ADVERTISEMENT

ಮಹಿಳೆ ಇಲ್ಲದ ವೇದಿಕೆ: ಅವಮಾನವೆಂದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:41 IST
Last Updated 6 ಆಗಸ್ಟ್ 2025, 2:41 IST
ಹಾವೇರಿ ಜಿಲ್ಗೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿದ್ಯಾರ್ಥಿನಿಯರು ಇಲ್ಲದಿದ್ದರಿಂದ, ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿದ್ದರು.
ಹಾವೇರಿ ಜಿಲ್ಗೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿದ್ಯಾರ್ಥಿನಿಯರು ಇಲ್ಲದಿದ್ದರಿಂದ, ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿದ್ದರು.   

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಇಲ್ಲದಿದ್ದಕ್ಕೆ ಹಾಗೂ ವೇದಿಕೆಯಲ್ಲಿ ಮಹಿಳಾ ಪ್ರತಿನಿಧಿ ಕೂರಿಸದಿದ್ದಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಪ್ರವಾಸ ಕೈಗೊಂಡಿರುವ ನಾಗಲಕ್ಷ್ಮಿ ಅವರು ಮಂಗಳವಾರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕರೊಂದಿಗೆ ಸಂವಾದ ನಿಗದಿಪಡಿಸಲಾಗಿತ್ತು.

ಮಧ್ಯಾಹ್ನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಾಗಲಕ್ಷ್ಮಿ ಅವರನ್ನು ಆರತಿ ಮಾಡಿ ಸ್ವಾಗತಿಸಲಾಯಿತು. ನಂತರ, ಅಲ್ಲಿಯೇ ಊಟ ಮಾಡಿದರು. ಅದಾದ ಬಳಿಕ, ಸಭಾ ಕಾರ್ಯಕ್ರಮ ಆರಂಭವಾಯಿತು. ಆದರೆ, ಒಬ್ಬ ವಿದ್ಯಾರ್ಥಿಯೂ ಕಾರ್ಯಕ್ರಮದಲ್ಲಿ ಇರಲಿಲ್ಲ. ಜೊತೆಗೆ, ವೇದಿಕೆಯಲ್ಲಿ ನಾಗಲಕ್ಷ್ಮಿ ಒಬ್ಬರೇ ಮಹಿಳೆಯಿದ್ದರು. ಉಳಿದಂತೆ, ಕುಲಪತಿ ಟಿ.ಎಂ. ಭಾಸ್ಕರ್, ಕುಲಸಚಿವ ಸಿ.ಟಿ. ಗುರುಪ್ರಸಾದ್ ಹಾಗೂ ಸಹಾಯಕ ಕುಲಸಚಿವ ಷಹಜಹಾನ್ ಮುದುಕವಿ ವೇದಿಕೆಯಲ್ಲಿ ಕುಳಿತಿದ್ದರು.

ADVERTISEMENT

ಪ್ರಾಸ್ತಾವಿಕ ಭಾಷಣದಲ್ಲಿ ಸ್ಪಷ್ಟನೆ ನೀಡಿದ ವಿವಿಯವರು, ‘ಶೈಕ್ಷಣಿಕ ವರ್ಷ ಮುಗಿದಿದೆ. ಅಧ್ಯಕ್ಷರು ಬರುತ್ತಾರೆಂದು ವಿದ್ಯಾರ್ಥಿನಿಯರನ್ನು ಆಹ್ವಾನಿಸಲಾಗಿತ್ತು. ಆದರೆ, ಬಸ್‌ ಮುಷ್ಕರವಿದಿದ್ದರಿಂದ ಯಾರೂ ಬಂದಿಲ್ಲ’ ಎಂದರು.

ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ನಾಗಲಕ್ಷ್ಮಿ, ‘ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಲು ಬಂದಿದ್ದೆ. ಅವರು ಇಲ್ಲವೆಂಬುದು ನನಗೆ ಗೊತ್ತಿರಲಿಲ್ಲ. ರಜೆ ಎಂದು ನೀವೇ ಹೇಳಿದಿರಿ. ಇನ್ನೊಮ್ಮೆ ಅವಕಾಶ ಬಂದಾಗ ಸಂವಾದ ನಡೆಸುವೆ’ ಎಂದರು.

‘ವೇದಿಕೆ ಮೇಲೂ ಮಹಿಳೆಯರನ್ನು ಕೂರಿಸಿಲ್ಲ. ಮಹಿಳೆಯಿಂದಲೇ ಈ ಜಾನಪದ. ಮಹಿಳೆ ಇಲ್ಲದಿದ್ದರೆ, ಜಾನಪದವೇ ಇಲ್ಲ. ಮಹಿಳಾ ಆಯೋಗದ ಅಧ್ಯಕ್ಷರು ಬಂದಾಗ, ವೇದಿಕೆಯಲ್ಲಿ ಮಹಿಳೆಯನ್ನು ಕೂರಿಸದಿದ್ದರೆ ಅವಮಾನ ಆಗುತ್ತದೆ. ಮಹಿಳೆ ಕೇವಲ ನಿರೂಪಣೆ ಹಾಗೂ ಪ್ರಾರ್ಥನೆಗಷ್ಟೇ ಸೀಮಿತವಲ್ಲ. ವೇದಿಕೆ ಮೇಲೆಯೂ ಮಹಿಳೆ ಇರಬೇಕು. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಬಂದಾಗ ವೇದಿಕೆಯಲ್ಲಿ ಮಹಿಳೆ ಇರುವಂತೆ ನೋಡಿಕೊಳ್ಳಿ. ನೀವೆಲ್ಲರೂ ಕೆಳಗೆ ಕುಳಿತರೂ ಪರವಾಗಿಲ್ಲ. ವೇದಿಕೆ ತುಂಬ ಮಹಿಳೆಯರಿದ್ದರೆ ಒಳ್ಳೆಯದು. ಎಲ್ಲಿ ಮಹಿಳೆಗೆ ಗೌರವ ಸಿಗುತ್ತದೆಯೋ ಆ ಸಂಸ್ಥೆ ಬೆಳೆಯುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

‘ಜಾನಪದವು ತಾಯಿಬೇರು ಇದ್ದಂತೆ. ಅದು ಗಟ್ಟಿಯಿದ್ದರೆ, ಉಳಿದ ಎಲ್ಲವೂ ಗಟ್ಟಿ ಇರುತ್ತದೆ. ಈ ಜಾನಪದ ಉಳಿಸಿ ಬೆಳೆಸಬೇಕು. ಯುವಜನತೆಯಲ್ಲಿ ಜಾನಪದದ ಸ್ಫೂರ್ತಿ ತುಂಬುವ ಕೆಲಸವಾಗಬೇಕು’ ಎಂದರು.

ವೇತನ ಹೆಚ್ಚಳಕ್ಕೆ ಆಗ್ರಹ: ನಾಗಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದ ಹೊರಗುತ್ತಿಗೆಯ ಮಹಿಳಾ ನೌಕರರು, ‘ನಮಗೆ ಸದ್ಯ ₹ 11,664 ವೇತನವಿದೆ. ಇದನ್ನು ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು.

‘ಐಸಿಸಿ ಸಮಿತಿ: ವರದಿಗೆ ಸೂಚನೆ’

‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಉದ್ಯೋಗಿಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ದೂರುಗಳನ್ನು ಆಲಿಸಲು ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಿರುವ ಬಗ್ಗೆ ವರ್ಷವಾರು ಮಾಹಿತಿ ನೀಡಬೇಕು’ ಎಂದು ನಾಗಲಕ್ಷ್ಮಿ ಅವರು ಕುಲಪತಿ ಅವರಿಗೆ ಸೂಚನೆ ನೀಡಿದರು. ವಿಶ್ವವಿದ್ಯಾಲಯದಲ್ಲಿ ಸಮಿತಿಯ ಬಗ್ಗೆ ಸೂಚನಾ ಫಲಕ ಇಲ್ಲದಿರುವುದನ್ನು ಪ್ರಶ್ನಿಸಿದ ನಾಗಲಕ್ಷ್ಮಿ ‘ಎಲ್ಲ ಕಡೆಯೂ ಭಿತ್ತಿಪತ್ರ ಅಂಟಿಸಬೇಕು. ಅರ್ಧದಷ್ಟು ಮಹಿಳಾ ಸದಸ್ಯರಿರುವಂತೆ ನೋಡಿಕೊಂಡು ಐಸಿಸಿ ರಚಿಸಬೇಕು. ಇದರ ಅಧ್ಯಕ್ಷರು ತಾಯಿ ಹೃದಯ ಹೊಂದಿರಬೇಕು. ಎಲ್ಲರನ್ನೂ ಸಮಾನತೆಯಿಂದ ನೋಡಿ ದೂರುಗಳನ್ನು ಇತ್ಯರ್ಥಪಡಿಸಬೇಕು’ ಎಂದು ತಾಕೀತು ಮಾಡಿದರು. 2018–19ರಲ್ಲಿ ರಚಿಸಿದ್ದ ಸಮಿತಿಯ ಮಾಹಿತಿ ನೀಡಿದ ವಿವಿಯವರು 2025ರ ಮಾಹಿತಿ ನೀಡುವುದಾಗಿ ಕಾಲಾವಕಾಶ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಹಾಜರಿದ್ದ ಸಮಿತಿಯ ಮಾಜಿ ಸದಸ್ಯೆಯೊಬ್ಬರು ‘ಸಮಿತಿ ನಿರ್ವಹಣೆ ಸಮರ್ಪಕವಾಗಿಲ್ಲ. ನನ್ನನ್ನೇ ಏಕಾಏಕಿ ಸದಸ್ಯತ್ವದಿಂದ ತೆಗೆದಿದ್ದು ಕಾರಣ ಸಹ ತಿಳಿಸಿಲ್ಲ’ ಎಂದು ದೂರಿದರು. ಈ ಬಗ್ಗೆ ಲಿಖಿತ ದೂರು ನೀಡುವಂತೆ ಅಧ್ಯಕ್ಷರು ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.