ADVERTISEMENT

346 ಕೆರೆಗಳ ಜಾಗ ಭೂಗಳ್ಳರ ಪಾಲು

2,058 ಕೆರೆ ಪೈಕಿ 1,443 ಕೆರೆಗಳ ಅಳತೆ ಪೂರ್ಣ: ಒತ್ತುವರಿ ತೆರವು ಕಾರ್ಯಾಚರಣೆ ಯಾವಾಗ; ಜನರ ಪ್ರಶ್ನೆ

ಸಂತೋಷ ಜಿಗಳಿಕೊಪ್ಪ
Published 8 ಜುಲೈ 2025, 2:57 IST
Last Updated 8 ಜುಲೈ 2025, 2:57 IST
ಹಾವೇರಿ ಜಿಲ್ಲೆಯ ಕೆರೆಯೊಂದರ ನೋಟ
ಹಾವೇರಿ ಜಿಲ್ಲೆಯ ಕೆರೆಯೊಂದರ ನೋಟ   

ಹಾವೇರಿ: ಸಕಲ ಜೀವಿಗಳಿಗೆ ಜಲವೇ ಆಧಾರ. ಜಲ ಸಂಗ್ರಹವಾಗುವ ಜಿಲ್ಲೆಯ 346 ಕೆರೆಗಳ ಜಾಗ ಭೂಗಳ್ಳರ ಪಾಲಾಗಿದ್ದು, ನಿಧಾನವಾಗಿ ಇಡೀ ಕೆರೆಗಳೇ ಮಾಯವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಕೆರೆಗಳ ವಾಸ್ತವ ಸ್ಥಿತಿಯ ಬಗ್ಗೆ ಭೂಮಾಪನಾ ಇಲಾಖೆಯ (ಡಿಡಿಎಲ್ಆರ್) ಅಧಿಕಾರಿಗಳು ಸರ್ವೇ ನಡೆಸಿದ್ದು, ಒತ್ತುವರಿಯಾದ ಕೆರೆಗಳ ಪಟ್ಟಿ ಸಿದ್ಧಪಡಿಸಿದೆ. ಯಾವೆಲ್ಲ ಭಾಗದಲ್ಲಿ ಕೆರೆಗಳು ಒತ್ತುವರಿಯಾಗಿವೆ ? ಒತ್ತುವರಿಯಾದ ಜಾಗವೆಷ್ಟು? ಎಂಬ ಮಾಹಿತಿಯನ್ನು ಪಟ್ಟಿಯೊಂದಿಗೆ ಲಗತ್ತಿಸಿದೆ.

ಕೆರೆಗಳ ಅಳತೆ ಹಾಗೂ ಒತ್ತುವರಿಗೆ ಸಂಬಂಧಪಟ್ಟ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ಅದೇ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿರುವ ಕೆರೆಗಳ ಒತ್ತುವರಿ ತೆರವು ಮಾಡುವ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ತಯಾರಿ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ADVERTISEMENT

‘ಹಾವೇರಿ, ರಾಣೆಬೆನ್ನೂರು, ಸವಣೂರು, ರಟ್ಟೀಹಳ್ಳಿ, ಶಿಗ್ಗಾವಿ, ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ ತಾಲ್ಲೂಕಿನಲ್ಲಿರುವ ಕೆರೆಗಳ ಅಳತೆ ಮಾಡಲಾಗಿದೆ. ಪ್ರತಿಯೊಂದು ತಾಲ್ಲೂಕಿನಲ್ಲೂ ಕೆರೆಗಳ ಜಾಗ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ’ ಎಂದು ಭೂ ಮಾಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯಲ್ಲಿ 2058 ಕೆರೆಗಳಿದ್ದು, 22,517 ಎಕರೆ 15 ಗುಂಟೆ ಜಾಗವಿದೆ. ಈ ಪೈಕಿ 346 ಕೆರೆಗಳ ಜಾಗ ಒತ್ತುವರಿಯಾಗಿದೆ. 1,097 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿರುವುದು ಸಮಾಧಾನಕರ ಸಂಗತಿ. ಈ ಬಗ್ಗೆ ಮಾಹಿತಿಯನ್ನು ಪುರಾವೆ ಸಮೇತ ಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಬೇರೆ ತಾಲ್ಲೂಕಿಗೆ ಹೋಲಿಸಿದರೆ, ಹಾನಗಲ್ ತಾಲ್ಲೂಕಿನಲ್ಲಿ ಅತೀ ಹೆಚ್ಚು ಕೆರೆಗಳಿವೆ. ಈ ತಾಲ್ಲೂಕಿನಲ್ಲಿ ಜಾಗದ ಒತ್ತುವರಿ ಪ್ರಮಾಣವೂ ಹೆಚ್ಚಾಗಿದೆ. ಹಿರೇಕೆರೂರು, ಬ್ಯಾಡಗಿ ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲೂ ಹೆಚ್ಚು ಕೆರೆಗಳಿವೆ. ಅಲ್ಲಿಯೂ ಒತ್ತುವರಿ ಹೆಚ್ಚಿದೆ’ ಎಂದು ತಿಳಿಸಿದರು.

615 ಕೆರೆಗಳ ಅಳತೆ ಬಾಕಿ: 2,058 ಕೆರೆಗಳ ಪೈಕಿ 1,443 ಕೆರೆಗಳ ಅಳತೆ ಮಾಡಲಾಗಿದೆ. ಇನ್ನು 615 ಕೆರೆಗಳ ಅಳತೆಯನ್ನು ಭೂಮಾಪನಾ ಇಲಾಖೆ ಬಾಕಿ ಉಳಿಸಿಕೊಂಡಿದೆ. ಈ ಕೆರೆಗಳ ಅಳತೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಹಾನಗಲ್ ತಾಲ್ಲೂಕಿನಲ್ಲಿಯೇ 505 ಕೆರೆಗಳ ಅಳತೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ತಾಲ್ಲೂಕಿನಲ್ಲಿಯೇ ಕೆಲ ಪ್ರಭಾವಿಗಳು, ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ಆರೋಪವಿದೆ. ಇದೇ ಕಾರಣಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಕೆರೆಗಳ ಅಳತೆ ಬಾಕಿ ಉಳಿಸಿಕೊಂಡಿರುವುದಾಗಿ ಜನರು ದೂರುತ್ತಿದ್ದಾರೆ.

‘ಜಿಲ್ಲೆಯಲ್ಲಿರುವ ಕೆರೆಗಳ ಜಾಗವನ್ನು ಪ್ರಭಾವಿಗಳು ಹಾಗೂ ಕೆಲ ರಾಜಕಾರಣಿಗಳೇ ಒತ್ತುವರಿ ಮಾಡಿಕೊಂಡಿರುವ ಆರೋಪವಿದೆ. ಜಿಲ್ಲಾಡಳಿತ ಹಾಗೂ ಭೂ ಮಾಪನಾ ಇಲಾಖೆಯವರು, ಪ್ರತಿಯೊಂದು ಕೆರೆಯ ಅಳತೆ ಮಾಡಿ ಭೂಗಳ್ಳರ ಹೆಸರಿನ ಸಮೇತ ಒತ್ತುವರಿ ಮಾಹಿತಿ ದಾಖಲಿಸಿಕೊಳ್ಳಬೇಕು. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

179 ಕೆರೆಗಳ ಒತ್ತುವರಿ ತೆರವು: ಜಿಲ್ಲೆಯಲ್ಲಿ ಒತ್ತುವರಿಯಾದ 346 ಕೆರೆಗಳ ಪೈಕಿ 179 ಕೆರೆಗಳ ಒತ್ತುವರಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ಈಗಾಗಲೇ ತೆರವು ಮಾಡಿದ್ದಾರೆ. ಉಳಿದ ಕೆರೆಗಳ ತೆರವಿಗೆ ಮೀನಾಮೇಷ ಎಣಿಸುತ್ತಿದ್ದಾರೆ.

ಹಾವೇರಿ, ರಾಣೆಬೆನ್ನೂರು ಹಾಗೂ ಸವಣೂರು ತಾಲ್ಲೂಕಿನಲ್ಲಿ ಕೆರೆಗಳ ಒತ್ತುವರಿಯನ್ನು ಸಂಪೂರ್ಣವಾಗಿ ತೆರವು ಮಾಡಿರುವುದು ಸಮಾಧಾನಕರ ಸಂಗತಿ. ಉಳಿದ ತಾಲ್ಲೂಕಿನಲ್ಲೂ ಕೆರೆಗಳ ಜಾಗ ತೆರವು ಕಾರ್ಯಾಚರಣೆ ಯಾವಾಗ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

‘ಭೂ ಮಾಪನಾ ಇಲಾಖೆಯವರ ಪಟ್ಟಿಯ ಪ್ರಕಾರ, ಎಲ್ಲ ಕೆರೆಗಳ ಒತ್ತುವರಿಯನ್ನು ತ್ವರಿತ ಮಾಡಬೇಕು. ಕೆಲ ಕೆರೆಗಳ ಒತ್ತುವರಿ ತೆರವು ಮಾಡಿ, ಬಹುತೇಕ ಕೆರೆಗಳ ಒತ್ತುವರಿ ತೆರವು ಮಾಡದಿರುವುದು ಖಂಡನೀಯ’ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಗಸ್ಟ್‌ನಲ್ಲಿ ಕಾರ್ಯಾಚರಣೆ ?

ಜಿಲ್ಲೆಯಲ್ಲಿರುವ ಕೆರೆಗಳ ಒತ್ತುವರಿ ಬಗ್ಗೆ ಪಟ್ಟಿ ಸಿದ್ಧವಾಗಿದ್ದು ಆಗಸ್ಟ್‌ನಲ್ಲಿ ಜಿಲ್ಲಾಡಳಿತದಿಂದ ವಿಶೇಷ ಕಾರ್ಯಾಚರಣೆ ಆರಂಭವಾಗುವ ಮಾಹಿತಿಯಿದೆ. ‘ಕೆರೆಗಳು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆರೆಗಳ ದಡದಲ್ಲಿರುವ ಕೆಲವರು ವರ್ಷದಿಂದ ವರ್ಷಕ್ಕೆ ಜಾಗ ಒತ್ತುವರಿ ಮಾಡಿಕೊಂಡು ಜಾಗ ತಮ್ಮದೆಂದು ವಾದಿಸುತ್ತಿದ್ದರು. ಭೂ ಮಾಪನಾ ಇಲಾಖೆಯಿಂದ ಅಳತೆ ಮಾಡಿಸಿದಾಗ ಒತ್ತುವರಿ ಪತ್ತೆಯಾಗಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು. ‘ಒತ್ತುವರಿ ತೆರವು ಮಾಡುವ ಬಗ್ಗೆ ರಾಜ್ಯ ಸರ್ಕಾರದಿಂದಲೂ ನಿರ್ದೇಶನವಿದೆ. ಎಲ್ಲ ಪ್ರಕ್ರಿಯೆಗಳು ಮುಗಿದರೆ ಆಗಸ್ಟ್‌ನಲ್ಲಿ ಕಾರ್ಯಾಚರಣೆ ಶುರು ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.