ADVERTISEMENT

ಸೌಹಾರ್ದತೆ ಹಬ್ಬ ಮೊಹರಂ: ಪಂಜಾ ಪ್ರತಿಷ್ಠಾಪನೆ

* ಜಿಲ್ಲೆಯಾದ್ಯಂತ ಹಬ್ಬದ ಆಚರಣೆಗೆ ಸಿದ್ಧತೆ * ಹರಕೆ ತೀರಿಸುತ್ತಿರುವ ಹುಲಿ ವೇಷಧಾರಿಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:10 IST
Last Updated 3 ಜುಲೈ 2025, 15:10 IST
ಹಾವೇರಿ ಜಿಲ್ಲೆಯ ಶಿಗ್ಗಾವಿಯ ಗುಡ್ಡದ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಪಂಜಾಗಳು
ಹಾವೇರಿ ಜಿಲ್ಲೆಯ ಶಿಗ್ಗಾವಿಯ ಗುಡ್ಡದ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಪಂಜಾಗಳು   

ಹಾವೇರಿ: ಸೌಹಾರ್ದತೆ ಹಾಗೂ ಭಾವೈಕ್ಯದ ಮೊಹರಂ ಹಬ್ಬದ ಆಚರಣೆ ಶುರುವಾಗಿದ್ದು, ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಪಂಜಾ ಹಾಗೂ ಡೋಲಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

ಮಣ್ಣೆತ್ತಿನ ಅಮವಾಸ್ಯೆಯ ನಂತರ ಚಂದ್ರನ ದರ್ಶನವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮೊಹರಂ ಆಚರಣೆ ಶುರುವಾಗಿದೆ. ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳು ಹಾಗೂ ಬಹುತೇಕ ಗ್ರಾಮಗಳಲ್ಲಿ ‘ಪಂಜಾ’ ರೂಪದಲ್ಲಿ ದೇವರನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಮುಸ್ಲಿಂ ಹಾಗೂ ಹಿಂದೂ ಸಮುದಾಯದವರು ಒಟ್ಟಿಗೆ ಸಹೋದರ ಭಾವದಿಂದ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷ.

ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ನಾಡಿನಲ್ಲಿ ಮೊಹರಂ ಹಬ್ಬದಂದು ಪ್ರತಿಯೊಂದು ಗ್ರಾಮದಲ್ಲಿ ಭಾವೈಕ್ಯತೆಯ ವಾತಾವರಣ ಮನೆ ಮಾಡುತ್ತದೆ. ಮುಸ್ಲಿಂ ಹಾಗೂ ಹಿಂದೂಗಳು ಸಮಾನತೆಯಿಂದ ಹಬ್ಬವನ್ನು ಆಚರಿಸಿ ಮಾದರಿಯಾಗುತ್ತಿದ್ದಾರೆ.

ADVERTISEMENT

ಪಂಜಾ ಹಾಗೂ ಡೋಲಿಗಳು ಪ್ರತಿಷ್ಠಾಪನೆಯಾಗುವ ಸ್ಥಳದ ಬಳಿಯೇ ಗುಂಡಿಗಳನ್ನು ತೆಗೆಯಲಾಗಿದೆ. ಇದೇ ಗುಂಡಿಯನ್ನು ಭಕ್ತಿಯಿಂದ ಕಾಣುವ ಜನರು, ಅದಕ್ಕೆ ಕತ್ತಲ ರಾತ್ರಿಯಂದು ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ, ಹಬ್ಬದ ದಿನದಂದು ಇದೇ ಗುಂಡಿಯಲ್ಲಿ ಕಿಚ್ಚು ಹೊತ್ತಿಸುವ ಪದ್ಧತಿಯಿದೆ.

ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ಸವಣೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮೊಹರಂ ಆಚರಣೆ ಮಾಡಲಾಗುತ್ತಿದೆ. ದೇವರ ಪಂಜ, ಆಲಂ ಮತ್ತು ತಾಜಿಯುತಗಳನ್ನು ಎಲ್ಲೆಡೆಯೂ ಕೂರಿಸಿದ್ದಾರೆ. ಭಾನುವಾರ (ಜುಲೈ 6) ಹಬ್ಬದ ಕೊನೆ ದಿನವಾಗಿದ್ದು, ಅಂದು ದೇವರ ಮೆರವಣಿಗೆ ನಡೆಯಲಿದೆ.

‘ಮೊಹರಂ ಎಂಬುದು ಭಾವೈಕ್ಯದ ಹಬ್ಬ. ಇತ್ತೀಚಿನ ದಿನಗಳಲ್ಲಿ ಸಮುದಾಯಗಳ ನಡುವೆ ವೈಷಮ್ಯ ಬಿತ್ತುವ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ನಮ್ಮೂರಿನಲ್ಲಿ ಅಂಥ ವಾತಾವರಣವಿಲ್ಲ. ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಟ್ಟಿಗೆ ಸೇರಿಕೊಂಡು ಮೊಹರಂ ಆಚರಣೆ ಮಾಡುತ್ತಿದ್ದೇವೆ. ವರ್ಷಪೂರ್ತಿ ಅಣ್ಣ–ತಮ್ಮಂದಿರ ರೀತಿಯಲ್ಲಿ ಬಾಳುತ್ತಿದ್ದೇವೆ’ ಎಂದು ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮಸ್ಥರು ಹೇಳಿದರು.

ಹರಕೆ ತೀರಿಸಲು ಹುಲಿ ವೇಷ: ಮೊಹರಂ ಹಬ್ಬದ ವಿಶೇಷತೆಗಳಲ್ಲಿ ಹುಲಿ ವೇಷವೂ ಒಂದು. ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ವಿವಿಧ ಹರಕೆಗಳನ್ನು ಕಟ್ಟಿಕೊಂಡ ಭಕ್ತರು, ಹುಲಿ ವೇಷ ಧರಿಸಿ ದೇವರಿಗೆ ಅರ್ಪಣೆ ಮಾಡುತ್ತಾರೆ.

ಕಿರಿಯದಿಂದ ಹಿಡಿದು ಹಿರಿಯರವರೆಗೂ ಹಲವರು ಹುಲಿ ವೇಷ ಧರಿಸಿ ದೇವರ ಸೇವೆಯಲ್ಲಿ ನಿರತರಾಗಿದ್ದಾರೆ. ಐದು ದಿನಗಳು ಹಾಗೂ ಮೂರು ದಿನಗಳ ಲೆಕ್ಕದಲ್ಲಿ ಹುಲಿ ವೇಷ ಧರಿಸುತ್ತಿದ್ದಾರೆ. ಗ್ರಾಮ ಹಾಗೂ ನಗರದ ಮನೆಗಳು–ಅಂಗಡಿಗಳು ಹಾಗೂ ಇತರೆಡೆ ಸಂಚರಿಸುವ ಹುಲಿ ವೇಷಧಾರಿಗಳು, ಹಲಗೆಯ ಸದ್ದಿಗೆ ತಕ್ಕಂತೆ ನೃತ್ಯ ಮಾಡುತ್ತಿದ್ದಾರೆ. ಜನರು ನೀಡುವ ಹಣ ಹಾಗೂ ಪದಾರ್ಥಗಳನ್ನು ಸಂಗ್ರಹಿಸಿಕೊಂಡು, ದೇವರ ಸೇವೆಗೆ ಅರ್ಪಿಸುತ್ತಿದ್ದಾರೆ.

ಹುಲಿ ವೇಷಕ್ಕೆ ಬಣ ಹಚ್ಚುವವರಿಗೆ ಬೇಡಿಕೆ ಹೆಚ್ಚಿದೆ. ಹಾವೇರಿಯ ದೇವಗಿರಿ ಹಾಗೂ ಸವಣೂರಿನ ಮಾರುಕಟ್ಟೆ ಪ್ರದೇಶಗಳಲ್ಲಿ ಹುಲಿ ವೇಷದ ಬಣ್ಣ ಹಚ್ಚುತ್ತಿದ್ದ ದೃಶ್ಯಗಳು ಕಾಣಸಿಗುತ್ತವೆ.

‘ಮೊಹರಂ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತೇವೆ. ನಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತೇವೆ. ಅದರಂತೆ ಪ್ರತಿ ವರ್ಷವೂ ಹುಲಿ ವೇಷ ಧರಿಸುತ್ತಿದ್ದೇವೆ’ ಎಂದು ದೇವಗಿರಿಯ ಗ್ರಾಮಸ್ಥರೊಬ್ಬರು ಹೇಳಿದರು.

ಹಾವೇರಿಯ ರಾಜೇಂದ್ರನಗರದಲ್ಲಿ ಪ್ರತಿಷ್ಠಾಪಿಸಿರುವ ಪಂಜಾಗಳು
ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಹುಲಿವೇಷಧಾರಿಗಳು ಬಣ್ಣ ಹಚ್ಚಿಸಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.