ADVERTISEMENT

ಹಾವೇರಿ: ಬಸ್ ನಿಲ್ದಾಣಗಳಲ್ಲಿ ‘ಕ್ಯೂಆರ್ ಕೋಡ್’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:10 IST
Last Updated 16 ಮೇ 2025, 14:10 IST
ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ‘ಕ್ಯೂಆರ್‌ ಕೋಡ್’ ಅಭಿಯಾನದ ಭಿತ್ತಿಚಿತ್ರಗಳನ್ನು ಸಿಬ್ಬಂದಿ ಹಾಗೂ ಸಾರ್ವಜನಿಕರು ಬುಧವಾರ ಪ್ರದರ್ಶಿಸಿದರು
ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ‘ಕ್ಯೂಆರ್‌ ಕೋಡ್’ ಅಭಿಯಾನದ ಭಿತ್ತಿಚಿತ್ರಗಳನ್ನು ಸಿಬ್ಬಂದಿ ಹಾಗೂ ಸಾರ್ವಜನಿಕರು ಬುಧವಾರ ಪ್ರದರ್ಶಿಸಿದರು   

ಹಾವೇರಿ: ಜಿಲ್ಲೆಯ ಬಸ್‌ ನಿಲ್ದಾಣಗಳ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ದಾಖಲಿಸಿಕೊಳ್ಳಲು ಮುಂದಾಗಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ), ಕ್ಯೂಆರ್‌ ಕೋಡ್ ಅಭಿಯಾನ ಆರಂಭಿಸಿದೆ.

ವಾಕರಸಾಸಂ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ‘ನಮ್ಮ ಬಸ್ ನಿಲ್ದಾಣ, ಸ್ವಚ್ಚ ಬಸ್ ನಿಲ್ದಾಣ’ ಎಂಬ ಹೆಸರಿನಲ್ಲಿ ಅಭಿಯಾನ ಶುರು ಮಾಡಲಾಗಿದೆ. ಸಾರ್ವಜನಿಕರು ಬಸ್‌ ನಿಲ್ದಾಣಗಳಲ್ಲಿ ಲಗತ್ತಿಸಿರುವ ‘ಕ್ಯೂ ಆರ್’ ಕೋಡ ಸ್ಕ್ಯಾನ್ ಮಾಡಿ ಸ್ವಚ್ಚತೆ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಬಹುದಾಗಿದೆ.

ಹಾವೇರಿ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿದ ಹಾವೇರಿ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಕ್ಯೂಆರ್‌ ಕೋಡ್ ವ್ಯವಸ್ಥೆ ಬಗ್ಗೆಯೂ ಸಿಬ್ಬಂದಿ ಹಾಗೂ ಜನರಿಗೆ ಮಾಹಿತಿ ನೀಡಿದರು.

ADVERTISEMENT

‘ಇದೇ ಪ್ರಥಮ ಬಾರಿಗೆ ಇಂತಹ ಪ್ರಯೋಗ ಮಾಡಲಾಗುತ್ತಿದೆ. ಈ ಅಭಿಯಾನದಲ್ಲಿ ಬಸ್ ನಿಲ್ದಾಣಗಳ ಸ್ವಚ್ಚತೆ, ಶೌಚಾಲಯ ನಿರ್ವಹಣೆ, ತ್ಯಾಜ್ಯ, ವಿಲೇವಾರಿ, ಶೌಚಾಲಯದ ದರಪಟ್ಟಿ ಅಳವಡಿಕೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸಂಚಾರ ನಿಯಂತ್ರಕರು ಪ್ರಯಾಣಿಕರೊಂದಿಗೆ ಸೌಜನ್ಯದ ನಡವಳಿಕೆ ಸೇರಿ ಇತರೆ ಅಂಶಗಳ ಕುರಿತು ಮೌಲ್ಯಮಾಪನ ಮಾಡಲು ಸಾರ್ವಜನಕರಿಗೆ ಅವಕಾಶ ನೀಡಲಾಗಿದೆ’ ಎಂದರು.

‘ಅಭಿಪ್ರಾಯ, ಸಲಹೆ ಜೊತೆಗೆ ಬಸ್ ನಿಲ್ದಾಣಕ್ಕೆ ರ‍್ಯಾಂಕ್ ಸಹ ಕೊಡಬಹುದುದು. ನೀವು ಕೊಡುವ ರ‍್ಯಾಂಕ್ ಆಧಾರದ ಮೇಲೆಯೇ ಉತ್ತಮ ರೀತಿಯ ಸ್ವಚ್ಚತೆ ಕಾಪಾಡುವ ಬಸ್ ನಿಲ್ದಾಣಗಳನ್ನು ಹಾಗೂ ಅಲ್ಲಿನ ಸಿಬ್ಬಂದಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಿ ಪ್ರೊತ್ಸಾಹಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.