ADVERTISEMENT

‘ರಟ್ಟೀಹಳ್ಳಿಗೆ ಪ್ರವೇಶ ನಿರ್ಬಂಧ; ಹೈಕೋರ್ಟ್‌ಗೆ ಅರ್ಜಿ’

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 15:52 IST
Last Updated 12 ಸೆಪ್ಟೆಂಬರ್ 2024, 15:52 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಹಾವೇರಿ: ‘ರಟ್ಟೀಹಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಹಿಂದೂ ಮಹಾಸಭಾದ ಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನನ್ನ ಮೇಲೆ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದಾರೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಟ್ಟೀಹಳ್ಳಿ ಕರ್ನಾಟಕದ ಭಾಗವೋ ಅಥವಾ ಪಾಕಿಸ್ತಾನವೋ. ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಎಲ್ಲೂ ಗಲಭೆ ಆಗಿಲ್ಲ. 28 ಪ್ರಕರಣಗಳಲ್ಲಿ ನಿರ್ದೋಷಿಯಾಗಿದ್ದೇನೆ. ಎರಡು ಪ್ರಕರಣಗಳ ವಿಚಾರಣೆ ಮಾತ್ರ ಬಾಕಿ ಇದೆ’ ಎಂದರು.

‘ಕಾಂಗ್ರೆಸ್ ನೇತೃತ್ವದ ಸರ್ಕಾರ, ಮುಸ್ಲಿಂ ಸಮುದಾಯದವರಿಗೆ ಕುಮ್ಮಕ್ಕು ನೀಡುತ್ತಿದೆ. ರಟ್ಟೀಹಳ್ಳಿ ಅಂತಹ ಸಣ್ಣ ಊರಲ್ಲಿ ನನಗೆ ನಿಷೇಧ ಹೇರುತ್ತಿದೆ’ ಎಂದರು.

ADVERTISEMENT

ಉಪ ಚುನಾವಣೆ ಬಗ್ಗೆ ಶೀಘ್ರ ನಿರ್ಧಾರ: ‘ಶಿಗ್ಗಾವಿ– ಸವಣೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತಿಳಿಸಲಾಗುವುದು’ ಎಂದು ಮುತಾಲಿಕ್ ಹೇಳಿದರು.

ಗಲಭೆಗೆ ಬೇಜವಾಬ್ದಾರಿ ಕಾರಣ: ‘ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಳೆದ ಬಾರಿಯೂ ಗಲಾಟೆ ಆಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಪೊಲೀಸ್ ಎಸ್ಪಿ, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಇವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಗಲಭೆಗೆ ಕಾರಣ’ ಎಂದು ಮುತಾಲಿಕ್ ದೂರಿದರು.

‘ಮಸೀದಿ ಎದುರು ಶಾಂತ ರೀತಿಯಾಗಿ‌ ಹೊರಟಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಜೊತೆಗೆ, ಗಲಭೆ ಸೃಷ್ಟಿಸಲಾಗಿದೆ. ಗಲಭೆಯ ಹೊಣೆ ಹೊತ್ತು ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ತನ್ನ ಅಧಿಕಾರದ ದಾಹಕ್ಕಾಗಿ ಹಿಂದೂಗಳನ್ನು ಬಲಿಪಶು ಮಾಡುತ್ತಿದೆ. ನಾಗಮಂಗಲಕ್ಕೆ ಶುಕ್ರವಾರ ಭೇಟಿ ನೀಡಿ, ಅಲ್ಲಿಯ ವಸ್ತುಸ್ಥಿತಿ ತಿಳಿದುಕೊಳ್ಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.