ADVERTISEMENT

ಸರಳ ಸಜ್ಜನಿಕೆ ಮಡಿವಾಳ ಸಮುದಾಯ

ಜಿಲ್ಲಾ ಗುರುಭವನದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 15:35 IST
Last Updated 6 ಮಾರ್ಚ್ 2020, 15:35 IST
ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು
ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು   

ಹಾವೇರಿ: ಮಡಿವಾಳರ ಸಮುದಾಯದವರು ಸರಳ ಸಜ್ಜನಿಕೆಯಬದುಕು ಕಟ್ಟಿಕೊಂಡವರು ಎಂದು ಬಾಲೇಹೊಸುರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರಾದ ಮಡಿವಾಳ ಮಾಚಿದೇವರು ಎಲ್ಲ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ಕೈಲಾಸವನ್ನು ಕಾಣುವಂತಹ ಪ್ರವೃತ್ತಿ ಶ್ರೇಷ್ಠ ಶರಣರಾಗಿದ್ದರು.ಸಜ್ಜನಿಕೆಗೆ ಹೆಸರಾಗಿರುವ ಮಡಿವಾಳ ಮಾಚಿದೇವರ ಬದುಕು, ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಈ ಸಮುದಾಯದಲ್ಲಿ ಉಳ್ಳವರು ಬಡವರ ಏಳಿಗೆಗೆ ಶ್ರಮಿಸಬೇಕು. ಎಲ್ಲರೂ ಒಗ್ಗೂಡಬೇಕಿದೆ. ಸಮುದಾಯದವರು ಬೆಳೆಯಬೇಕೆಂದರೆ ಪೀಠವನ್ನು ಬಲ ಪಡಿಸಬೇಕು. ಈ ಪೀಠದ ಹಿಂದೆ ನಾನು ಸದಾ ಬೆನ್ನೆಲುಬಾಗಿರುತ್ತೇನೆ ಎಂದು ಅಭಯ ನೀಡಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲಾರ ಮಹಾದೇವಪ್ಪನವರ ಜತೆಗೂಡಿ ಹೋರಾಟ ನಡೆಸಿ ವೀರಮರಣವನ್ನಪ್ಪಿದ ತಿರಕಪ್ಪ ಮಡಿವಾಳರ ಪುತ್ಥಳಿಯನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಮಾಡಬೇಕಾಗಿದೆ ಹಾಗೂ ಸಮುದಾಯಭವನ ನಿರ್ಮಾಣ ಕೆಲಸ ಆಗಬೇಕಾಗಿದೆ ಎಂದರು.

ಅಥಣಿ ತಾಲ್ಲೂಕಿನ ಝುಂಜರವಾಡ ಬಸವ ಕುಟೀರದ ಬಸವರಾಜೇಂದ್ರ ಶರಣರು ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಜತೆಗೂಡಿ ಜಾತ್ಯಾತೀತ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸುಧಾರಕ ಮಡಿವಾಳ ಮಾಚಿದೇವ ಎಂದು ಅಭಿಪ್ರಾಯಪಟ್ಟರು.

ಮಡಿವಾಳ ಮಾಚಿದೇವರು ಕೇವಲ ಬಟ್ಟೆಯ ಕೊಳೆಯನ್ನು ಮಾತ್ರವಲ್ಲದೇ ಮನಸಿನ ಕೊಳೆಯನ್ನು ತೊಳೆಯುತ್ತಾ, ಸಮಾಜದ ಮೇಲು- ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದವರು. ವಚನ ಸಾಹಿತ್ಯ ರಕ್ಷಣೆಗೆ ಶ್ರಮಿಸಿದವರು. ಈ ಸಮುದಾಯದ ಜನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ. ಮಡಿವಾಳ ಸಮಾಜಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಅದ್ದೂರಿ ಮೆರವಣಿಗೆ: ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಚಿತ್ರದುರ್ಗ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುಭವನದವರೆಗೆ ಡೊಳ್ಳು ಕುಣಿತ, ಪುರವಂತಿಕೆ ತಂಡಗಳೊಂದಿಗೆ ಕುಂಭ ಹೊತ್ತ ಮಹಿಳೆಯರು ಮೆರವಣಿಗೆ ಮೆರಗು ತಂದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಶಿಕಲಾ ಹುಡೇದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.