ಹಾವೇರಿ: ‘ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರು’ ಎನ್ನಲಾದ ಬಾಲಕಿ ವಂದನಾ ತುಪ್ಪದ ಅವರ ಸಾವಿನ ಪ್ರಕರಣದಲ್ಲಿ ಆಸ್ಪತ್ರೆಯ ಪರವಾಗಿ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡುವುದಾಗಿ ಹೇಳಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಸರ್ಕಾರಿ ವೈದ್ಯ ಸೇರಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆಗಿದ್ದ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಗುರುರಾಜ ಭೀಮರಾಯ ಬಿರಾದಾರ ಹಾಗೂ ಇಜಾರಿಲಕಮಾಪುರದ ನಿವಾಸಿ ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ ಬಂಧಿತರು.
‘ಬಾಲಕಿ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಹಾವೇರಿಯ ಚಿರಾಯು ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ಅವರು ದೂರು ನೀಡಿದ್ದರು. ಡಿವೈಎಸ್‌ಪಿ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೈದ್ಯ ಗುರುರಾಜ ಹಾಗೂ ಚನ್ನಬಸಯ್ಯನನ್ನು ಪುರಾವೆ ಸಮೇತ ಬಂಧಿಸಲಾಗಿದೆ. ಇಬ್ಬರ ಮನೆಯಲ್ಲಿಯೂ ಶೋಧ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
‘ಬಾಲಕಿ ವಂದನಾ ಅವರ ಕೈ ಮೇಲೆ ಗುಳ್ಳೆಗಳಾಗಿದ್ದವು. ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದ ಚಿರಾಯು ಆಸ್ಪತ್ರೆಯವರು, ದಾಖಲಾತಿ ಮಾಡಿಕೊಂಡಿದ್ದರು. ಇಂಜೆಕ್ಷನ್ ಸಮೇತ ಸಲಾಯಿನ್ ಹಚ್ಚಿದ್ದರು. ಇದಾದ ನಂತರ, ವಂದನಾ ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ಕಳೆದುಕೊಂಡಿದ್ದಳು. ಗಾಬರಿಗೊಂಡ ಪೋಷಕರು, ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಬಾಲಕಿ ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಹೇಳಿದ್ದರು. ಬಳಿಕವೇ ಪೋಷಕರು ಹಾವೇರಿ ಶಹರ ಠಾಣೆಗೆ ದೂರು ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
‘ಬಾಲಕಿಯ ಮೃತದೇಹ ಜಿಲ್ಲಾಸ್ಪತ್ರೆಗೆ ತಂದಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಡಾ. ಗುರುರಾಜ ಬಿರಾದಾರ, ಮರಣೋತ್ತರ ಪರೀಕ್ಷೆ ನಡೆಸಿದ್ದರು. ಸಾವಿಗೆ ಕಾರಣವೇನು ಎಂಬ ಬಗ್ಗೆ ವರದಿ ತಯಾರಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಪರಿಚಯಸ್ಥ ಚನ್ನಬಸಯ್ಯ ಮೂಲಕ ಚಿರಾಯು ಆಸ್ಪತ್ರೆಯವರೊಂದಿಗೆ ಸಂಪರ್ಕ ಸಾಧಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಸ್ಪತ್ರೆ ಪರವಾಗಿ ನೀಡುವ ಭರವಸೆ ನೀಡಿದ್ದ ಆರೋಪಿಗಳು, ₹5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಅಷ್ಟು ಹಣವಿಲ್ಲವೆಂದು ಹೇಳಿದ್ದ ಆಸ್ಪತ್ರೆಯವರು ₹3 ಲಕ್ಷ ನೀಡುವುದಾಗಿ ತಿಳಿಸಿದ್ದರು. ಇಬ್ಬರು ಆರೋಪಿಗಳು ಶುಕ್ರವಾರ ₹3 ಲಕ್ಷ ಹಣ ಪಡೆಯಲು ಬಂದಿದ್ದಾಗ ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.