ADVERTISEMENT

ಕಮರಿಹೋದ ನೆಲದ ಬಳ್ಳಿ ಪಾಪು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 12:04 IST
Last Updated 17 ಮಾರ್ಚ್ 2020, 12:04 IST
ಬ್ಯಾಡಗಿಯ ಶಿಲ್ಪ ಕಲಾವಿದ ಹರೀಶ್‌ ಮಲ್ಲಪ್ಪನವರು ತಮ್ಮದೇ ಕಲಾಕೃತಿಯನ್ನು ರಚಿಸುತ್ತಿರುವುದನ್ನು ತನ್ಮಯತೆಯಿಂದ ನೋಡುತ್ತಿರುವ ಪಾಪು
ಬ್ಯಾಡಗಿಯ ಶಿಲ್ಪ ಕಲಾವಿದ ಹರೀಶ್‌ ಮಲ್ಲಪ್ಪನವರು ತಮ್ಮದೇ ಕಲಾಕೃತಿಯನ್ನು ರಚಿಸುತ್ತಿರುವುದನ್ನು ತನ್ಮಯತೆಯಿಂದ ನೋಡುತ್ತಿರುವ ಪಾಪು   

ಹಾವೇರಿ:ಈ ನೆಲದ ಕುಡಿ ಪಾಪು ನಿಧನದ ಸುದ್ದಿಇಡೀ ಕರ್ನಾಟಕವನ್ನು ಆವರಿಸಿದರೆ, ನಾಡ ತುಂಬ ಹಬ್ಬಿದ ಅವರ ನೆಲದ ಕರುಳ ಬಳ್ಳಿ ಬಾಡಿ ಬಿದ್ದಿದೆ ಎಂಬ ಭಾವ ಆವರಿಸಿದೆ.

ಹುಟ್ಟೂರು ಕುರುಬುಗೊಂಡದಿಂದ ಆರಂಭವಾದ ಪಾಪುವಿನ ಪುಟ್ಟ ಪುಟ್ಟ ಹೆಜ್ಜೆಗಳು ಹಲಗೇರಿ, ಬ್ಯಾಡಗಿ, ಹಾವೇರಿ, ಧಾರವಾಡ, ಅಮೇರಿಕಾದ ಕ್ಯಾಲಿಫೋರ್ನಿಯಾಸುತ್ತಿದ ಹೆಗ್ಗುರುತುಬಿಟ್ಟು ಹೋಗಿರುವುದು ಈಗ ಇತಿಹಾಸ.

ಒಂದು ಸಾತ್ವಿಕ ಸಿಟ್ಟು, ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ನಿಷ್ಠುರಸೆಡವು. ಅವರ ಮಾತು ಮಿಸೈಲ್ ಇದ್ದಂತೆ. ಶತ್ರು ಪಾಳಯಕ್ಕೆ ಅಥವಾ ಒಮ್ಮೊಮ್ಮೆ ಮಿತ್ರ ಪಾಳಯಕ್ಕೂ ಬೀಳಬಹುದು. ಪಾಪು ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಹಾವೇರಿ ಜನರ ಬಾಯಲ್ಲಿ ಸದಾ ಇದೆ. ಹೊಸಮನಿ ಸಿದ್ದಪ್ಪ, ಮಹಾದೇವ ಬಣಕಾರ, ಮೈಲಾರ ಮಹಾದೇವ ದಿಟ್ಟ ದನಿಗಳೊಂದಿಗೆ ಈಗ ಮತ್ತೊಂದು ದನಿ ಮೌನವಾಗಿದೆ.

ADVERTISEMENT

ರಾಜಧಾನಿಯಿಂದ ಹುಬ್ಬಳ್ಳಿಗೆ ಹೊರಟರೆ, ಹಾವೇರಿ ಒಂದು ಕಡ್ಡಾಯದ ನಿಲ್ದಾಣ. ಯಾರದೋ ಮನೆಯ ಆತಿಥ್ಯ, ಮಾತು, ಹರಟೆ, ನಗು, ನಡುನಡುವೆ ಚಾಬೂಕಿನಂತಹ ಗುದ್ದು ಈ ಎಲ್ಲ ಗುಂಗಿಟ್ಟುಗಳು ಇನ್ನು ನೆನಪಿನ ಗಂಟುಗಳು.

ಹೋದಲ್ಲಿ ಬಂದಲ್ಲಿ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್, ಅಲ್ಲಿಯ ಹುಚ್ಚಪ್ಪ ಬೆಂಗೇರಿ ಅವರು ಮತ್ತು ಶಿವರಾಮ ಕಾರಂತರು ಸಂಪಾದಿಸಿದ ಕನ್ನಡ ಕಸ್ತೂರಿ ಕೋಶ ಅದೆಲ್ಲಕ್ಕಿಂತ ಹೆಚ್ಚಾಗಿ ಹೊಸಮನಿ ಸಿದ್ಧಪ್ಪನವರ ಬಗ್ಗೆ ಮಾತನಾಡದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ.

ಇದೇ ನೆಲದ ಜ್ಞಾನ ಪೀಠ ಪುರಸ್ಕೃತ ಡಾ.ವಿ.ಕೃ. ಗೋಕಾರ ಬಗ್ಗೆ ಇನ್ನಿಲ್ಲದ ಪ್ರೀತಿ. ಗೋಕಾಕರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಡಾ.ವಿ.ಕೃ. ಗೋಕಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾಗಿ ಹಲವು ನೆನಪಿಡುವ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಹಾವೇರಿ, ಧಾರವಾಡ ಹಾಗೂ ಸವಣೂರಿನಲ್ಲಿ ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗೋಕಾಕರನ್ನು ಅವರ ನೆಲದಲ್ಲಿಯೇ ಚಿರಕಾಲ ನೆನಪುಳಿಯುವಂತೆ ಮಾಡಿದ ಕೀರ್ತಿ ಪಾಪು ಅವರದು.

ಕೆನೆ ಮೊಸರು ತಿಂದರೆ ಸಮಾಧಾನ

ಹಾವೇರಿಗೆ ಬಂದರೆ ಬಸೇಗಣ್ಣಿ ಕುಟುಂಬ, ಹಿರಿಯ ಲೇಖಕಿ ಸಂಕಮ್ಮ ಸಂಕಣ್ಣನವರ, ಎಸ್.ಎಫ್.ಎನ್. ಗಾಜೀಗೌಡ್ರ ಕಡ್ಡಾಯವಾಗಿ ಭೇಟಿಯಾಗಲೇಬೇಕು. ಸಂಗೂರಿನ ಬಸೇಗಣ್ಣಿ ಮನೆಯ ಕೆನೆ ಮೊಸರು ತಿಂದು ಹೋದರೆ ಅವರಿಗೆ ಸಮಾಧಾನ.

1983 ರಲ್ಲಿ ಉತ್ತುಂಗದಲ್ಲಿದ್ದ ಗೋಕಾಕ ಚಳವಳಿಯ ಸಂದರ್ಭದಲ್ಲಿ ಹಾವೇರಿಗೆ ಡಾ. ರಾಜಕುಮಾರರೊಂದಿಗೆ ಬಂದಾಗ ‘ಇದೆ ನೋಡ್ರಿ ನಾ ಕಲತ್‌ ಸಾಲಿ’ ಎಂದು ಡಾ. ರಾಜ್ ಗೆ ಮುನ್ಸಿಫಲ್ ಹೈಸ್ಕೂಲ್ ತೋರಿಸಿದ್ದರು.
ಒಂದುಬಾರಿ ಇಲ್ಲಿಯ ಕೆ.ಇ.ಬಿ ನೌಕರರ ಸಂಘದ ಕಚೇರಿಗೆ ಭೇಟಿ ಕೊಟ್ಟು, ಆವರಣದಲ್ಲಿರುವ ಕಾರ್ಮಿಕ ಸ್ಮಾರಕವನ್ನು ನೋಡಿ ಸಾಂಸ್ಕೃತಿಕ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಕಾರ್ಮಿಕ ಸಂಘದಿಂದ ಕಲಿಯಬೇಕು ಎಂದು ಸಂದರ್ಶನ ಪುಸ್ತಕದಲ್ಲಿ ಬರೆದಿರುವರು. ಹಾವೇರಿ ಒಡಲಿನೊಂದಿಗೆ ನೂರಾರು ನೆನಪುಗಳ ಸುರಳಿ ಬಿಟ್ಟು ಹೋದ ಪಾಪು ಇನ್ನಿಲ್ಲವೆಂದು ಊಹಿಸುವುದು ಅಸಾಧ್ಯ.

ಮ್ಯೂಸಿಯಂ ಪಾಪು ಕನುಸು

ಹಾವೇರಿಯ ಗುರುಭವನದೆದರು ಗೋಕಾಕರ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗ ಕನ್ನಡದ ಗುರು ಗೋಕಾಕರ ಮೂರ್ತಿ ಎಂದು ಉದ್ಘರ್ಷಿಸಿದ್ದರು. ಅತ್ಯಂತ ಸ್ಮರಣೀಯ ಕೆಲಸವೆಂದರೆ ₹3.5 ಕೋಟಿ ಅಂದಾಜಿನ ಗೋಕಾಕ್ ಭವನದ ಕೆಲಸ. ಈಗಾಗಲೇ ಅದು ಸಿದ್ಧವಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿಂದಿನ ವರ್ಷ ಉದ್ಘಾಟಿಸಿದ್ದರು. ಗೋಕಾಕರ ಫೋಟೊ ಗ್ಯಾಲರಿ, ಅವರು ಬಳಸುತ್ತಿದ್ದ ಸಾಮಗ್ರಿಗಳ ಮ್ಯೂಜಿಯಂ, ಸಮಗ್ರ ಸಾಹಿತ್ಯ ಗ್ರಂಥಾಲಯ ಮುಂತಾದವನ್ನು ಪೂರ್ಣಗೊಳಿಸುವ ಕನಸು ಪಾಪು ಅವರದ್ದಾಗಿತ್ತು.

– ಸತೀಶ ಕುಲಕರ್ಣಿ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.