ADVERTISEMENT

ಮಹಿಳೆಯರ ಜೊತೆ ದ್ವಂದ್ವ ಯಾಕೆ?

ಹಾವೇರಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಲೇಖಕಿ ಡಾ.ಎಚ್‌.ಎಲ್. ಪುಷ್ಪಾ

ಹರ್ಷವರ್ಧನ ಪಿ.ಆರ್.
Published 19 ಜನವರಿ 2019, 12:43 IST
Last Updated 19 ಜನವರಿ 2019, 12:43 IST
ಬ್ಯಾಡಗಿಯಲ್ಲಿ ಶನಿವಾರ ಹಾವೇರಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ಲೇಖಕಿ ಡಾ.ಎಚ್‌.ಎಲ್‌. ಪುಷ್ಪಾ ಮಾತನಾಡಿದರು
ಬ್ಯಾಡಗಿಯಲ್ಲಿ ಶನಿವಾರ ಹಾವೇರಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ಲೇಖಕಿ ಡಾ.ಎಚ್‌.ಎಲ್‌. ಪುಷ್ಪಾ ಮಾತನಾಡಿದರು   

ಬ್ಯಾಡಗಿ (ಸಂತ ಕನಕದಾಸ ವೇದಿಕೆ) :ಮುಟ್ಟು ಮೈಲಿಗೆಯಲ್ಲ ಎಂದು 12 ನೇ ಶತಮಾನದಲ್ಲೇ ಶರಣರು ಸಾರಿದ್ದರೂ, ಮಾತೆ, ದೇವತೆ ಎನ್ನುವವರೇ ಮಹಿಳೆಯ ದೇವಸ್ಥಾನ ಪ್ರವೇಶ ಕುರಿತು ಗೊಂದಲ ಸೃಷ್ಟಿಸುತ್ತಿರುವುದು ಯಾಕೆ ಎಂದು ಹಿರಿಯ ಲೇಖಕಿ ಡಾ. ಎಚ್. ಎಲ್. ಪುಷ್ಪಾ ಪ್ರಶ್ನಿಸಿದರು.

ಹಾವೇರಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಟ್ಟು ಸಹಜ ಪ್ರಕ್ರಿಯೆ. ಎಲ್ಲರೂ ಅದರಿಂದಲೇ ಹುಟ್ಟಿದವರು. ಗರ್ಭ ಧರಿಸುವ, ಸಂತಾನದ ಫಲವಂತಿಕೆಯ ಈ ಪ್ರಕ್ರಿಯೆಯ ಫಲವು ಬೇಕು. ಅದರ ಪ್ರಕ್ರಿಯೆ ಹಾಗೂ ಅದನ್ನ ಹೊತ್ತವಳು ಹೊರಗೆ ಎಂಬುದೇ ವಿಪರ್ಯಾಸ ಎಂದ ಅವರು, ಅಂದು ಶರಣರು ಹೇಳಿದ್ದನ್ನು ಇಂದು ಹೇಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದರು.

ADVERTISEMENT

ಭೂಮಿ ಋತುಮತಿಯಾದ ಫಲವಂತಿಕೆಯ ಸಂಭ್ರಮವನ್ನು ತುಳುವರು 'ಕೆಡ್ಡಸ' ಎಂದು ಆಚರಿಸುತ್ತಾರೆ. ಫಲವಂತಿಕೆಯನ್ನು ಸಂಭ್ರಮವಾಗಿ ಆಚರಿಸುವುದು ನಮ್ಮ ಸಂಸ್ಕೃತಿ. ಆದರೆ, ಮಹಿಳೆ ಒಂದಕ್ಕೆ ಬೇಕು, ಇನ್ನೊಂದಕ್ಕೆ ಬೇಡ ಎನ್ನುವುದು ಒಡೆದು ಆಳುವ ನೀತಿ ಎಂದು ಖಂಡಿಸಿದರು.

ಸರ್ಕಾರಿ ಶಾಲೆಯ ಗುಣಮಟ್ಟವೇ ಉತ್ತಮವಾಗಿದ್ದರೂ, ಖಾಸಗಿ ಶಾಲೆಗಳ ವ್ಯಾಮೋಹ ಜನರಲ್ಲಿ ಹೆಚ್ಚಾಗಿದೆ. ಈ ಕುರಿತು ಚಿಂತನೆ ನಡೆಯಬೇಕಾಗಿದೆ ಎಂದರು.

ಬ್ಯಾಡಗಿಯು ಭಾವೈಕ್ಯದ ನೆಲ. ಸಂತರು, ಶರಣರು, ಸಾಹಿತಿಗಳ ಪರಂಪರೆಯು ಇಲ್ಲಿದೆ. ಇಲ್ಲಿಗೆ ಗಾಂಧಿ ಭೇಟಿ ನೀಡಿದ ನೆನಪುಗಳ ದಾಖಲೀಕರಣ ನಡೆಯಬೇಕು ಎಂದ ಅವರು,ಸಮ್ಮೇಳನ ಎಂದರೆ ಕೇವಲ ಸಾಹಿತಿಗಳಿಗೇ ಸೀಮಿತವಲ್ಲ. ಸರ್ವರನ್ನು, ಸರ್ವ ವಿಚಾರಗಳನ್ನು ಒಳಗೊಳ್ಳಬೇಕು ಎಂದರು.

ನಡೆ ಒಂದೆಡೆ, ನುಡಿ ಇನ್ನೊಂದೆಡೆ ಎನ್ನುವ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ನಮ್ಮ ಮಾತನ್ನು ನಾವೇ ನಂಬಲಾರದ ಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಶ್ನಿಸುವುದು ಜೀವಂತಿಕೆಯ ಲಕ್ಷಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.