ಹಾವೇರಿ: ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ಶನಿವಾರ ಭಕ್ತಿಪೂರ್ವಕವಾಗಿ, ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದಲ್ಲಿರುವ ಆಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ನಡೆದವು. ಆಂಜನೇಯ ಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಜನರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ದೇವರಿಗೆ ನಮಸ್ಕರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ದೇವಸ್ಥಾನಗಳ ಹೊರಭಾಗದಲ್ಲಿ ತಳಿರು ತೋರಣ ಹಾಕಲಾಗಿತ್ತು. ಗರ್ಭಗುಡಿಯಲ್ಲಿ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ನಗರದ ವಾಲ್ಮೀಕಿ ವೃತ್ತದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರು. ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಬಳಿಯ ಆಂಜನೇಯ ದೇವಸ್ಥಾನದಲ್ಲೂ ವಿವಿಧ ಪೂಜೆಗಳು ನಡೆದವು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಕಂಡುಬಂದಿತು.
ದೇವಸ್ಥಾನಗಳಲ್ಲಿ ತೊಟ್ಟಿಲೋತ್ಸವ ನೆರವೇರಿಸಲಾಯಿತು. ಶಿದ್ದದೇವರಪುರದ ಮಾರುತಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕೆಲ ಭಕ್ತರು, ವಾಹನಗಳಿಗೆ ಪೂಜೆ ಮಾಡಿಸಿದರು. ಭಜನೆಯೊಂದಿಗೆ ಹನುಮಾನ್ ಚಾಲೀಸ ಪಠಿಸಿದರು. ಭಕ್ತರಿಗೆ ಪ‍್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.