ಹಾವೇರಿ: ಜಿಲ್ಲೆಯ ಹಾನಗಲ್ ಹೊರವಲಯದಲ್ಲಿ ನಿರ್ಮಿಸುತ್ತಿರುವ ಟೋಲ್‌ಗೇಟ್ ಆರಂಭಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯರಿಗೆ ರಿಯಾಯಿತಿ ನೀಡುವಂತೆಯೂ ಆಗ್ರಹ ಕೇಳಿಬರುತ್ತಿದೆ. ಇದೇ ವಿಚಾರವಾಗಿ ಜನರ ಮನವಿ ಆಲಿಸಿರುವ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ‘ಸ್ಥಳೀಯರ ಉಚಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಭರವಸೆ ನೀಡಿದ್ದಾರೆ.
ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಜನರಿಗೆ ಆಗುವ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಟೋಲ್‌ಗೇಟ್ ಹೊರೆ’ ಶೀರ್ಷಿಕೆಯಡಿ ಸರಣಿ ವರದಿಗಳು ಪ್ರಕಟಗೊಳ್ಳುತ್ತಿವೆ. ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಶ್ರೀನಿವಾಸ್ ಮಾನೆ, ‘ನಾನು ಎಂದಿಗೂ ಜನಪರ. ಸ್ಥಳೀಯರಿಗೆ ಟೋಲ್‌ಗೇಟ್‌ನಲ್ಲಿ ಉಚಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೋಗುವವರಿಗೆ ಅನುಕೂಲ ಕಲ್ಪಿಸಲು ಹಾನಗಲ್–ತಡಸ ಮಾರ್ಗವಾಗಿ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಹಾನಗಲ್ ಗಡಿಯಿಂದ ತಡಸ ನಡುವಿನ 43.46 ಕಿ.ಮೀ. ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹ ಮಾಡಲು ತೀರ್ಮಾನಿಸಿರುವ ಸರ್ಕಾರ, ಕರಗುದರಿ ಬಳಿ ಟೋಲ್‌ಗೇಟ್ ನಿರ್ಮಿಸುತ್ತಿದೆ.
ಟೋಲ್ ಸಂಗ್ರಹ ಜವಾಬ್ದಾರಿ ವಹಿಸಿಕೊಂಡಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ (ಕೆಆರ್‌ಡಿಸಿಎಲ್), ದಾವಣಗೆರೆಯ ಜ್ಯೋತಿಪ್ರಕಾಶ್ ಕೆ.ಎಂ. ಅವರಿಗೆ ನಿರ್ವಹಣೆ ಜವಾಬ್ದಾರಿ ವಹಿಸಿದೆ. ಟೋಲ್‌ಗೇಟ್ ನಿರ್ಮಾಣವೂ ಪೂರ್ಣಗೊಂಡಿದ್ದು, ಕಾರ್ಯಾರಂಭ ಮಾತ್ರ ಬಾಕಿಯಿದೆ.
ಆಧಾರ್ ಪರಿಶೀಲಿಸಿ ಪ್ರವೇಶ: ‘ಟೋಲ್‌ಗೇಟ್‌ನ ಸಾಧಕ–ಬಾಧಕಗಳನ್ನು ಚರ್ಚಿಸಲಾಗಿದೆ. ಟೋಲ್‌ಗೇಟ್ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ಆದರೆ, ಸ್ಥಳಿಯರಿಗೆ ಉಚಿತ ಪ್ರವೇಶ ಕಲ್ಪಿಸುವಂತೆ ಕೆಆರ್‌ಡಿಸಿಎಲ್ ಹಾಗೂ ಗುತ್ತಿಗೆದಾರರಿಗೆ ಈಗಾಗಲೇ ಒತ್ತಾಯ ಮಾಡಿದ್ದೇನೆ’ ಎಂದು ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.
‘ಹಾನಗಲ್ ತಾಲ್ಲೂಕು ಕೇಂದ್ರ. ವಿವಿಧ ಹಳ್ಳಿಗಳ ಜನರು ನಿತ್ಯವೂ ಹಾನಗಲ್‌ಗೆ ಬಂದು ಹೋಗುತ್ತಾರೆ. ಪ್ರತಿದಿನ ಟೋಲ್ ಪಾವತಿಸುವುದು ಇವರಿಗೆ ಆರ್ಥಿಕ ಹೊರೆಯಾಗಲಿದೆ. ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡಬಾರದೆಂದು ಕೋರಿದ್ದೇನೆ. ನನ್ನ ಮನವಿಗೆ ಅವರು ಸ್ಪಂದಿಸಬೇಕು. ಇಲ್ಲದಿದ್ದರೆ, ಮುಂದಿನ ನಡೆ ತಿಳಿಸುತ್ತೇನೆ’ ಎಂದು ಹೇಳಿದ್ದಾರೆ.
‘ಸ್ಥಳೀಯರು ಬಳಸುವ ಬಿಳಿ, ಹಳದಿ ಬೋರ್ಡ್ ಸೇರಿದಂತೆ ಎಲ್ಲ ವಾಹನಗಳು ಉಚಿತವಾಗಿ ಸಂಚರಿಸಲು ಟೋಲ್‌ಗೇಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಆಧಾರ್ ಕಾರ್ಡ್ ಪರಿಶೀಲಿಸಿ, ಸ್ಥಳೀಯರೆಂಬುದನ್ನು ಖಚಿತಪಡಿಸಿಕೊಂಡು ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದಿದ್ದಾರೆ.
‘ಸ್ಥಳೀಯರಿಗೆ ಪಾಸ್ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಪಾಸ್ ಬದಲು ಉಚಿತ ಸಂಚಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದೇನೆ. ನನ್ನ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುತ್ತದೆ? ಎಂಬುದನ್ನು ಕಾದು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಸಂಚಾರ ಉಚಿತ: ರೈತರು ಹೆಚ್ಚಾಗಿ ಬಳಸುವ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳಿಗೆ ಟೋಲ್‌ಗೇಟ್‌ನಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅಧಿಕಾರಿಗಳು–ಗುತ್ತಿಗೆದಾರರು ಈಗಾಗಲೇ ತೀರ್ಮಾನಿಸಿದ್ದಾರೆ. ಸ್ಥಳೀಯ ವಾಹನಗಳಿಗೆ ಉಚಿತ ಪ್ರವೇಶ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾಗಿ ಗೊತ್ತಾಗಿದೆ. ಅವಕಾಶ ನೀಡಿದರೆ, ನಿಗದಿತ ಪ್ರಮಾಣದಲ್ಲಿ ಟೋಲ್ ಸಂಗ್ರಹ ಕಷ್ಟವೆಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
‘ಹಾಳಾದ ರಸ್ತೆ ದುರಸ್ತಿ ಮಾಡಲಿ’
ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿಯನ್ನು 2018ರಲ್ಲಿ ಲೋಕೋಪಯೋಗಿ ಹಾಗೂ ಕೆಶಿಫ್‌ನಿಂದ ನಿರ್ಮಿಸಲಾಗಿದೆ. ಕೆಲ ವರ್ಷಗಳಿಂದ ರಸ್ತೆಯು ಹಲವು ಕಡೆಗಳಲ್ಲಿ ಹಾಳಾಗುತ್ತಿದೆ. ಅದರ ದುರಸ್ತಿಗೆ ಲೋಕೋಪಯೋಗಿ ಹಾಗೂ ಕೆಶಿಫ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರ ನಡುವೆಯೇ ಹಾನಗಲ್ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಸಿಆರ್‌ಎಫ್ ಅನುದಾನದಲ್ಲಿ ಸುಮಾರು ₹ 6 ಕೋಟಿ ಅನುದಾನ ಮಂಜೂರಾಗಿತ್ತು.
ಹದಗೆಟ್ಟಿದ್ದ ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿಯನ್ನು ಮಲ್ಲಿಗಾರದಿಂದ ನೆಲ್ಲಿಕೊಪ್ಪ–ಬಾದಾಮಗಟ್ಟಿ ವೃತ್ತದವರೆಗೆ ಅಭಿವೃದ್ಧಿಪಡಿಸಲಾಗಿದೆ. ಇದಾದ ನಂತರವೇ ಟೋಲ್‌ಗೇಟ್ ನಿರ್ಮಾಣಕ್ಕೆ ಕೆಆರ್‌ಡಿಸಿಎಲ್ ಟೆಂಡರ್ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಮಾನೆ ‘ಶಿವಮೊಗ್ಗ– ತಡಸ ರಸ್ತೆ ಹಾಳಾಗಿದ್ದರಿಂದ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಿಆರ್‌ಎಫ್ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಿಸಲಾಗಿದೆ. ಟೋಲ್‌ಗೇಟ್ ನಿರ್ಮಾಣವಾಗುವುದು ಗೊತ್ತಿದ್ದರೆ ರಸ್ತೆ ಅಭಿವೃದ್ಧಿಪಡಿಸುತ್ತಿರಲಿಲ್ಲ. ಅದೇ ಹಣವನ್ನು ಬೇರೆ ರಸ್ತೆ ಅಭಿವೃದ್ಧಿಗೆ ವ್ಯಯಿಸುತ್ತಿದ್ದೆವು’ ಎಂದಿದ್ದಾರೆ.
‘ಟೋಲ್‌ಗೇಟ್ ನಿರ್ವಹಣೆ ಮಾಡುವವರೇ ಸುಸಜ್ಜಿತ ರಸ್ತೆ ನಿರ್ಮಿಸಬೇಕಿತ್ತು. ಅದು ಅವರಿಂದ ಸಾಧ್ಯವಾಗಿಲ್ಲ. ಕ್ಷೇತ್ರದ ಅನುದಾನದಲ್ಲಿ ರಸ್ತೆಯ ಮರು ಡಾಂಬರೀಕರಣ ಮಾಡಿಸಲಾಗಿದೆ. ಈಗ ಕೆಆರ್‌ಡಿಸಿಎಲ್‌ನವರು ಟೋಲ್‌ಗೇಟ್ ಮಾಡಿದ್ದಾರೆ. ರಸ್ತೆಯು ಹಲವು ಕಡೆ ಹಾಳಾಗಿದ್ದು ಅದರ ದುರಸ್ತಿಯನ್ನು ಅವರೇ ಮಾಡಬೇಕು’ ಎಂದು ತಿಳಿಸಿದ್ದಾರೆ.
‘ಸರ್ಕಾರದ ಸಾಲ ತೀರಿಸಲು ಟೋಲ್‌ಗೇಟ್’
‘ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿ ನಿರ್ಮಿಸಲು ಸರ್ಕಾರ ಸಾಲ ಮಾಡಿದೆ. ಅದನ್ನು ತೀರಿಸಲು ಈಗ ಹಾನಗಲ್ ಬಳಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ’ ಎಂದು ಕೆಆರ್‌ಡಿಸಿಎಲ್ ಅಧಿಕಾರಿಯೊಬ್ಬರು ಹೇಳಿದರು.
‘ಶಿವಮೊಗ್ಗ ಶಿಕಾರಿಪುರ ಬಳಿ ಈಗಾಗಲೇ ಟೋಲ್‌ಗೇಟ್ ನಿರ್ಮಿಸಲಾಗಿದೆ. ಅಲ್ಲಿ ಸ್ಥಳೀಯರಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ಈಗ ಹಾನಗಲ್ ಬಳಿಯೂ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ. ಇಲ್ಲಿ ಸ್ಥಳೀಯರು ರಿಯಾಯಿತಿ ಕೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ’ ಎಂದರು.
‘ಹೋರಾಟಗಾರರ ಜೊತೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಶಾಸಕರು ಹಲವು ಸಲಹೆ ನೀಡಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ ಜೊತೆಗೂ ಚರ್ಚಿಸಲಾಗಿದೆ. ಎಲ್ಲ ಆಯಾಮದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಟೋಲ್‌ಗೇಟ್ ಆರಂಭ ಮಾಡುವುದು ನಿಶ್ಚಿತ. ಇದು ಸರ್ಕಾರದ ಆದೇಶ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.