ADVERTISEMENT

ಮೆಡಿಕಲ್ ಕಾಲೇಜು ಕನಸಿಗೆ ಬಂತು ಜೀವ

ಯೋಜನೆಗೆ ಅಸ್ತು ಎಂದ ಮುಖ್ಯಮಂತ್ರಿ, ದೇವಗಿರಿಯಲ್ಲಿ ತಲೆ ಎತ್ತಲಿರುವ ಶಿಕ್ಷಣ ಸಂಸ್ಥೆ

ಎಂ.ಸಿ.ಮಂಜುನಾಥ
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
   

ಹಾವೇರಿ: ‘ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು’ ಎಂಬ ಬಹುದಿನಗಳ ಕನಸಿಗೆ ಈಗ ಮತ್ತೆ ಜೀವ ಬಂದಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಅಸ್ತು ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ (2012-2013) ಹಾವೇರಿಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಿಸಿದ್ದರು. ಆ ನಂತರ ಬಿರುಸಿನ ಚಟುವಟಿಕೆಗಳು ನಡೆದು ಇನ್ನೇನು ಜಿಲ್ಲೆಗೆ ಕಾಲೇಜು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ, ರಾಜಕೀಯ ಲೆಕ್ಕಾಚಾರ ಬುಡಮೇಲಾಗಿ ಯೋಜನೆಯೂ ಮೂಲೆಗುಂಪಾಗಿತ್ತು.

ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಆಡಳಿತದಲ್ಲಿ ಘೋಷಿತವಾಗಿದ್ದ ಏಳು ವೈದ್ಯಕೀಯ ಕಾಲೇಜುಗಳ ಪೈಕಿ, ಹಾವೇರಿಯೊಂದನ್ನು ಬದಿಗಿಟ್ಟು ಉಳಿದ 6 ಜಿಲ್ಲೆಗಳಿಗೆ ಹಸಿರು ನಿಶಾನೆ ನೀಡಿತ್ತು. ಐದು ವರ್ಷ ಕಾಂಗ್ರೆಸ್ ಆಡಳಿತ ಹಾಗೂ ಆನಂತರ 14 ತಿಂಗಳ ‘ಮೈತ್ರಿ’ ಆಡಳಿತದ ಕಾಲದಲ್ಲಿ ಈ ಯೋಜನೆ ಹೆಸರಿಲ್ಲದಂತೆ ಹೋಗಿತ್ತು.

ADVERTISEMENT

‘ತಮ್ಮ ಮಕ್ಕಳು ವೈದ್ಯರಾಗಬೇಕು ಎಂಬುದು ಎಷ್ಟೋ ತಂದೆ–ತಾಯಂದಿರ ಕನಸು. ವೈದ್ಯಕೀಯ ಕಾಲೇಜು ಇಲ್ಲದೇ ವಿದ್ಯಾರ್ಥಿಗಳು ಬೇರೆ ಕೋರ್ಸ್‌ಗಳನ್ನು ಸೇರುತ್ತಿದ್ದರು. ಇನ್ನು ಮುಂದೆ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಶುರುವಾಗಲಿದೆ.ನಮ್ಮ ಸರ್ಕಾರದ ಆಳ್ವಿಕೆಯಲ್ಲಿ ಘೋಷಿಸಿದ್ದ ಯೋಜನೆಯನ್ನು, ನಮ್ಮ ಸರ್ಕಾರವೇ ಪ್ರಾರಂಭಿಸುತ್ತಿರುವುದು ಸಂತಸದ ವಿಷಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.

34 ಎಕರೆ ಜಾಗ ಮೀಸಲು:

‘ಈಗಾಗಲೇ ನಗರದ ದೇವಗಿರಿ–ಯಲ್ಲಾಪುರ ವ್ಯಾಪ್ತಿಯೊಳಗೆ 53 ಎಕರೆ ಜಾಗವನ್ನು ಗುರುತಿಸಿದ್ದು, ಅದರಲ್ಲಿ ಈಗಾಗಲೇ 34 ಎಕರೆಯನ್ನು ವೈದ್ಯಕೀಯ ಕಾಲೇಜಿಗೆಂದೇ ಮೀಸಲಿಡಲಾಗಿದೆ. ಅಲ್ಲದೇ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ ಮೇರೆಗೆ ಈ ಹಿಂದೆಯೇ ತಜ್ಞರ ತಂಡಗಳೂ ಸ್ಥಳ ಪರಿಶೀಲನೆ ನಡೆಸಿ ಹೋಗಿವೆ‌’ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ರಾಜ್ಯದ ಆಡಳಿತ ಪಕ್ಷದಲ್ಲಿ ನಾಲ್ವರು ಶಾಸಕರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.ಒಬ್ಬರು ಸಂಸದರೂ ಇಲ್ಲಿನವರೇ ಆಗಿದ್ದಾರೆ. ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬಲ್ಲ ಪಕ್ಷದ ಬಲಾರ್ಢ್ಯ ನಾಯಕರೂ ಜಿಲ್ಲೆಯಲ್ಲಿದ್ದಾರೆ. ಎಲ್ಲರೂ ಒಟ್ಟಾಗಿ ಇಚ್ಛಾಶಕ್ತಿ ತೋರಿದ್ದರಿಂದಲೇ ವೈದ್ಯಕೀಯ ಕಾಲೇಜಿಗೆ ಅನುಮೋದನೆ ಸಿಕ್ಕಂತಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬಗೆಹರಿಯದ ಗೊಂದಲ:

ವಿದ್ಯಾರ್ಥಿಗಳ ಅಧ್ಯಯನದ ದೃಷ್ಟಿಯಿಂದ ವೈದ್ಯಕೀಯ ಕಾಲೇಜಿನ 5 ಕಿ.ಮೀ ವ್ಯಾಪ್ತಿಯ ಒಳಗೆ ಆಸ್ಪತ್ರೆ ಇರಬೇಕು ಎಂಬುದು ನಿಯಮ. ಆದರೆ, ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ನಗರದ ಕೇಂದ್ರ ಭಾಗದಲ್ಲಿದ್ದರೆ, ವೈದ್ಯಕೀಯ ಕಾಲೇಜು ನಿರ್ಮಿಸಲು ಗುರುತಿಸಿರುವ ಜಾಗ ಹೊರವಲಯದಲ್ಲಿದೆ.

ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ದೇವಗಿರಿ ಯಲ್ಲಾಪುರಕ್ಕೆ ಸ್ಥಳಾಂತರಿಸಿದರೆ, ಅಲ್ಲಿಗೆ ಹೋಗಲು ರೋಗಿಗಳಿಗೆ ತೊಂದರೆ ಆಗುತ್ತದೆ. ಸ್ಥಳಾಂತರ ಮಾಡದಿದ್ದರೆ, ಕಾಲೇಜಿನ ಆಸ್ಪತ್ರೆಯಲ್ಲಿ ಯಾರು ಚಿಕಿತ್ಸೆ ಪಡೆಯುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.ಮೊದಲು ಈ ಗೊಂದಲಗಳನ್ನು ಬಗೆಹರಿಸಬೇಕಿದೆ.

₹ 610 ಕೋಟಿ ಬೇಕು

‘ಹೊಸದಾಗಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂದರೆ ₹ 610 ಕೋಟಿ ಬೇಕಾಗಬಹುದು. ಸರ್ಕಾರದಿಂದಹಂತ ಹಂತವಾಗಿ ಅನುದಾನ ಮಂಜೂರು ಮಾಡಿಸಿಕೊಂಡು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.