ADVERTISEMENT

ಹಾವೇರಿ: ಆರೋಗ್ಯ ಇಲಾಖೆಗೆ ‘ಕೊರತೆ’ ಕಾಯಿಲೆ

ಸಂತೋಷ ಜಿಗಳಿಕೊಪ್ಪ
Published 27 ಜುಲೈ 2024, 4:21 IST
Last Updated 27 ಜುಲೈ 2024, 4:21 IST
ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ
ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ   

ಹಾವೇರಿ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳು ನಿಧಾನವಾಗಿ ಸೋರಗುತ್ತಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಇತರೆ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಕಡೆಯೂ ಹಲವು ವರ್ಷಗಳಿಂದ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಿವೆ. ಈ ‘ಕೊರತೆ’ ಕಾಯಿಲೆಗೆ ಮಾತ್ರ ಇದುವರೆಗೂ ಪರಿಹಾರ ಸಿಕ್ಕಿಲ್ಲ.

‘ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ವಿಸ್ತರಣಾ ಕೇಂದ್ರಗಳು, ನಮ್ಮ ಕ್ಲಿನಿಕ್, ಉಪ ಆರೋಗ್ಯ ಕೇಂದ್ರಗಳು ಹಾಗೂ ಉಪ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ವೈದ್ಯರು–ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಪ್ರತಿ ಬಾರಿಯೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತಿದೆ. ಆದರೆ, ಸ್ಪಂದನೆ ಸಿಗುತ್ತಿಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಶುಶ್ರೂಷಾಧಿಕಾರಿ, ಶುಶ್ರೂಷಕಿಯರು, ಫಾರ್ಮಸಿ ಅಧಿಕಾರಿ, ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು, ಆರೋಗ್ಯ ನಿರೀಕ್ಷಣಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ವಾಹನ ಚಾಲಕರು, ಆಸ್ಪತ್ರೆ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ 1,464 ಹುದ್ದೆಗಳು ಖಾಲಿಯಿವೆ. ಇದರಿಂದಾಗಿ, ಆರೋಗ್ಯ ಸೇವೆಯಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ತಿಳಿಸಿದರು.

ಸೇವೆಗೆ ಬಾರದ ವೈದ್ಯರು: ‘ಆಸ್ಪತ್ರೆಗೆ ಬರುವ ಜನರನ್ನು ತಪಾಸಣೆ ನಡೆಸಲು ವೈದ್ಯರ ಅಗತ್ಯತೆ ಹೆಚ್ಚಿದೆ. ಹೀಗಾಗಿ, ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಹಲವು ಬಾರಿ ಅರ್ಜಿಗಳನ್ನು ಕರೆಯಲಾಗಿದೆ. ಆದರೆ, ಎಂಬಿಬಿಎಸ್ ಪೂರ್ಣಗೊಳಿಸಿರುವ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ’ ಎಂದು ಅಧಿಕಾರಿ ಹೇಳಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಉತ್ತಮ ಸಂಬಳವಿದೆ. ಆರೋಗ್ಯ ಇಲಾಖೆಯಲ್ಲಿ ಸಂಬಳ ಕಡಿಮೆ ಇದೆ. ಜೊತೆಗೆ, ಒತ್ತಡ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ವೈದ್ಯರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಮನಸ್ಸು ಮಾಡುತ್ತಿಲ್ಲ’ ಎಂದು ತಿಳಿಸಿದರು.

ನಿಗದಿತ ಸಮಯಕ್ಕೆ ಸಿಗದ ವೇತನ: ‘ನಾವೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದಿದ್ದೇವೆ. ಗ್ರಾಮೀಣ ಜನರ ಸೇವೆ ಮಾಡಬೇಕೆಂದು ಹಳ್ಳಿಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ನಿಗದಿತ ಸಮಯಕ್ಕೆ ನಮಗೆ ವೇತನ ಸಿಗುವುದಿಲ್ಲ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಅಳಲು ತೋಡಿಕೊಂಡರು.

‘ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಶಾಸಕರವರೆಗೂ ಕರೆಗಳು ಬರುತ್ತವೆ. ರಾಜಕೀಯ ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿಯಿದೆ. ಇದೇ ಕಾರಣಕ್ಕೆ ಹಲವು ವೈದ್ಯರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದೂ ಹೇಳಿದರು.

ವೇತನ ಪಾವತಿ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ, ‘ಅನುದಾನ ಬಿಡುಗಡೆಯಲ್ಲಿ ಏನಾದರೂ ಅಡಚಣೆ ಇದ್ದಾಗ ಮಾತ್ರ, ವೇತನ ತಡವಾಗುತ್ತದೆ. ಉಳಿದಂತೆ, ಎಲ್ಲ ಕಡೆಯೂ ನಿಗದಿತ ಸಮಯಕ್ಕೆ ವೇತನ ನೀಡಲಾಗುತ್ತಿದೆ’ ಎಂದರು.

ವೈದ್ಯರು ಸಿಬ್ಬಂದಿ ಕೊರತೆ ಬಗ್ಗೆ ಆರೋಗ್ಯ ಸಚಿವರಿಗೆ ಮಾಹಿತಿ ನೀಡಲಾಗಿದೆ. ಸದ್ಯದಲ್ಲೇ ಕಾಯಂ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮೂಲಕ ವೈದ್ಯರು– ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ ಕೋರಲಾಗಿದೆ
ರಾಜೇಶ ಸುರಗಿಹಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಜಿಲ್ಲೆಯ ಆರೋಗ್ಯ ಇಲಾಖೆ ಮಾಹಿತಿ

ಜಿಲ್ಲಾಸ್ಪತ್ರೆ – 1

ತಾಲ್ಲೂಕು ಆಸ್ಪತ್ರೆಗಳು – 6

ಸಮುದಾಯ ಆರೋಗ್ಯ ಕೇಂದ್ರಗಳು – 5

ಪ್ರಾಥಮಿಕ ಆರೋಗ್ಯ ಕೇಂದ್ರಗಳು – 69

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು – 4

ಆರೋಗ್ಯ ವಿಸ್ತರಣಾ ಕೇಂದ್ರಗಳು – 4

ನಮ್ಮ ಕ್ಲಿನಿಕ್ – 5

ಉಪ ಆರೋಗ್ಯ ಕೇಂದ್ರಗಳು – 305

ಉಪ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು – 212

‘ನಮ್ಮ ಕ್ಲಿನಿಕ್: ಶುಶ್ರೂಷಕಿಯರೇ ವೈದ್ಯರು

’ ಕೆಮ್ಮು ನೆಗಡಿ ಜ್ವರದಂಥ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ರಾಜ್ಯ ಸರ್ಕಾರ ನಮ್ಮ ಕ್ಲಿನಿಕ್ ಸ್ಥಾಪಿಸಿದೆ. ಆದರೆ ಜಿಲ್ಲೆಯಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಶುಶ್ರೂಷಕರಿಯರೇ ವೈದ್ಯರ ರೀತಿಯಲ್ಲಿ ಜನರನ್ನು ತಪಾಸಣೆ ಮಾಡಿ ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡುತ್ತಿರುವ ಆರೋಪವಿದೆ. ‘ಹಾವೇರಿಯ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರ ಹುದ್ದೆ ಖಾಲಿ ಇದೆ. ಆದರೆ ಇಲ್ಲಿಯ ಶುಶ್ರೂಷಕಿಯರೇ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಜನರು ಅನಿವಾರ್ಯವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಏನಾದರೂ ವ್ಯತಿರಿಕ್ತ ಪರಿಣಾಮವಾದರೆ ಯಾರು ಹೊಣೆ’ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.