮೊತ್ತ ನೀಡುವುದಾಗಿ ಸರ್ಕಾರ ಹೇಳಿದ್ದರಿಂದ, ಶಿಥಿಲಗೊಂಡಿದ್ದ ನನ್ನ ಮನೆ ತೆರವು ಮಾಡಿದೆ. ₹ 1.20 ಲಕ್ಷದಲ್ಲಿ ಅದೇ ಜಾಗದಲ್ಲಿ ಪಾಯ ಹಾಕಿಸಿದ್ದೇನೆ. ಅದಾದ ನಂತರ, ಮನೆ ನಿರ್ಮಾಣ ಕೆಲಸ ಬಂದ್ ಆಗಿದೆ. ಸರ್ಕಾರದಿಂದಲೂ ಯಾವುದೇ ಹಣ ಬಂದಿಲ್ಲ’ ಎಂದು ಸಂತ್ರಸ್ತರೊಬ್ಬರು ಹೇಳಿದರು.

‘ಕೃಷಿ ಕೂಲಿ ನಂಬಿ ಜೀವನ ಕಟ್ಟಿಕೊಂಡಿದ್ದೇನೆ. ಸ್ವಂತ ಜಾಗದಲ್ಲಿ ಮನೆ ಕಟ್ಟಿಸುವ ಆರ್ಥಿಕ ಶಕ್ತಿ ನನಗಿಲ್ಲ. ಅನ್ಯರ ಜಾಗದಲ್ಲಿ ತಾಡಪತ್ರಿಯ ಶೆಡ್‌ ನಿರ್ಮಿಸಿಕೊಂಡು, ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದೇನೆ. ಸ್ವಂತ ಸೂರಿಗಾಗಿ ಶಾಸಕ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಅಲೆದಾಡಿದ್ದೇನೆ. ಅಷ್ಟಾದರೂ ನನಗೆ ಮನೆ ಸಿಕ್ಕಿಲ್ಲ’ ಎಂದು ಅಳಲು ತೋಡಿಕೊಂಡರು.

ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದಲ್ಲಿ ಅರ್ಧಕ್ಕೆ ನಿಂತ ಮನೆ ನಿರ್ಮಾಣ ಕೆಲಸ 

ಯೋಜನೆ ದಿಢೀರ್ ಬಂದ್: ಮಳೆಯಿಂದಾಗಿ ಮನೆ ಕಳೆದುಕೊಂಡವರ ನೆರವಿಗಾಗಿ ಸರ್ಕಾರ, ನೆರೆ ಸಂತ್ರಸ್ತರ ವಸತಿ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಡಿ ಹಲವರಿಗೆ ಮನೆ ಮಂಜೂರಾತಿ ನೀಡಲಾಗಿತ್ತು. ಜೊತೆಗೆ, ಮೊದಲ ಬಿಲ್ ಸಹ ಬಿಡುಗಡೆ ಮಾಡಲಾಗಿತ್ತು. ಎರಡನೇ ಬಿಲ್ ನೀಡಲು ಅವಕಾಶ ಇಲ್ಲದಂತೆ, ಯೋಜನೆಯನ್ನು ಸರ್ಕಾರ ದಿಢೀರ್ ಬಂದ್ ಮಾಡಿದೆ.

‘ಯೋಜನೆಯಡಿ ಮನೆ ನಿರ್ಮಾಣಕ್ಕೆ ಭರವಸೆ ನೀಡಬಾರದಿತ್ತು. ಮೊದಲ ಬಿಲ್ ಕೊಟ್ಟು, ದಿಢೀರ್ ಯೋಜನೆ ಬಂದ್ ಮಾಡಿದ್ದು ಏಕೆ? ಸಂತ್ರಸ್ತರಿಗೆ ಆಸೆ ತೋರಿಸಿ, ಅರ್ಧಕ್ಕೆ ಕೈಕೊಟ್ಟಿದ್ದು ಸರಿಯಾ ? ಸರ್ಕಾರ ಈ ನಡೆ, ಸಂತ್ರಸ್ತ ವಿರೋಧಿಯಾಗಿದೆ’ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದರು.

ಹಂದಿಗನೂರು ಮೇಲ್ಮುರಿ ಮಾತ್ರವಲ್ಲದೇ ಜಿಲ್ಲೆಯ ಹಲವು ಕಡೆ ನೆರೆಯಿಂದ ಮನೆ ಕಳೆದುಕೊಂಡಿರುವವರಿಗೆ ಇದುವರೆಗೂ ಸ್ವಂತ ಸೂರಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು
ಶಂಕರಪ್ಪ ನಿಂಗಣ್ಣನವರ ಹಾವೇರಿ
ನೆರೆಯಿಂದ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದೇನೆ. ಮೊದಲ ಬಿಲ್ ಪಡೆದಿರುವ ಎಲ್ಲರಿಗೂ ಸರ್ಕಾರ ಪೂರ್ಣ ಹಣ ನೀಡಬೇಕು. ಸ್ವಂತ ಸೂರು ಒದಗಿಸಬೇಕು
ಪರಸಪ್ಪ ನೆರೆ ಸಂತ್ರಸ್ತ
‘ಸರ್ಕಾರದ ಆದೇಶದಂತೆ ಮನೆ ರದ್ದು’
‘2021ರಲ್ಲಿ ನೆರೆ ಬಂದಾಗ ₹ 5 ಲಕ್ಷ ಮನೆ ನೀಡಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಹಲವರಿಗೆ ಹಣ ನೀಡಲಾಗಿತ್ತು. ಆದರೆ ಕ್ರಮೇಣ ಯೋಜನೆಯನ್ನು ಬಂದ್ ಮಾಡಲಾಗಿದೆ. ಮನೆ ಮಂಜೂರಾತಿಗಳನ್ನೂ ರದ್ದುಪಡಿಸಲಾಗಿದೆ. ಈ ಬಗ್ಗೆ ತಂತ್ರಾಂಶದಲ್ಲಿಯೇ ಮನೆಗಳನ್ನು ಬ್ಲಾಕ್ ಮಾಡಲಾಗಿದೆ’ ಎಂದು ತಾಲ್ಲೂಕು ಆಡಳಿತ ಕಚೇರಿ ಅಧಿಕಾರಿಯೊಬ್ಬರು ಹೇಳಿದರು.
‘ಕೆಲವರ ಮನೆಗಳ ಅನ್‌–ಬ್ಲಾಕ್‌’
‘ಬಿಲ್ ಬಾಕಿ ಉಳಿದು ಬ್ಲಾಕ್‌ ಆಗಿದ್ದ ಕೆಲವರ ಮನೆಗಳನ್ನು ಅನ್‌–ಬ್ಲಾಕ್ ಮಾಡಲಾಗಿದೆ. ಅವರಿಗೆ ಹಣ ನೀಡಲು ತಯಾರಿಯೂ ನಡೆದಿರುವ ಮಾಹಿತಿಯಿದೆ’ ಎಂದು ಸಂತ್ರಸ್ತರು ಹೇಳಿದರು. ‘ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮಗೆ ಬೇಕಾದವರ ಮನೆಗಳನ್ನು ಅನ್‌–ಬ್ಲಾಕ್ ಮಾಡಿಸಿ ಹಣ ಬರುವಂತೆ ಮಾಡುತ್ತಿದ್ದಾರೆ. ಬಡವರು ಹಾಗೂ ನಿರ್ಗತಿಕರಿಗೆ ಮನೆಯ ಬಿಲ್ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.
‘ಮದುವೆಯಾಗಲು ಹಿಂದೇಟು’
ಹಂದಿಗನೂರು ಹಾಗೂ ಮೇಲ್ಮುರಿ ಗ್ರಾಮಗಳಲ್ಲಿದ್ದ 90 ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದೆ. ಕೆಲವರು ಸಾಲ ಮಾಡಿ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಬಹುತೇಕರ ಮನೆಗಳು ಪಾಯದ ಸ್ಥಿತಿಯಲ್ಲಿವೆ. ಹಲವರು ಶೆಡ್‌ ನಿರ್ಮಿಸಿಕೊಂಡು ಅದನ್ನೇ ಮನೆ ಮಾಡಿಕೊಂಡಿದ್ದಾರೆ. ‘ಸ್ವಂತ ಜಾಗದಲ್ಲಿದ್ದ ಮನೆಯನ್ನು ನೆರೆಯಿಂದಾಗಿ ಕಳೆದುಕೊಂಡಿದ್ದೇವೆ. ಸರ್ಕಾರ ₹5 ಲಕ್ಷ ನೀಡುವುದಾಗಿ ಹೇಳಿದ್ದರಿಂದ ಖುಷಿಯಾಗಿತ್ತು. ಆದರೆ ಹಣ ಬಾರದಿದ್ದರಿಂದ ತುಂಬಾ ನೊಂದಿದ್ದೇನೆ. ಈಗ ಮಕ್ಕಳ ಮದುವೆಗೆ ಸ್ವಂತ ಮನೆ ಕೇಳುತ್ತಾರೆ. ಮನೆ ಇಲ್ಲದಿದ್ದರಿಂದ ವಯಸ್ಸಿಗೆ ಬಂದ ಮಕ್ಕಳ ಮದುವೆಯಾಗುತ್ತಿಲ್ಲ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ‘ಸ್ವಂತ ಸೂರಿಲ್ಲದಿದ್ದರಿಂದ ಸರ್ಕಾರದ ಮೇಲೆ ಕೋಪವಿದೆ. ಇತ್ತೀಚಿನ ಚುನಾವಣೆಗಳಲ್ಲಿ ಯಾರೊಬ್ಬರೂ ಮತ ಕೇಳಲು ನಮ್ಮ ಬಳಿ ಬಂದಿಲ್ಲ. ಬಂದರೆ ತಕ್ಕ ಪಾಠ ಕಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೂ ಸಜ್ಜಾಗಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.