ADVERTISEMENT

ಹಾವೇರಿ | ‘ಜನೌಷಧ’ ಬಂದ್: ಬಡವರ ಜೇಬಿಗೆ ಕತ್ತರಿ

* ಜಿಲ್ಲೆಯ 15 ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ * ನಿತ್ಯವೂ 3,000ಕ್ಕೂ ಹೆಚ್ಚು ಜನರಿಂದ ಖರೀದಿ * ವೃದ್ಧರು–ನಿವೃತ್ತರಿಗೆ ಆಸರೆಯಾದ ಕೇಂದ್ರ

ಸಂತೋಷ ಜಿಗಳಿಕೊಪ್ಪ
Published 2 ಜೂನ್ 2025, 4:32 IST
Last Updated 2 ಜೂನ್ 2025, 4:32 IST
ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಔಷಧ ಖರೀದಿಸಲು ಬಂದಿದ್ದ ಜನರು
ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಔಷಧ ಖರೀದಿಸಲು ಬಂದಿದ್ದ ಜನರು   

ಹಾವೇರಿ: ದೇಶದಲ್ಲಿ ವ್ಯಾಪಕವಾಗಿದ್ದ ‘ಔಷಧ (ಡ್ರಗ್ಸ್) ಮಾಫಿಯಾ’ದಿಂದ ಬಡವರು ಅನುಭವಿಸುತ್ತಿದ್ದ ಯಾತನೆಗೆ ಪರಿಹಾರವಾಗಿ ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ಗಳನ್ನು ಆರಂಭಿಸಲಾಗಿದ್ದು, ಇದೀಗ ಈ ಮಳಿಗೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ‘ಕಡಿಮೆ ದರದಲ್ಲಿ ಔಷಧಿ ನೀಡುತ್ತಿರುವ ಜನೌಷಧ ಮಳಿಗೆಗಳು, ನಮ್ಮ ಹಣವನ್ನು ಉಳಿಸುತ್ತಿವೆ. ಡ್ರಗ್ಸ್ ಮಾಫಿಯಾದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಬಡವರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ’ ಎಂದು ಆರೋಪಿಸುತ್ತಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆ, ಎಲ್ಲ ತಾಲ್ಲೂಕುಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 15 ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯವೂ 3,000ಕ್ಕೂ ಹೆಚ್ಚು ಜನರು, ಈ ಕೇಂದ್ರಗಳಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ.

ADVERTISEMENT

ವೃದ್ಧರು, ಸರ್ಕಾರಿ ಹಾಗೂ ಖಾಸಗಿ ಕಂಪನಿಯ ನಿವೃತ್ತ ನೌಕರರು ಸೇರಿ ಎಲ್ಲ ರೀತಿಯ ಜನರಿಗೆ ಜನೌಷಧ ಕೇಂದ್ರಗಳು ಅನುಕೂಲವಾಗುತ್ತಿದೆ. ಖಾಸಗಿ ಕೇಂದ್ರಗಳಲ್ಲಿ ದೊರೆಯುವ ಔಷಧಗಳ ಬೆಲೆಗೂ, ಜನೌಷಧ ಕೇಂದ್ರಗಳಲ್ಲಿ ದೊರೆಯುವ ಔಷಧದ ಬೆಲೆಗೂ ಶೇ 40ರಿಂದ 70ರಷ್ಟು ವ್ಯತ್ಯಾಸವಿದೆ.  

‘ಸರ್ಕಾರಿ ಆಸ್ಪತ್ರೆಯ ವೈದ್ಯರು, ಹೊರಗಡೆ ಔಷಧದ ಚೀಟಿ ಬರೆದುಕೊಡುತ್ತಿದ್ದಾರೆ. ಅಂಥ ರೋಗಿಗಳು, ಜನೌಷಧ ಕೇಂದ್ರದಲ್ಲಿ ಔಷಧ ಖರೀದಿಸುತ್ತಿದ್ದಾರೆ. ಚೀಟಿ ಬರೆದುಕೊಡುವುದನ್ನು ತಪ್ಪಿಸಲು, ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಬಂದ್ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಉಚಿತ ಔಷಧ ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಕಾಡುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ವೈದ್ಯರು, ಹೊರಗಡೆ ಔಷಧ ಬರೆದುಕೊಡುವುದು ತಪ್ಪುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.

ಜನೌಷಧ ಕೇಂದ್ರ ಬಂದ್ ಮಾಡಿದರೆ, ಇದರ ಪರಿಣಾಮ ಬಡವರ ಮೇಲಾಗಲಿದೆ. ಸರ್ವ ಧರ್ಮ ಹಾಗೂ ಜಾತಿಯ ಬಡವರು, ಜನೌಷಧ ಕೇಂದ್ರಗಳನ್ನು ಅವಲಂಬಿಸಿದ್ದಾರೆ. ದುಡಿಮೆಯ ಅಲ್ಪ ಹಣದಲ್ಲಿ ಔಷಧಗಳನ್ನು ಖರೀದಿಸಿ, ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಬಂದ್ ಮಾಡಿದರೆ, ಔಷಧ ಖರೀದಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಅವರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ಸರ್ಕಾರದ ವಿರುದ್ಧ ಕಿಡಿ: ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರಗಳ ಗ್ರಾಹಕರನ್ನು ಮಾತನಾಡಿಸಿದಾಗ, ಎಲ್ಲರೂ ಕೇಂದ್ರವನ್ನು ಕೊಂಡಾಡಿದರು. ‘ಈ ಮಳಿಗೆಯಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಉಳಿಯುತ್ತಿದೆ’ ಎಂದು ಹೊಗಳಿದರು.

ಮಳಿಗೆ ಬಂದ್ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ, ‘ಜನೌಷಧ ಕೇಂದ್ರ ಇರುವುದರಿಂದ, ಕಡಿಮೆ ಬೆಲೆಗೆ ಔಷಧ ಸಿಗುತ್ತಿದೆ. ದುಬಾರಿ ಬೆಲೆ ಕೊಟ್ಟು ಔಷಧ ಖರೀದಿಸುವ ಶಕ್ತಿ ನಮಗಿಲ್ಲ. ಸರ್ಕಾರ ನಿಜವಾಗಿಯೂ ಬಡವರ ಪರವಾಗಿದ್ದರೆ, ಈ ನಿರ್ಧಾರ ವಾಪಸು ಪಡೆಯಬೇಕು’ ಎಂದು ಆಗ್ರಹಿಸಿದರು.

‘ಜನೌಷಧ ಕೇಂದ್ರಗಳಿಂದ, ಔಷಧ ಮಾರಾಟ ಕಂಪನಿಗಳಿಗೆ ತುಂಬಾ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರು ಸರ್ಕಾರದ ಮೇಲೆ ಒತ್ತಡ ಹೇರಿ, ಕೇಂದ್ರ ಬಂದ್ ಮಾಡಿಸುತ್ತಿದ್ದಾರೆ. ಸರ್ಕಾರವೂ ಕಂಪನಿಗಳ ಪರ ನಿಂತಿದ್ದು, ಬಡವರ ಕೂಗು ಯಾರಿಗೂ ಕೇಳಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಔಷಧಗಳು ದೊರೆಯುತ್ತಿಲ್ಲ. ವೈದ್ಯರು ಹೊರಗಡೆ ತೆಗೆದುಕೊಳ್ಳುವಂತೆ ಹೇಳುತ್ತಿದ್ದಾರೆ. ಹೊರಗಡೆ ಹೋದರೆ, ಬೇಕಾಬಿಟ್ಟಿ ದರ ಹೇಳುತ್ತಾರೆ. ಜನೌಷಧ ಮಳಿಗೆಯಲ್ಲಿ ಮಾತ್ರ ಕೈ ಗೆಟಕುವ ದರದಲ್ಲಿ ಔಷಧಗಳು ದೊರೆಯುತ್ತವೆ’ ಎಂದು ಜನರು ಹೇಳುತ್ತಿದ್ದಾರೆ.

ರಾಣೆಬೆನ್ನೂರು: ಇಲ್ಲಿಯ ಆಸ್ಪತ್ರೆಯ ಜನೌಷಧ ಕೇಂದ್ರದಲ್ಲಿ 2000ಕ್ಕಿಂತ ಹೆಚ್ಚು ಔಷಧಿಗಳು, 300 ಕ್ಕಿಂತ ಹೆಚ್ಚು ಸರ್ಜರಿ ಉಪಕರಣಗಳು ಮಾರಾಟಕ್ಕಿವೆ. ಪ್ರತಿದಿನ 800ರಿಂದ 1,000 ಜನರು ಔಷಧಿ ಖರೀದಿಸುತ್ತಿದ್ದಾರೆ. ದಿಢೀರ್ ಕೇಂದ್ರ ಬಂದ್ ಮಾಡಿದರೆ, ಬಡವರಿಗೆ ಹೊರೆಯಾಗಲಿದೆ.

’ರಾಜ್ಯ ಸರ್ಕಾರ, ಖಾಸಗಿ ಔಷಧ ಕಂಪನಿಗಳ ಜೊತೆ ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿರುವ ಅನುಮಾನವಿದೆ. ಬಡ ರೋಗಿಗಳ ಪರ ನಿಲ್ಲಬೇಕಾದ ಸರ್ಕಾರ, ಮಳಿಗೆ ಮುಚ್ಚುವುದು ಸರಿಯಲ್ಲ’ ಎಂದು ಬೇಲೂರಿನ ಬಸವರಾಜ ಚಳಗೇರಿ ಹೇಳಿದರು.

‘ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇರುವವರು ನಿತ್ಯವೂ ಮಾತ್ರೆ ತೆಗೆದುಕೊಳ್ಳಬೇಕು. ಅವರೆಲ್ಲರೂ ಕಡಿಮೆ ಬೆಲೆಗೆ ಕೇಂದ್ರದಲ್ಲಿ ಮಾತ್ರೆ ಖರೀದಿಸುತ್ತಿದ್ದಾರೆ. ಕೇಂದ್ರ ಬಂದ್ ಮಾಡಿದರೆ, ಅವರಿಗೆ ಹೆಚ್ಚು ತೊಂದರೆಯಾಗಲಿದೆ’ ಎಂದು ಯತ್ತಿನಹಳ್ಳಿಯ ಪೂರ್ಣಿಮಾ ಕುರುವತ್ತಿ ತಿಳಿಸಿದರು. 

ಸವಣೂರು: ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ನಿತ್ಯವೂ 500ಕ್ಕೂ ಹೆಚ್ಚು ಜನರು ಮಾತ್ರೆ ಖರೀದಿಸುತ್ತಿದ್ದಾರೆ.

‘ಜನೌಷಧ ಕೇಂದ್ರ ಬಂದ್ ಮಾಡಿದರೆ, ಬಡವರಿಗೆ ತೊಂದರೆ ಆಗಲಿದೆ. ಜೀವನ ನಿರ್ವಹಣೆಗೆ ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ’ ಎಂದು ಗ್ರಾಹಕ ಮೈಲಾರಪ್ಪ ಹೇಳಿದರು.

ಹಾನಗಲ್: ಇಲ್ಲಿಯ ತಾಲ್ಲೂಕು ಆಸ್ಪತ್ರೆಯಲ್ಲಿರುವ ಜನೌಷಧ ಕೇಂದ್ರದಲ್ಲಿ ನಿತ್ಯವೂ ಸುಮಾರು 400 ಮಂದಿ ಔಷಧ ಖರೀದಿಸುತ್ತಿದ್ದಾರೆ.

‘ನಮ್ಮಂತ ಬಡವರಿಗೆ ಈ ಕೇಂದ್ರ ಆಸರೆಯಾಗಿದೆ. ಹೊರಗಡೆ ಔಷಧಗಳ ಬೆಲೆ ಜಾಸ್ತಿ. ಇಲ್ಲಿ ತೀರಾ ಕಡಿಮೆ. ಬಡವರ ಕೇಂದ್ರವನ್ನು ಬಂದ್ ಮಾಡುತ್ತಿರುವವರು, ಮತ ಹಾಕಿದ ನಮ್ಮ ಬಗ್ಗೆ ಚಿಂತಿಸಬೇಕು’ ಎಂದು ಸಾವಿತ್ರವ್ವ ಹೇಳಿದರು.

ಶಿಗ್ಗಾವಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ಬಂಕಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರವಿದ್ದು, 200ಕ್ಕೂ ಹೆಚ್ಚು ಮಂದಿ ಔಷಧ ಖರೀದಿಸುತ್ತಿದ್ದಾರೆ. ಹೊರಗಡೆ ದರಕ್ಕಿಂತ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತಿವೆ.

‘ಜನೌಷಧ ಕೇಂದ್ರಗಳನ್ನು ಮುಚ್ಚಿದರೆ, ಬಡವರಿಗೆ ಅನ್ಯಾಯವಾಗಲಿದೆ. ಬಡವರ ಹೆಸರು ಹೇಳುವ ಸರ್ಕಾರ, ಕೇಂದ್ರ ಮುಚ್ಚಬಾರದು’ ಎಂದು ಕಲ್ಯಾಣದ ನೀಲಮ್ಮ ಹೇಳಿದರು.

ಬ್ಯಾಡಗಿ: ಪಟ್ಟಣ ಸರ್ಕಾರಿ ಆಸ್ಪತ್ರೆಯ ಜನೌಷಧ ಕೇಂದ್ರದಲ್ಲಿ ನಿತ್ಯವೂ 500ಕ್ಕೂ ಹೆಚ್ಚು ಮಂದಿ ಔಷಧ ಖರೀದಿಸುತ್ತಾರೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಔಷಧಗಳು ಉಚಿತವಾಗಿ ಸಿಗುವುದಿಲ್ಲ. ಹೀಗಾಗಿ, ಜನೌಷಧ ಕೇಂದ್ರ ಅವಲಂಬಿಸಿದ್ದೇವೆ. ಕೇಂದ್ರ ಬಂದ್ ಮಾಡಿದರೆ, ಹೊರಗಡೆ ದುಬಾರಿ ಬೆಲೆಗೆ ಔಷಧ ಖರೀದಿಸಬೇಕಾಗುತ್ತದೆ. ಬಡವರಿಗೆ ಹೊರೆಯಾಗಲಿದೆ’ ಎಂದು ಶಿಡೇನೂರ ಗ್ರಾಮದ ಸುರೇಶ ಹೇಳಿದರು.

ಜನೌಷಧ ಕೇಂದ್ರಗಳಿಂದ ಬಡವರಿಗೆ ಗುಣಮಟ್ಟದ ಔಷಧಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಕೇಂದ್ರ ಬಂದ್ ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಬಿಡಬೇಕು
ಬಸವರಾಜ ಬೊಮ್ಮಾಯಿ, ಸಂಸದ

ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರ
ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಖರೀದಿಸಿದ ಔಷಧಗಳನ್ನು ಮಹಿಳೆಯರು ವೀಕ್ಷಿಸಿದರು
ಜನೌಷಧ ಕೇಂದ್ರದಲ್ಲಿ ಖರೀದಿಸಿದ ಮಾತ್ರೆಗಳನ್ನು ವೃದ್ಧ ಗೌಸಸಾಬ್ ರಿತ್ತಿ ಅವರು ವೀಕ್ಷಿಸಿದರು
ಕೇಂದ್ರ ಬಂದ್‌ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೇಂದ್ರ ಬಂದ್ ಮಾಡಿಸುವ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ
ಡಾ. ರಾಜೇಶ ಸುರಗಿಹಳ್ಳಿ ಜಿಲ್ಲಾ ಆರೋಗ್ಯಾಧಿಕಾರಿ

ಜನೌಷಧ ಕೇಂದ್ರದ ಗ್ರಾಹಕರ ಅಭಿಪ್ರಾಯ‌

ನನಗೆ 75 ವರ್ಷ. ನಾನು ಬದುಕಬೇಕಾದರೆ ಔಷಧಗಳು ಬೇಕೇ ಬೇಕು. ನನ್ನ ಮಾತ್ರೆಗಳಿಗೆ ಹೊರಗಡೆ ₹ 200 ತೆಗೆದುಕೊಳ್ಳುತ್ತಾರೆ. ಜನೌಷಧ ಕೇಂದ್ರದಲ್ಲಿ ಅರ್ಧ ಬೆಲೆ ಮಾಬುಸಾಬ್ ಬೆಳವಗಿ ವೃದ್ಧ ಜನೌಷಧ ಕೇಂದ್ರಗಳು ಬಡವರಿಗೆ ಅನುಕೂಲವಾಗಿವೆ. ಇದನ್ನು ಬಂದ್ ಮಾಡಿದರೆ ಬಡವರ ಮೇಲೆ ರಾಜ್ಯ ಸರ್ಕಾರವೇ ಬರೆ ಎಳೆದಂತಾಗುತ್ತದೆ

-ಶಿವನಗೌಡ ಪಾಟೀಲ ಬ್ಯಾಡಗಿ ತಿಮ್ಮಾಪುರದ ನಿವಾಸಿ

ನನ್ನ ಮಾತ್ರೆಗಳಿಗೆ ಹೊರಗಡೆ ₹ 850. ಜನೌಷಧ ಕೇಂದ್ರದಲ್ಲಿ ಕೇವಲ ₹ 140. ಔಷಧ ಅಗತ್ಯವಿದ್ದಾಗ ಜನೌಷಧ ಮಳಿಗೆಗೆ ಬರುತ್ತೇನೆ ಶೈಲಾ ಪಾಟೀಲ ದಿಡಗೂರು ನಿವಾಸಿ ನಾವು ಗಂಡ–ಹೆಂಡತಿ ಇಬ್ಬರೂ ವೃದ್ಧರು. ಇಬ್ಬರಿಗೂ ಮಾತ್ರೆಗಳು ಬೇಕು. ಜನೌಷಧ ಕೇಂದ್ರದಲ್ಲಿ ಕಡಿಮೆ ಬೆಲೆ ಇರುವುದರಿಂದ ಪ್ರತಿ ತಿಂಗಳು ಬಂದು ಮಾತ್ರೆ ಖರೀದಿಸುತ್ತೇವೆ

-ಗೌಸಸಾಬ್ ರಿತ್ತಿ ಹೊಸರಿತ್ತಿ ವೃದ್ಧ

ನನ್ನ ಮಾತ್ರೆಗಳಿಗೆ ಹೊರಗಡೆ ₹ 100 ದರವಿದೆ. ಜನೌಷಧ ಕೇಂದ್ರದಲ್ಲಿ ಕೇವಲ ₹ 25. ಹೀಗಾಗಿ ಜನೌಷಧ ಕೇಂದ್ರ ನನಗೆ ಹೆಚ್ಚು ಅನುಕೂಲವಾಗಿದೆ

-ಲಿಂಗರಾಜ ಬಳಿಗಾರ ದೇವಿಹೊಸೂರು ನಿವಾಸಿ

ಈ ಹಿಂದೆ ಔಷಧ ಖರೀದಿಗೆ ಸಾವಿರಾರು ರೂಪಾಯಿ ಬೇಕಿತ್ತು. ಅಷ್ಟು ಹಣ ಹೊಂದಿಸಲು ಆಗುತ್ತಿರಲಿಲ್ಲ. ಜನೌಷಧ ಆರಂಭವಾದ ನಂತರ ಕಡಿಮೆ ಬೆಲೆಗೆ ಮಾತ್ರೆಗಳು ಸಿಗುತ್ತಿವೆ. ಪ್ರತಿ 15 ದಿನಕ್ಕೊಮ್ಮೆ ಔಷಧ ಖರೀದಿಸುತ್ತೇನೆ 

-ಶಾಂತವ್ವ ಕುಸನೂರು ಹಾನಗಲ್ ವೃದ್ಧೆ

ಶ್ರೀಮಂತರು ಕೇಳಿದಷ್ಟು ಹಣ ಕೊಟ್ಟು ಔಷಧ ಖರೀದಿಸುತ್ತಿದ್ದಾರೆ. ಆದರೆ ಬಡವರು ದುಡಿದ ಹಣದಲ್ಲಿ ಊಟ ಮಾಡುವುದು ಕಷ್ಟ. ಕೇಂದ್ರ ಆರಂಭವಾದಾಗಿನಿಂದ ಬಡವರು ಬದುಕುತ್ತಿದ್ದಾರೆ. ನನ್ನ ಮಾತ್ರೆಗಳಿಗೆ ಹೊರಗಡೆ ₹ 60. ಜನೌಷಧ ಮಳಿಗೆಯಲ್ಲಿ ಕೇವಲ ₹ 8.

- ಅಮಾನುಲ್ಲಾ ಖಾನ್ ಕೋಳೂರು ನಿವಾಸಿ

ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತ ಅದರಲ್ಲೇ ಔಷಧ ಖರೀದಿಸಬೇಕು. 15 ದಿನಕ್ಕೊಮ್ಮೆ ಔಷಧ ಖರೀದಿಸುತ್ತೇವೆ. ಜನೌಷಧದಲ್ಲಿ ಔಷಧ ಖರೀದಿಸಿದರೆ ₹2500 ಉಳಿಯುತ್ತದೆ ಮೈಲಾರಪ್ಪ ಸುಂಕದ ಸರ್ಕಾರ ನಿವೃತ್ತ ನೌಕರ ಜನೌಷಧ ಕೇಂದ್ರ ಬಡವರ ಸ್ನೇಹಿಯಾಗಿದೆ.  ನನ್ನ 10 ಮಾತ್ರೆಗಳಿಗೆ ಇಲ್ಲಿ ಕೇವಲ ₹ 1

-ನಾಗರಾಜ ಕುರುಬಗೊಂಡ

ನನಗೆ 15 ದಿನಕ್ಕೊಮ್ಮೆ ಔಷಧಗಳು ಬೇಕು. ಹೊರಗಡೆ ₹ 2000ಕ್ಕೆ ದೊರೆಯುವ ಔಷಧಗಳು ಜನೌಷಧದಲ್ಲಿ ಕೇವಲ ₹ 424ಕ್ಕೆ ದೊರೆಯುತ್ತವೆ. ನಿವೃತ್ತರಿಗೆ ಮಳಿಗೆ ಹೆಚ್ಚು ಅನುಕೂಲ

-ಮಲ್ಲಿಕಾರ್ಜುನ ನರಗುಂದ ಹಾವೇರಿಯ ನಿವೃತ್ತ ನೌಕರ

ಆದೇಶ ರದ್ದುಪಡಿಸುವಂತೆ ಮಾಲೀಕರ ಒತ್ತಾಯ

‘ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಒದಗಿಸುತ್ತಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ಬಂದ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ತನ್ನ ಆದೇಶ ರದ್ದುಪಡಿಸಬೇಕು’ ಎಂದು ಹಾವೇರಿ ಜಿಲ್ಲಾ ಪ್ರಧಾನಮಂತ್ರಿ ಭಾರತೀಯ ಜನೌಷಧ ಮಳಿಗೆಗಳ ಮಾಲೀಕರ ಸಂಘ ಒತ್ತಾಯಿಸಿದೆ. ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ‌ ಧರ್ಮರಾಜ ಲಂಗೋಟಿ ‘ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳನ್ನು ಬಂದ್ ಮಾಡಿದರೆ ಬಡವರಿಗೆ ತೊಂದರೆ ಆಗಲಿದೆ. ಕೇಂದ್ರ ನಂಬಿಕೊಂಡಿರುವ ಮಾಲೀಕರು ಕೆಲಸಗಾರರು ಬೀದಿಗೆ ಬೀಳಲಿದ್ದಾರೆ’ ಎಂದರು. ‘ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡವರು ಬರುತ್ತಾರೆ. ಜನೌಷಧ ಕೇಂದ್ರ ಮುಚ್ಚಿದರೆ ಅವರಿಗೆ ಆರ್ಥಿಕ ಹೊರೆಯಾಗಲಿದೆ. ಜನೌಷಧ ಕೇಂದ್ರದಲ್ಲಿ ಜನರಿಕ್ ಹೊರತುಪಡಿಸಿ ಬೇರೆ ಕಂಪನಿಯ ಔಷಧಗಳನ್ನು ಮಾರುತ್ತಿರುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ನಿಯಮ ಉಲ್ಲಂಘಿಸುವ ಮಳಿಗೆಗಳನ್ನು ಮುಚ್ಚಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ನೈಜವಾಗಿ ಜನರಿಗೆ ಗುಣಮಟ್ಟದ ಔಷಧ ನೀಡುತ್ತಿರುವ ಕೇಂದ್ರಗಳನ್ನು ಬಂದ್ ಮಾಡಬಾರದು’ ಎಂದು ಆಗ್ರಹಿಸಿದರು.

(ಪೂರಕ ಮಾಹಿತಿ: ಮುಕ್ತೇಶ ಕೂರಗುಂದಮಠ, ಗಣೇಶಗೌಡ ಪಾಟೀಲ, ಮಾರುತಿ ಪೇಟಕರ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.