ಹಾವೇರಿ: ‘ಅಪಘಾತ, ಲೈಂಗಿಕ ದೌರ್ಜನ್ಯ ಸೇರಿದಂತೆ ಅರ್ಧಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಿಗೆ ಮದ್ಯ ಕುಡಿತವೇ ಕಾರಣ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು.
ನಗರದ ಲಕ್ಷ್ಮಿನಾರಾಯಣ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜನಜಾಗೃತಿ ವೇದಿಕೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘1928ನೇ ಮದ್ಯವರ್ಜನ ಶಿಬಿರ’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
‘ಮದ್ಯ ಕುಡಿತ, ಸಾಮಾಜಿಕ ಪಿಡುಗಾಗಿದೆ. ಕುಟುಂಬ, ಸಮಾಜ ಹಾಗೂ ರಾಷ್ಟ್ರದ ನೆಮ್ಮದಿಗೆ ಭಂಗವನ್ನುಂಟು ಮಾಡಿದೆ. ಮದ್ಯ ಕುಡಿತದಿಂದ ಸಮಾಜ ರೋಗಗ್ರಸ್ಥವಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಮದ್ಯಪಾನ ರಹಿತ ಸಮಾಜ ಕಟ್ಟಲು ನಾವೆಲ್ಲರೂ ಮುಂದಾಗಬೇಕಿದೆ’ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಮಾತನಾಡಿ, ‘ಮದ್ಯಪಾನಕ್ಕೆ ಅಂಟಿಕೊಂಡಿದ್ದವರನ್ನು, ಅದರಿಂದ ಮುಕ್ತಗೊಳಿಸಲು ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹನುಮಂತಗೌಡ ಕಟ್ಟೇಗೌಡರ ಮಾತನಾಡಿ, ‘ಚುನಾವಣಾ ಸಂದರ್ಭದಲ್ಲಿ ಮತದಾರರು, ಹಣ–ಮದ್ಯದ ಪ್ರಲೋಭಗಳಿಗೆ ಒಳಗಾಗುತ್ತಿದ್ದಾರೆ. ಮೋಜು, ಮಸ್ತಿ ಮಾಡುತ್ತಿರುವ ಯುವಜನತೆ, ಮದ್ಯ ಕುಡಿತದಿಂದ ಹಾಳಾಗುತ್ತಿದೆ. ಅವರಿಗೆ ಗುರು–ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನ ಅಗತ್ಯವಿದೆ. ಮದ್ಯ ಕುಡಿತವು ಮನೆ– ಮನಗಳನ್ನು ಹಾಳು ಮಾಡಿದೆ’ ಎಂದರು.
ಪ್ರಭಾಕರರಾವ್ ಮಂಗಳೂರ, ನಿಜಲಿಂಗಪ್ಪ ಬಸೇಗಣ್ಣಿ, ಮಹಾರುದ್ರಪ್ಪ ಕೋರಿ, ವೀರಭದ್ರಪ್ಪ ಗೊಡಚಿ, ಮಂಜುನಾಥ ಶೀತಾಳದ, ರಮೇಶ ಆನವಟ್ಟಿ, ಶಿವರಾಯ ಪ್ರಭು ಇದ್ದರು.
ಎಂಟು ದಿನಗಳವರೆಗೆ ನಡೆಯಲಿರುವ ಶಿಬಿರದಲ್ಲಿ 18 ವರ್ಷ ವಯಸ್ಸಿನವರಿಂದ 50 ವರ್ಷ ವಯಸ್ಸಿನ 50 ಮದ್ಯವಸನಿಗಳು ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.