
ಹಾವೇರಿ: ‘ನಗರದ ಹಲವೆಡೆ ಇಂದಿಗೂ ಸುಸಜ್ಜಿತ ರಸ್ತೆಯಿಲ್ಲ. ಉದ್ಯಾನಗಳ ಅಭಿವೃದ್ಧಿಯಾಗಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಜನರ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು’ ಎಂದು ನಿವಾಸಿಗಳು ಆಗ್ರಹಿಸಿದರು.
ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಬಜೆಟ್ ಪೂರ್ವಭಾವಿ ಸಭೆ’ಯಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು, ಸಮಸ್ಯೆಗಳನ್ನು ಬಿಚ್ಚಿಟ್ಟರು.
‘ನಗರದ ಹಳೇ ಬಡಾವಣೆಗಳಲ್ಲಿ ಸೂಕ್ತ ರಸ್ತೆಗಳಿಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ. ಇಂಥ ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.
‘ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಕೈಗಾರಿಕೆಗಳಿಲ್ಲ. ಯುವಕರು, ಊರು ತೊರೆಯುವ ಸ್ಥಿತಿ ಬಂದಿದೆ. ಸ್ಥಳೀಯವಾಗಿ ಕಾರ್ಖಾನೆಗಳನ್ನು ತೆರೆಯಲು ನಗರಸಭೆ ವಿಶೇಷ ಯೋಜನೆ ರೂಪಿಸಬೇಕು’ ಎಂದೂ ಆಗ್ರಹಿಸಿದರು.
ನೇತಾಜಿನಗರದ ಸಿದ್ದಾರೂಢ ಕಾಲೊನಿ ನಿವಾಸಿಗಳು ಮಾತನಾಡಿ, ‘ಶಾಸಕ ರುದ್ರಪ್ಪ ಲಮಾಣಿ ಅವರ ಮನೆ ಸಮೀಪದಲ್ಲಿಯೇ ಕಾಲೊನಿಯಿದೆ. 1998ರಲ್ಲಿ ಅಭಿವೃದ್ಧಿಪಡಿಸಲಾದ ಕಾಲೊನಿ, ಹಲವು ಸೌಲಭ್ಯದಿಂದ ವಂಚಿತವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ’ ಎಂದು ದೂರಿದರು.
‘ಕಾಲೊನಿಯ ಅಂಬೇಡ್ಕರ್ ಭವನ ಬಳಿ 10 ವರ್ಷಗಳ ಹಿಂದೆ ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಇದುವರೆಗೂ ನೀರಿನ ಪೂರೈಕೆಯಾಗಿಲ್ಲ. ಬಳಕೆಯಾಗದೇ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪುತ್ತಿದೆ. 1 ಎಕರೆ ಪ್ರದೇಶದಲ್ಲಿ ಉದ್ಯಾನಕ್ಕೆ ಜಾಗ ಮೀಸಲಿಡಲಾಗಿದ್ದು, ಇದುವರೆಗೂ ಉದ್ಯಾನ ನಿರ್ಮಾಣಗೊಂಡಿಲ್ಲ’ ಎಂದು ಆರೋಪಿಸಿದರು.
ಸಿ.ಸಿ.ಟಿ.ವಿ. ಕ್ಯಾಮೆರಾ ಅತ್ಯಗತ್ಯ: ‘ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆಯಿಲ್ಲ. ಕಳ್ಳತನ ಪತ್ತೆ ಮಾಡಲು ಪೊಲೀಸರಿಗೆ ಪುರಾವೆಗಳು ಬೇಗನೇ ಸಿಗುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.
ಕುಡಿಯುವ ನೀರು ಕೊಡಿ: ‘ನಿರಂತರ ನೀರು ಯೋಜನೆ ಜಾರಿ ಮಾಡಲಾಗಿದೆ. ಆದರೆ, ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಸಾಮಾನ್ಯ ನೀರನ್ನೇ 10 ದಿನದಿಂದ 15 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಕುಡಿಯುವ ನೀರು ನೀಡುವಲ್ಲಿ ನಗರಸಭೆ ವಿಫಲವಾಗಿದೆ. ಈ ಬಾರಿ ಬಜೆಟ್ ಮೂಲಕವಾದರೂ ಕುಡಿಯುವ ನೀರಿಗೆ ಪರಿಹಾರ ಸೂಚಿಸಬೇಕು’ ಎಂದು ಆಗ್ರಹಿಸಿದರು.
ಜನರ ಬೇಡಿಕೆ ಆಲಿಸಿದ ನಗರಸಭೆ ಪೌರಾಯುಕ್ತ ಎಚ್. ಕಾಂತರಾಜು, ‘ನಿವಾಸಿಗಳ ಬೇಡಿಕೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಬಜೆಟ್‌ನಲ್ಲಿ ಯಾವೆಲ್ಲ ಕೆಲಸ ಮಾಡಬೇಕು ? ಯಾವುದಕ್ಕೆ ಅನುದಾನ ನೀಡಬೇಕು ? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯದಲ್ಲೇ ಎರಡನೇ ಪೂರ್ವಭಾವಿ ಸಭೆ ಕರೆಯಲಾಗುವುದು’ ಎಂದರು.
ನಗರಸಭೆ ಮಾಜಿ ಸದಸ್ಯ ಸಂಜೀವಕುಮಾರ ನೀರಲಗಿ ಹಾಗೂ ಇತರರು ಇದ್ದರು.
‘₹ 7 ಕೋಟಿ ಬಿಲ್ ಬಾಕಿ’
‘ಹಾವೇರಿಯಲ್ಲಿ ₹7 ಕೋಟಿ ನೀರಿನ ಬಿಲ್ ಬಾಕಿಯಿದೆ. ಹಂತ ಹಂತವಾಗಿ ಅದನ್ನು ವಸೂಲಿ ಮಾಡುತ್ತಿದ್ದೇವೆ’ ಎಂದು ಪೌರಾಯುಕ್ತ ಎಚ್. ಕಾಂತರಾಜು ತಿಳಿಸಿದರು. ‘ಸರ್ಕಾರಿ ಇಲಾಖೆಗಳು ಖಾಸಗಿ ಸಂಸ್ಥೆಗಳು ಸೇರಿದಂತೆ ಹಲವರು ₹2 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದರ ವಸೂಲಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು. ‘ನಗರಸಭೆಯಿಂದ ನಿರ್ಮಿಸಿರುವ ಮಳಿಗೆಗಳ ಪೈಕಿ 65 ಮಳಿಗೆಗಳನ್ನು ಸದ್ಯದಲ್ಲೇ ಹರಾಜು ಮಾಡಲಾಗುವುದು. ಜೆ.ಪಿ. ವೃತ್ತದಲ್ಲಿರುವ ನಿರ್ಮಿಸಿರುವ ಹೈಟೆಕ್ ರಂಗ ಮಂದಿರದ ನಿರ್ವಹಣೆಯನ್ನೂ ಟೆಂಡರ್ ನೀಡಲಾಗಿದ್ದು ರಂಗ ಮಂದಿರದಲ್ಲಿ ಸದ್ಯದಲ್ಲೇ ಕಾರ್ಯಚಟುವಟಿಕೆಗಳು ಆರಂಭವಾಗಲಿವೆ’ ಎಂದರು.
ಅಧ್ಯಕ್ಷ ಸದಸ್ಯರ ಅಧಿಕಾರವಧಿ ಮುಕ್ತಾಯ
‘ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ಅಧಿಕಾರದ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿದ್ದಾರೆ. ಅವರ ನೇತೃತ್ವದಲ್ಲಿಯೇ ನಗರಸಭೆ ಕಾರ್ಯಚಟುವಟಿಕೆಗಳು ನಡೆಯುತ್ತಿವೆ’ ಎಂದು ಪೌರಾಯುಕ್ತ ಕಾಂತರಾಜು ಹೇಳಿದರು. ‘ಚುನಾಯಿತ ಸದಸ್ಯರ ಜೊತೆಯಲ್ಲಿ ನಾಮನಿರ್ದೇಶಿತ ಸದಸ್ಯರ ಅಧಿಕಾರ ಅವಧಿಯೂ ಮುಕ್ತಾಯಗೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.