ಹಾವೇರಿ: ‘ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ (ಹಾವೆಮುಲ್) ಹಾಲು ನೀಡುತ್ತಿರುವ ಉತ್ಪಾದಕರಿಗೆ ವಾರಕ್ಕೊಮ್ಮೆ ಬಿಲ್ ಪಾವತಿ ಮಾಡಲು ಕ್ರಮ ಜರುಗಿಸಲಾಗುವುದು’ ಎಂದು ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಭರವಸೆ ನೀಡಿದರು.
ಇಲ್ಲಿಯ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಹಾಲು ಉತ್ಪಾದಕರಿಂದಲೇ ಒಕ್ಕೂಟ ನಡೆಯುತ್ತಿದೆ. ಉತ್ಪಾದಕರ ಸರ್ವಾಂಗೀಣ ಅಭಿವೃದ್ಧಿಗೆ ಒಕ್ಕೂಟ ಬದ್ಧವಾಗಿದೆ’ ಎಂದರು.
ವಿಷಯ ಪ್ರಸ್ತಾಪಿಸಿದ್ದ ಸದಸ್ಯರೊಬ್ಬರು, ‘ನಿತ್ಯವೂ ಡೇರಿಗೆ ಹಾಲು ಹಾಕುತ್ತಿದ್ದೇವೆ. ಆದರೆ, ಸರಿಯಾಗಿ ಬಿಲ್ ಪಾವತಿ ಆಗುತ್ತಿಲ್ಲ. ಕೆಲ ಬಿಲ್‌ಗಳು ಬಾಕಿಯಿವೆ. ಹಾಲು ಉತ್ಪಾದಕರಿಗೆ ವಾರಕ್ಕೊಮ್ಮೆ ಬಿಲ್ ಪಾವತಿ ಮಾಡಿದರೆ ಅನುಕೂಲವಾಗುತ್ತದೆ’ ಎಂದರು.
ಅಕ್ರಮದ ಆರೋಪ: ‘ಧಾರವಾಡ ಹಾಲು ಒಕ್ಕೂಟದಿಂದ ವಿಭಜನೆಗೊಂಡು ಹಾವೆಮುಲ್ ಸ್ಥಾಪನೆಯಾಗಿದೆ. ಮೊದಲ ಆಡಳಿತ ಮಂಡಳಿಯ ಅಧಿಕಾರದ ಅವಧಿಯಲ್ಲಿ ಹಲವು ಅಕ್ರಮಗಳು ನಡೆದಿರುವ ಅನುಮಾನವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರಿಂದ ಹಣ ವಸೂಲಿ ಮಾಡಬೇಕು’ ಎಂದು ಕೆಲ ಸದಸ್ಯರು ಆಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜನಗೌಡ, ‘ಈ ಹಿಂದೆ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಲೆಕ್ಕ ತಪಾಸಣೆ ನಡೆದಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ರಾಸು ಖರೀದಿ, 3.50 ಕೋಟಿ ಉಳಿಕೆ: ‘2022–23ರಲ್ಲಿ ಹಾಲು ಉತ್ಪಾದಕರಿಗೆ ರಾಸು ವಿತರಣೆ ಮಾಡಲು ₹10 ಕೋಟಿ ಹಣ ಬಂದಿತ್ತು. ಆ ಪೈಕಿ ಇನ್ನೂ ₹3.50 ಕೋಟಿ ಹಣ ಉಳಿದಿದೆ. ಈ ಹಣದಲ್ಲಿ ರಾಸುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಉತ್ಪಾದಕರು ಆಗ್ರಹಿಸಿದರು.
ಅಧ್ಯಕ್ಷ ಮಂಜನಗೌಡ, ‘ರಾಸು ವಿತರಣೆಗೆ ಮೀಸಲಾತಿ ಪರಿಗಣಿಸಬೇಕು. ಹೀಗಾಗಿ, ಕೆಲ ಕಾನೂನು ತೊಡಕುಗಳಿವೆ. ಈ ಬಗ್ಗೆ ತಜ್ಞರ ಜೊತೆ ಚರ್ಚಿಸಿ, ₹ 3.50 ಕೋಟಿ ಬಳಕೆ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.
ಹಾಲಿನ ಖರೀದಿ ದರ ಏರಿಕೆಗೆ ಆಗ್ರಹ: ‘ಜಿಲ್ಲೆಯಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲಿಗೆ ಒಕ್ಕೂಟದಿಂದ ನೀಡುವ ದರ ಕಡಿಮೆಯಿದೆ. ಖಾಸಗಿ ಹಾಲಿನ ಕಂಪನಿಗಳು, ರೈತರಿಗೆ ಹೆಚ್ಚಿನ ದರ ನೀಡಿ ಹಾಲು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು, ಒಕ್ಕೂಟದ ಬದಲು ಖಾಸಗಿ ಕಂಪನಿಗಳಿಗೆ ಹಾಲು ನೀಡುತ್ತಿದ್ದಾರೆ. ಹೀಗಾಗಿ, ಒಕ್ಕೂಟದಿಂದಲೇ ಹಾಲಿನ ಖರೀದಿ ದರ ಹೆಚ್ಚಳ ಮಾಡಬೇಕು’ ಎಂದು ಉತ್ಪಾದಕರು ಆಗ್ರಹಿಸಿದರು.
ಅಧ್ಯಕ್ಷ ಮಂಜನಗೌಡ, ‘ಒಕ್ಕೂಟದಿಂದ ಉತ್ಪಾದಕರಿಗೆ ಸದ್ಯ ಹೆಚ್ಚಿನ ದರವನ್ನೇ ನೀಡಲಾಗುತ್ತಿದೆ. ದರದ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದರು.
‘ನಬಾರ್ಡ್ ಯೋಜನೆಯಡಿ ಕೆಸಿಸಿ ಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಸಾಲ ಕೊಡಿಸುವ ಕೆಲಸವನ್ನು ಒಕ್ಕೂಟ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಉತ್ಪಾದಕರು ಆಗ್ರಹಿಸಿದರು.
‘ಕಲ್ಯಾಣ ಸಂಘದ ನಿಧಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು. ಕೆಎಂಎಫ್‌ನಿಂದ ಬರಬೇಕಾದ ಸುಮಾರು ₹ 3.50 ಕೋಟಿಯನ್ನು ಆದಷ್ಟು ಬೇಗ ತರಬೇಕು’ ಎಂದು ಒತ್ತಾಯಿಸಿದರು.
ಅನಾಮಧೇಯ ಪತ್ರ, ಅಪಪ್ರಚಾರ; ‘ಒಕ್ಕೂಟದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮದ ಬಗ್ಗೆ ಪತ್ರವೊಂದು ಬಂದಿದೆ. ಇದರಲ್ಲಿರುವ ಅಂಶಗಳು ಸತ್ಯವೇ? ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು’ ಎಂದು ಕೆಲ ಸದಸ್ಯರು ಅಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜನಗೌಡ ಪಾಟೀಲ, ‘ಹಾವೆಮುಲ್‌ನಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಅನಾಮಧೇಯ ಪತ್ರವೊಂದು ಹರಿದಾಡುತ್ತಿದೆ. ಒಕ್ಕೂಟದ ಬಗ್ಗೆ ಅಪಪ್ರಚಾರ ಮಾಡಲು ಕೆಲವರು ಈ ಕೃತ್ಯ ಎಸಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇಂಥ ಸುಳ್ಳು ಆರೋಪಗಳಿಗೆ ಸದಸ್ಯರು ಕಿವಿಗೂಡಬಾರದು’ ಎಂದು ವಿನಂತಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹ ಧನದ ಸಮೇತ ಸನ್ಮಾನಿಸಲಾಯಿತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್, ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ಬಸವೇಶಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಅಶೋಕ ಪಾಟೀಲ, ಚಂದ್ರಪ್ಪ ಜಾಲಗಾರ, ತಿಪ್ಪಣ್ಣ ಸಾತಣ್ಣನವರ, ಶಶಿಧರ ಯಲಿಗಾರ ಸಭೆಯಲ್ಲಿದ್ದರು.
ಹಾಲಿನ ಖರೀದಿ ದರ ಏರಿಕೆಗೆ ಆಗ್ರಹ ಅನಾಮಧೇಯ ಪತ್ರ ಪ್ರಸ್ತಾಪ ನಬಾರ್ಡ್ ಯೋಜನೆಯಡಿ ಸಾಲಕ್ಕೆ ಒತ್ತಾಯ
ಕಾಯಂ ನೌಕರರ ನೇಮಕ: ಪಾಟೀಲ
‘ಹಾವೆಮುಲ್ ವ್ಯಾಪ್ತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿಗೆ ವೇತನ ಹಾಗೂ ಇತರೆ ಸೌಲಭ್ಯ ನೀಡುವುದರಿಂದಲೇ ಒಕ್ಕೂಟಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಅಗತ್ಯವಿರುವಷ್ಟು ಸಿಬ್ಬಂದಿಯನ್ನು ಮಾತ್ರ ಉಳಿಸಿಕೊಳ್ಳಬೇಕು’ ಎಂದು ಕೂಡಲದ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಮಾಲತೇಶ ಸೊಪ್ಪಿನ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜನಗೌಡ ಪಾಟೀಲ ‘ಒಕ್ಕೂಟದಲ್ಲಿ ಸದ್ಯ 26 ಮಂದಿ ಮಾತ್ರ ಕಾಯಂ ನೌಕರರಿದ್ದಾರೆ. ಉಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಕಾಯಂ ನೌಕರರ ನೇಮಕ ಮಾಡಿಕೊಳ್ಳಲು ಸರ್ಕಾರದ ಅನುಮತಿ ಬೇಕು. ಅದಕ್ಕಾಗಿ ಪ್ರಕ್ರಿಯೆ ಆರಂಭಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕರೆ ಅಗತ್ಯವಿರುವಷ್ಟು ನೌಕರರು ಮಾತ್ರ ಒಕ್ಕೂಟದಲ್ಲಿರುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.