ADVERTISEMENT

ಹಾವೇರಿ: ಹಿರೇಅಣಜಿಯಲ್ಲಿ ‘ಶ್ರಮಿಕ ವಸತಿ ಶಾಲೆ’

ನೋಂದಾಯಿತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒತ್ತು, ಕಾರ್ಮಿಕ ಇಲಾಖೆಯ ಉಸ್ತುವಾರಿ

ಸಂತೋಷ ಜಿಗಳಿಕೊಪ್ಪ
Published 26 ಸೆಪ್ಟೆಂಬರ್ 2025, 3:08 IST
Last Updated 26 ಸೆಪ್ಟೆಂಬರ್ 2025, 3:08 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಹಾವೇರಿ: ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿರುವ ಜಿಲ್ಲೆಯ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 31 ಜಿಲ್ಲೆಗಳಲ್ಲಿ ‘ಶ್ರಮಿಕ ವಸತಿ ಶಾಲೆ’ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ವಸತಿ ಶಾಲೆ ನಿರ್ಮಿಸಲು ಬ್ಯಾಡಗಿ ತಾಲ್ಲೂಕಿನ ಹಿರೇಅಣಜಿ ಗ್ರಾಮದಲ್ಲಿ ಜಾಗ ಮಂಜೂರು ಮಾಡಲಾಗಿದೆ. 

ಕಾರ್ಮಿಕರ ಕಲ್ಯಾಣಕ್ಕೆಂದು ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಈ ಮಂಡಳಿಯ ಅಧೀನದಲ್ಲಿ ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿಯೇ ಇದೀಗ ಶ್ರಮಿಕ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ 89,844 ಕಾರ್ಮಿಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರ ಮಕ್ಕಳಿಗೂ ಆದ್ಯತೆ ಹಾಗೂ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಶ್ರಮಿಕ ಶಾಲೆಯಲ್ಲಿ ಪ್ರವೇಶಾತಿ ದೊರೆಯಲಿದೆ.

ADVERTISEMENT

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿಯೂ ನೋಂದಾಯಿತ ಕಾರ್ಮಿಕರಿದ್ದಾರೆ. ಶ್ರಮಿಕ ಶಾಲೆಯು ಆರಂಭವಾದರೆ, ಬಹುತೇಕ ಕಾರ್ಮಿಕರ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ವಸತಿಯುತ ಶಿಕ್ಷಣ ಸಿಗಲಿದೆ. ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಮಾರ್ಗಸೂಚಿ ಅನ್ವಯ ಶಾಲೆ ಸ್ಥಾಪನೆಯಾಗಲಿದ್ದು, ಉಚಿತ ಶಿಕ್ಷಣದ ವ್ಯವಸ್ಥೆ ಇರಲಿದೆ. 

‘ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಇಲಾಖೆಯ ಮಹಾತ್ವಾಕಾಂಕ್ಷೆ ಯೋಜನೆಯಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹಿರೇಅಣಜಿ ಗ್ರಾಮದಲ್ಲಿ ಶ್ರಮಿಕ ವಸತಿ ಶಾಲೆ ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಜಿಲ್ಲೆಯ ಯಾವ ಸ್ಥಳದಲ್ಲಿ ಶಾಲೆ ತೆರೆದರೆ ಸೂಕ್ತ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಜಾಗದ ಲಭ್ಯತೆ ನೋಡಿಕೊಂಡು ಹಿರೇಅಣಜಿ ಗ್ರಾಮದ ಜಾಗವನ್ನು ಗುರುತಿಸಲಾಗಿದೆ. ಕಂದಾಯ ಇಲಾಖೆಯ ಈ ಜಾಗ, ಕಾರ್ಮಿಕ ಇಲಾಖೆಗೆ ಇತ್ತೀಚೆಗೆಷ್ಟೇ ಮಂಜೂರಾಗಿದೆ. ಹಕ್ಕು ಬದಲಾವಣೆ ಹಾಗೂ ಇತರೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಎಲ್ಲ ಕೆಲಸ ಮುಗಿದು ಶಾಲೆ ಸ್ಥಾಪನೆಯಾದ ಬಳಿಕವೇ ಪ್ರವೇಶಾತಿ ಶುರುವಾಗಲಿದೆ’ ಎಂದು ತಿಳಿಸಿದರು.

ಶಾಲೆ ಕಟ್ಟಡದ ನೀಲನಕ್ಷೆ: ಬ್ಯಾಡಗಿ ತಾಲ್ಲೂಕಿನ ಹಿರೇಅಣಜಿ ಗ್ರಾಮದ ಬಳಿ ಇರುವ ಸುಮಾರು 8 ಎಕರೆ ಜಾಗವನ್ನು ಶ್ರಮಿಕ ವಸತಿ ಶಾಲೆಗೆಂದು ಗುರುತಿಸಲಾಗಿದೆ. ಅದರ ಮಂಜೂರಾತಿಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಪ್ರಸ್ತಾವದಂತೆ ಈಗಾಗಲೇ ಜಾಗ ಮಂಜೂರಾಗಿದೆ. 

‘ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹಿರೇಅಣಜಿ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸೇರಿದ್ದ ಜಾಗವನ್ನು ಗುರುತಿಸಲಾಗಿದೆ. ಜಾಗಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಈ ಜಾಗ, ಕಾರ್ಮಿಕ ಇಲಾಖೆಗೆ ಹಸ್ತಾಂತರವಾಗಬೇಕೆಂದು ಕೋರಲಾಗಿತ್ತು. ಅದಕ್ಕೆ  ಕಂದಾಯ ಇಲಾಖೆ ಸ್ಪಂದಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಜಾಗ ಮಂಜೂರಾದ ನಂತರ, ಕೆಲ ಕಾನೂನು ಪ್ರಕ್ರಿಯೆ ನಡೆಯಬೇಕು. ಶಾಲೆ ಕಟ್ಟಡದ ನೀಲನಕ್ಷೆ ಸಿದ್ಧಪಡಿಸಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಎಲ್ಲವೂ ಅಂದುಕೊಂಡಂತೆ ಆದರೆ, ಒಂದೆರೆಡು ವರ್ಷಗಳಲ್ಲಿ ಶಾಲೆ ಆರಂಭವಾಗಲಿದೆ’ ಎಂದರು.

₹ 750 ಕೋಟಿ ಖರ್ಚು: ‘ಕಾರ್ಮಿಕರ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲು 31 ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆ ತೆರೆಯಲಾಗುತ್ತಿದೆ. ಇದಕ್ಕಾಗಿ ₹ 750 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಅಧಿವೇಶನದಲ್ಲಿ ಹೇಳಿದ್ದರು.

‘ಕಟ್ಟಡ ನಿರ್ಮಾಣ ಮಾಡುವವರಿಂದ ಕಾರ್ಮಿಕರ ಹೆಸರಿನಲ್ಲಿ  ಸೆಸ್ ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಈ ಹಣವನ್ನು ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸುವಂತೆ ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಹೀಗಾಗಿ, ಕಾರ್ಮಿಕ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿ ಅವರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.