ADVERTISEMENT

ವಿಲೇವಾರಿ ಕೆಲಸ ಸ್ಥಗಿತ: ಎಲ್ಲೆಲ್ಲೂ ಕಸದ ರಾಶಿ

ಪೌರ ನೌಕರರ ಮುಷ್ಕರ ಮುಂದುವರಿಕೆ * ನಗರಸಭೆ ಕೆಲಸವೂ ಬಂದ್

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:27 IST
Last Updated 30 ಮೇ 2025, 16:27 IST
ಹಾವೇರಿಯ ರಜಪೂತ ಗಲ್ಲಿಯಲ್ಲಿ ಶುಕ್ರವಾರ ಕಂಡುಬಂದ ಕಸದ ರಾಶಿ
ಹಾವೇರಿಯ ರಜಪೂತ ಗಲ್ಲಿಯಲ್ಲಿ ಶುಕ್ರವಾರ ಕಂಡುಬಂದ ಕಸದ ರಾಶಿ   

ಹಾವೇರಿ: ‘ಸರ್ಕಾರಿ ನೌಕರರೆಂದು ಪರಿಗಣಿಸಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಮೂರನೇ ದಿನ ಪೂರೈಸಿದ್ದು, ನೌಕರರ ಗೈರು ಹಾಜರಾತಿಯಿಂದಾಗಿ ನಗರದ ಹಲವೆಡೆ ಕಸದ ರಾಶಿ ಹೆಚ್ಚಾಗಿದೆ.

ಇಲ್ಲಿಯ ನಗರಸಭೆ ಅಧೀನದಲ್ಲಿ ಕೆಲಸ ಮಾಡುವ 250ಕ್ಕೂ ಹೆಚ್ಚು ನೌಕರರು, ಕೆಲಸಕ್ಕೆ ಗೈರಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ನಗರಸಭೆ ಎದುರು ಹಾಕಿರುವ ಪೆಂಡಾಲ್‌ನಲ್ಲಿ ಕುಳಿತು, ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಶುಕ್ರವಾರವೂ ತಮಟೆ ಬಾರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಕಸ ಸಂಗ್ರಹ ವಾಹನದ ಚಾಲಕರು, ಲೋಡರ್ಸ್ ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ, ಸೂಪರ್‌ವೈಸರ್, ಯುಜಿಡಿ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರೂ ತಮ್ಮ ಕೆಲಸದಿಂದ ದೂರವುಳಿದಿದ್ದು, ಎರಡು ದಿನಗಳಿಂದ ನಗರದಲ್ಲಿ ಸಂಗ್ರಹವಾದ ಕಸ ಇದ್ದ ಜಾಗದಲ್ಲೇ ಇದೆ.

ADVERTISEMENT

ನಗರದಲ್ಲಿ ನಿತ್ಯವೂ ಕಸಗೂಡಿಸುತ್ತಿರುವ ಪೌರ ಕಾರ್ಮಿಕರು, ರಸ್ತೆ ಬದಿಯಲ್ಲಿ ರಾಶಿ ಹಾಕುತ್ತಿದ್ದಾರೆ. ಇದೇ ರಾಶಿಯನ್ನು ವಾಹನದ ಚಾಲಕರು ಹಾಗೂ ಲೋಡರ್ಸ್‌ ಕ್ಲೀನರ್ಸ್‌ಗಳು ವಿಲೇವಾರಿ ಮಾಡುತ್ತಿದ್ದಾರೆ. ಮನೆಯಿಂದ ಸಂಗ್ರಹಿಸುವ ಕಸವನ್ನು ಸಹ ಇವರೇ ವಿಲೇವಾರಿ ಮಾಡುತ್ತಿದ್ದಾರೆ. ಈಗ ಮುಷ್ಕರ ಕೈಗೊಂಡಿರುವುದರಿಂದ, ರಸ್ತೆಯಲ್ಲಿಯೇ ಕಸದ ರಾಶಿ ಉಳಿದಿದೆ. ಮನೆಗಳಿಗೂ ವಾಹನ ಬರುವುದು ಬಂದ್ ಆಗಿದೆ. ಹಲವು ಮನೆಗಳ ಡಬ್ಬಿಗಳಲ್ಲಿ ಕಸ ಉಳಿದುಕೊಂಡಿದೆ.

ಹಾವೇರಿಯಲ್ಲಿ ಗುರುವಾರ ಸಂತೆ ನಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಆದರೆ, ವಿಲೇವಾರಿಯಾಗದೇ ಸಂತೆ ಜಾಗದಲ್ಲಿಯೇ ಕಸ ಬಿದ್ದಿದೆ. ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆ, ಹಳೇ ಪಿ.ಬಿ. ರಸ್ತೆ, ಎಂ.ಜಿ.ರಸ್ತೆ, ಗುತ್ತಲ ರಸ್ತೆ, ಬಸವೇಶ್ವರನಗರ, ಅಶ್ವಿನಿನಗರ, ಶಿವಾಜಿನಗರ, ಇಜಾರಿ ಲಕಮಾಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿಯೂ ರಸ್ತೆ ಮೇಲೆಯೇ ಕಸದ ರಾಶಿಯಿದೆ.

ಮೂರು ದಿನಗಳ ಮುಷ್ಕರದ ಸಂದರ್ಭದಲ್ಲಿ ಶೇ 50ರಷ್ಟು ನೌಕರರು ಮಾತ್ರ ಕೆಲಸಕ್ಕೆ ಗೈರಾಗಿದ್ದರು. ಶುಕ್ರವಾರದಿಂದ ಶೇ 100ರಷ್ಟು ನೌಕರರು ಕೆಲಸದಿಂದ ಗೈರಾಗುವ ನಿರ್ಣಯ ಕೈಗೊಂಡಿದ್ದಾರೆ. ಇದರಿಂದಾಗಿ ಶನಿವಾರದಿಂದ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳಲಿದೆ.

ಕಸದ ರಾಶಿ ಇರುವ ಜಾಗದಲ್ಲಿ ದುರ್ನಾತ ಬರುತ್ತಿದ್ದು, ಕಸ ವಿಲೇವಾರಿಯಾಗದಿದ್ದರಿಂದ ದುರ್ನಾತ ಹೆಚ್ಚಾಗುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

‘ಹಾವೇರಿಯಲ್ಲಿ ಮೊದಲೇ ಸ್ವಚ್ಛತೆ ಕೊರತೆ ಸಾಕಷ್ಟಿದೆ. ಇದರ ನಡುವೆಯೇ ಈಗ ಎಲ್ಲೆಂದರಲ್ಲಿ ಕಸದ ರಾಶಿ ಹೆಚ್ಚಾಗಿದೆ. ಕೂಡಲೇ ಕಸದ ರಾಶಿಯನ್ನು ವಿಲೇವಾರಿ ಮಾಡಬೇಕು. ಮನೆಯಿಂದ ಕಸ ಸಂಗ್ರಹಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ, ಸಾಕಷ್ಟು ಸಮಸ್ಯೆ ಉಂಟಾಗಲಿದೆ’ ಎಂದು ಎಂ.ಜಿ.ರಸ್ತೆಯ ವ್ಯಾಪಾರಿ ರತನ್‌ ಅಳಲು ತೋಡಿಕೊಂಡರು.

ಜನರಿಗೆ ಸಮಸ್ಯೆ ಮಾಡುವ ಉದ್ದೇಶವಿಲ್ಲ: ‘ನಾವೆಲ್ಲರೂ ನಗರ ನಿವಾಸಿಗಳ ಸೇವೆ ಮಾಡುತ್ತಿದ್ದೇವೆ. ನಗರವನ್ನು ನಿತ್ಯವೂ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದೇವೆ. ಈಗ ನಮ್ಮ ಬೇಡಿಕೆಗಾಗಿ ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದೇವೆ. ಜನರಿಗೆ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ನಿರಂತರ’ ಎಂದು ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಹಾಂತೇಶ ತಿಗಣ್ಣನವರ ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ ಬಿದರಿ ಪ್ರತಿಕ್ರಿಯಿಸಿ, ‘ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು. ಜ್ಯೋತಿ ಸಂಜೀವಿನಿ ಯೋಜನೆಯನ್ನು ಪೌರ ನೌಕರರಿಗೂ ಒದಗಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ನೀರು ಸರಬರಾಜು ಚಾಲಕರು, ಲೋಡರ್ಸ್ ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ, ಸೂಪರ್‌ವೈಸರ್, ಯುಜಿಡಿ ಸಹಾಯಕರನ್ನು ನೇರ ವೇತನ ಪಾವತಿ ವ್ಯಾಪ್ತಿಗೆ ಸೇರಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ’ ಎಂದರು.

ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿದ್ದ ಕಸದ ರಾಶಿ
ಹಾವೇರಿಯ ಗಾಂಧಿ ವೃತ್ತದಲ್ಲಿದ್ದ ಕಸದ ರಾಶಿ
ಹಾವೇರಿಯ ಕಾಗಿನೆಲೆ ವೃತ್ತದಲ್ಲಿದ್ದ ಕಸದ ರಾಶಿ
ಶಿಗ್ಗಾವಿ ಪಟ್ಟಣದ ಪುರಸಭೆ ಮುಂದೆ ಪುರಸಭೆ ಮುಂದೆ ಶುಕ್ರವಾರ ಪೌರ ನೌಕರರು ನಾಲ್ಕು ದಿನಗಳಿಂದ ನಡೆಸಿದ ಪ್ರತಿಭಟನೆಯಿಂದ ಸಂತೆ ಮೈದಾನದಲ್ಲಿ ಬಿದ್ದಿರುವ ಕಸದ ರಾಶಿ

ಕಂಡ ಕಂಡಲಿ ಕಸದ ರಾಶಿ

ಶಿಗ್ಗಾವಿ: ಕಳೆದ ನಾಲ್ಕು ದಿನಗಳಿಂದ ಪುರಸಭೆ ಪೌರ ನೌಕರರು ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಪಟ್ಟಣದ ಬೀದಿ ಬೀದಿಗಳಲ್ಲಿ ಕಸದ ರಾಶಿ ಕಂಡು ಬರುತ್ತಿದೆ.  ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜಿಟಿಜಿಟಿ ಮಳೆ ಸುರಿಯುತ್ತಿದೆ. ರಸ್ತೆ ಮೇಲೆ ನೀರು ನಿಲ್ಲುವಂತಾಗಿದೆ. ಹೀಗಾಗಿ ಡೆಂಗಿ ಮಲೇರಿಯಾ ರೋಗ ಹರಡುವ ಭಯಬೀತಿ ಜನರಲ್ಲಿ ಕಾಡುತ್ತಿದೆ. ಮುಂದಿನ ದಿನದಲ್ಲಿ ನೀರು ಮತ್ತು ವಿದ್ಯುತ್ ದೀಪಗಳನ್ನು ಹಚ್ಚುವ ಕಾರ್ಯಗಳು ನಿಲ್ಲವ ಸಂಭವವಿದೆ. ಹೀಗಾಗಿ ಪಟ್ಟಣದ ಜನರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಗುರುತಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ವಿವಿಧ ಸಂಘಟನೆ ಪದಾಧಿಕಾರಿಗಳು ಸಹ ಪೌರನೌಕರರ ಮುಷ್ಕರಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ಸಂತೆ ಮೈದಾನದಲ್ಲಿ ಸಂತೆಯಾದ ಮರುದಿನ ಸ್ವಚ್ಚತೆ ಮಾಡಬೇಕು. ಆದರೆ ಪೌರ ನೌಕರರ ಮುಷ್ಕರದಿಂದ ಇಡೀ ಸಂತೆ ಮೈದಾನ ಕಸದ ರಾಶಿಯಾಗಿದೆ. ಸಂತೆ ದಿನ ಚಲ್ಲಿದ ತ್ಯಾಜ್ಯ ವಸ್ತು ವಿಲೇವಾರಿಯಾಗದೆ ಗಬ್ಬು ವಾಸನೆ ಹರಡುತ್ತಿದೆ. ಪಟ್ಟಣದ ಜನರ ಆರೋಗ್ಯ ಮುಖ್ಯ. ಹಾಗಾಗಿ ಮಹಿಳಾ ಸಂಘಟನೆಗಳು ಸಹ ಪೌರನೌಕರರ ಮುಷ್ಕರಕ್ಕೆ ಬೆಂಬಲಿಸುವುದಾಗಿ ಪಟ್ಟಣದ ನಿವಾಸಿ ನೀಲಮ್ಮ ಸಣ್ಣಮನಿಯವರ ಎಚ್ಚರಿಕೆ ನೀಡಿದರು. ‘ಸಾರ್ವಜನಿಕರ ಹಿತದೃಷ್ಟಿಯಿಂದ ಈವರೆಗೆ ನೀರು ವಿದ್ಯುತ್ ಸೇರಿದಂತೆ ಅವಶ್ಯ ಕಾರ್ಯ ಮಾಡಲಾಗಿದೆ. ಆದರೆ ಸರ್ಕಾರ ಈ ವರೆಗೆ ಯಾವುದೇ ಭರವಸೆ ನೀಡಿಲ್ಲ. ಇದೇ ರೀತಿ ಮುಂದುವರೆದರೆ ಮುಂದಿನ ದಿನದಲ್ಲಿ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಲಾಗುವುದು’ ಎಂದು ಪೌರನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶೈಲಜಾ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.